ಮಂಗಳವಾರ, ಫೆಬ್ರವರಿ 18, 2020
20 °C
ಪರಾಜಿತರು 500ರ ಗಡಿ ದಾಟಿದ್ದು ಕೆಲವೇ ಕಡೆಗಳಲ್ಲಿ

ಹಲವೆಡೆ ‘ಮೂರಂಕಿ’ ತಲುಪದ ಕಾಂಗ್ರೆಸ್‌!

ಎಂ. ಮಹೇಶ Updated:

ಅಕ್ಷರ ಗಾತ್ರ : | |

prajavani

ಬೆಳಗಾವಿ: ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ ಮತ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದರಿಂದ ತೀವ್ರ ಮುಖಭಂಗ ಅನುಭವಿಸಿರುವ ಕಾಂಗ್ರೆಸ್‌ ಮುಖಂಡರು, ಯಾವ್ಯಾವ ಮತಗಟ್ಟೆಗಳಲ್ಲಿ ಪಕ್ಷಕ್ಕೆ ಅತ್ಯಂತ ಕಡಿಮೆ ಮತಗಳು ಬಂದಿವೆ. ಇದಕ್ಕೆ ಕಾರಣವಾದ ಅಂಶಗಳೇನು ಎನ್ನುವ ವಿಶ್ಲೇಷಣೆ ಆರಂಭವಾಗಿದೆ. ಹಲವು ಮತಗಟ್ಟೆಗಳಲ್ಲಿ ಅಂದರೆ, ಗ್ರಾಮ ಹಾಗೂ ಬಡಾವಣೆಗಳಲ್ಲಿ ‘ಕಳಪೆ ಸಾಧನೆ’ ಆಗಿರುವುದು ಇದಕ್ಕೆ ಕಾರಣವಾಗಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಕ್ಷೇತ್ರಗಳಲ್ಲಿ ಬಿಜೆಪಿಯು ಕಮಲ ಅರಳಿಸಿದೆ. ಹಲವು ಕಡೆಗಳಲ್ಲಿ ಕಾಂಗ್ರೆಸ್‌ ಮೂರಂಕಿ ತಲುಪುವುದಕ್ಕೂ ಸಾಧ್ಯವಾಗಿಲ್ಲ.

‘ಇದು ಕಾಂಗ್ರೆಸ್‌ನ ಬೇರುಗಳು ಸಡಿಲಗೊಂಡಿರುವುದರ ಸಂಕೇತ ಮತ್ತು ಜಿಲ್ಲೆಯಲ್ಲಿರುವ ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎನ್ನುವ ಸಂದೇಶ ರವಾನಿಸಿದೆ. ಇಲ್ಲಿ ಕಾಂಗ್ರೆಸ್‌ ಒಡೆದ ಮನೆಯಾಗಿರುವುದರಿಂದಾಗಿ ಈ ರೀತಿಯ ಹೀನಾಯ ಸೋಲು ಉಂಟಾಗಿದೆ. ಇನ್ನಾದರೂ ಸಂಘಟನೆ ಬಲಪಡಿಸದಿದ್ದಲ್ಲಿ ಹಾಗೂ ಮುಖಂಡರು ವೈಯಕ್ತಿಕ ಪ್ರತಿಷ್ಠೆಗಳನ್ನು ಮರೆತು ಒಂದಾಗಿ ಹೆಜ್ಜೆ ಹಾಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಲಿದೆ’ ಎಂದು ಆ ಪಕ್ಷದ ಮುಖಂಡರೊಬ್ಬರು ಪ್ರತಿಕ್ರಿಯಿಸಿದರು.

ಕ್ಷೇತ್ರಗಳ ಚಿತ್ರಣ:

ಅಥಣಿಯಲ್ಲಿ 260 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಪೈಕಿ ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಗಜಾನನ ಮಂಗಸೂಳಿ ಅವರಿಗೆ ಬರೋಬ್ಬರಿ 12 ಮತಗಟ್ಟೆಗಳಲ್ಲಿ ಎರಡಂಕಿಯ ಮತಗಳಷ್ಟೇ ದೊರೆತಿವೆ! ಕಾಂಗ್ರೆಸ್‌ನ ಮತಗಳಿಕೆ 500 ಮೀರಿರುವುದು ಕೇವಲ 2 (ಮತಗಟ್ಟೆ ಸಂಖ್ಯೆ 30 ಹಾಗೂ 69) ಮತಗಟ್ಟೆಗಳಲ್ಲಷ್ಟೆ! ವಿಜೇತರಾದ ಮಹೇಶ ಕುಮಠಳ್ಳಿ ಅವರಿಗೆ ಮತಗಟ್ಟೆ ಸಂಖ್ಯೆ 68ರಲ್ಲಷ್ಟೇ ಎರಡಂಕಿ ಮತಗಳು (92) ಬಂದಿವೆ. ಉಳಿದಂತೆ ಮತಗಳ ಹಂಚಿಕೆಯಲ್ಲಿ ಎಲ್ಲ ಮತಗಟ್ಟೆಗಳಲ್ಲೂ ಅವರು ಸಿಂಹಪಾಲು ಪಡೆದಿದ್ದಾರೆ.

ವಿಶೇಷವೆಂದರೆ, 5 ಮತಗಟ್ಟೆಗಳಷ್ಟೇ ‘ನೋಟಾ’ಗೆ ಯಾರೂ ಮತ ಹಾಕಿಲ್ಲ. ಉಳಿದ 255 ಮತಗಟ್ಟೆಗಳಲ್ಲೂ ಸರಾಸರಿ 1ರಿಂದ 8 ಮತದಾರರು ‘ಕಣದಲ್ಲಿರುವ ಯಾರಿಗೂ ನನ್ನ ಮತವಿಲ್ಲ’ ಎನ್ನುವ ಪ್ರತಿರೋಧದ ದನಿ ದಾಖಲಿಸಿದ್ದಾರೆ. ನೀವ್ಯಾರೂ ನಮ್ಮ ಮತ ಪಡೆಯಲು ‘ಅರ್ಹತೆ’ ಗಳಿಸಿಲ್ಲ ಎನ್ನುವ ಸಂದೇಶ ರವಾನಿಸಿದ್ದಾರೆ.

ಪ್ರಾಬಲ್ಯ ಗಟ್ಟಿಯಾಗಿದೆ:

ಗೋಕಾಕ ಕ್ಷೇತ್ರದಲ್ಲಿ 228 ಮತಗಟ್ಟೆಗಳಿದ್ದವು. ಅಲ್ಲಿ ಗೆದ್ದಿರುವ ಬಿಜೆಪಿಯ ರಮೇಶ ಜಾರಕಿಹೊಳಿ ಒಂದು ಮತಗಟ್ಟೆಯಲ್ಲಷ್ಟೇ (ಮತಗಟ್ಟೆ ಸಂಖ್ಯೆ 133) ಎರಡಂಕಿ ಅಂದರೆ 87 ಮತಗಳನ್ನಷ್ಟೇ ಗಳಿಸಿದ್ದಾರೆ. ಉಳಿದಂತೆ ಎಲ್ಲ ಮತಗಟ್ಟೆಗಳಲ್ಲೂ ಅವರು ಹೆಚ್ಚಿನ ‘ಪಾಲು’ ತಮ್ಮದಾಗಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಅವರತ ಪ್ರಾಬಲ್ಯದ ಬೇರು ಗಟ್ಟಿಯಾಗಿದೆ ಎನ್ನುವುದನ್ನು ಫಲಿತಾಂಶ ನಿರೂಪಿಸಿದೆ.

ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಲಖನ್‌ ಜಾರಕಿಹೊಳಿಗೆ ಬರೋಬ್ಬರಿ 32 ಮತಗಟ್ಟೆಗಳಲ್ಲಿ ಎರಡಂಕಿ ಮತಗಳಷ್ಟೇ ಸಿಕ್ಕಿವೆ! 3 ಕಡೆಗಳಲ್ಲಷ್ಟೇ 500ರ ಗಡಿ ದಾಟಿದ್ದಾರೆ. ಜೆಡಿಎಸ್‌ನ ಅಶೋಕ ಪೂಜಾರಿ ಮೂರಂಕಿಗಿಂತ ಎರಡಂಕಿತ ಮತಗಳಿಕೆಯೇ ಜಾಸ್ತಿ ಇದೆ. ಜೊತೆಗೆ, ಹಲವು ಕಡೆಗಳಲ್ಲಿ ಒಂದಂಕಿಯ ಮತಗಳನ್ನಷ್ಟೇ ಪಡೆದುಕೊಂಡಿದ್ದಾರೆ. ಕಣದಲ್ಲಿದ್ದ ಯಾವ ಅಭ್ಯರ್ಥಿಯನ್ನೂ 1,153 ಮಂದಿ ಬೆಂಬಲಿಸಿಲ್ಲ (ಇವರು ನೋಟಾ  ಚಲಾಯಿಸಿದ್ದಾರೆ).

ಕಾಗವಾಡ ಕ್ಷೇತ್ರದಲ್ಲಿ 231 ಮತಗಟ್ಟೆಗಳಲ್ಲೂ ಬಿಜೆಪಿಯ ಶ್ರೀಮಂತ ಪಾಟೀಲ ಅವರಿಗೆ ಜನರಿಂದ ಹೆಚ್ಚಿನ ಮತಗಳು ಹಂಚಿಕೆಯಾಗಿವೆ. ಅವರು, ಒಂದು ಮತಗಟ್ಟೆಯಲ್ಲಷ್ಟೇ (ಸಂಖ್ಯೆ 75) ಒಂದಂಕಿಯ ಮತಗಳನ್ನು (95) ಪಡೆದಿದ್ದಾರೆ. ಪ್ರತಿಸ್ಪರ್ಧಿ ಭರಮಗೌಡ (ರಾಜು) ಕಾಗೆ 5 ಮತಗಟ್ಟೆಗಳಲ್ಲಿ ಎರಡಂಕಿಗಳನ್ನು ದಾಟುವುದು ಸಾಧ್ಯವಾಗಿಲ್ಲ. ಅಲ್ಲಿ ‘ನೋಟಾ’ಕ್ಕೆ 1ರಿಂದ ಗರಿಷ್ಠ 17ರವರೆಗೆ ಮತಗಳು (ಒಟ್ಟು 1,238) ಬಂದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು