ಉಮೆಶ್‌ ಜಾಧವ್ ರಾಜೀನಾಮೆ ಅಂಗೀಕಾರವಾಗದು: ಸಿದ್ದರಾಮಯ್ಯ

ಗುರುವಾರ , ಮಾರ್ಚ್ 21, 2019
26 °C
ಮಂಡ್ಯ ಸೀಟು ಕಾಂಗ್ರೆಸ್‌ಗೆ ಸಿಗದ ಕಾರಣ ಸುಮಲತಾ ಅವರಿಗೆ ಟಿಕೆಟ್ ಕೊಡುವ ಪ್ರಶ್ನೆ ಉದ್ಭವಿಸದು

ಉಮೆಶ್‌ ಜಾಧವ್ ರಾಜೀನಾಮೆ ಅಂಗೀಕಾರವಾಗದು: ಸಿದ್ದರಾಮಯ್ಯ

Published:
Updated:

ಹುಬ್ಬಳ್ಳಿ: ‘ಅನರ್ಹತೆ ಕೋರಿ ಸ್ಪೀಕರ್‌ಗೆ ಸಲ್ಲಿಸಿರುವ ಅರ್ಜಿ ಇನ್ನೂ ಇತ್ಯರ್ಥವಾಗದ ಕಾರಣ ಶಾಸಕ ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗದು’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಉಮೇಶ್ ಜಾಧವ್ ಸೇರಿ ನಾಲ್ವರು ಶಾಸಕರ ವಿರುದ್ಧ ದೂರು ನೀಡಡಿದ್ದೇನೆ. ನನಗೆ ಇರುವ ತಿಳಿವಳಿಕೆ ಪ್ರಕಾರ ಅದು ಇತ್ಯರ್ಥವಾಗದೆ ರಾಜೀನಾಮೆ ಅಂಗೀಕರಿಸಲು ಆಗದು. ಅಷ್ಟಕ್ಕೂ ಅದು ಸ್ಪೀಕರ್ ವಿವೇಚನೆಗೆ ಬಿಟ್ಟ ವಿಷಯ' ಎಂದು ಅವರು ಅಭಿಪ್ರಾಯಪಟ್ಟರು.

‘ಜಾಧವ್ ಆಪರೇಷನ್‌ ಕಮಲ ಆಸೆ– ಅಮಿಷಗಳಿಗೆ ಬಲಿಯಾಗಿದ್ದಾರೆ. ₹30 ಕೋಟಿ ಕುದುರೆ ವ್ಯಾಪಾರ ನಡೆದಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಎರಡು ಬಾರಿ ಕಾಂಗ್ರೆಸ್ ಪಕ್ಷದಿಂದ ಅವರು ಗೆದ್ದಿದ್ದರು, ಇನ್ನೂ ಅವಧಿ ಇರುವಂತೆ ರಾಜೀನಾಮೆ ನೀಡಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಜೆಡಿಎಸ್‌ನವರು ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರು. ಆದರೆ ನಾವೇನು ಆಪರೇಷನ್ ಮಾಡಿರಲಿಲ್ಲ, ಹಣ ನೀಡಿರಲಿಲ್ಲ. ಅಷ್ಟಕ್ಕೂ ಅದು ಗೋಪ್ಯ ಮತದಾನವಾಗಿತ್ತು’ ಎಂದರು.

‘ಸುಮಲತಾ ಕಣಕ್ಕಿಳಿಸುವ ಪ್ರಶ್ನೆ ಉದ್ಭವಿಸದು’

‘ಸೀಟು ಹಂಚಿಕೆ ಪ್ರಕ್ರಿಯೆ ನಾಲ್ಕೈದು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಮಂಡ್ಯದಲ್ಲಿ ಹಾಲಿ ಜೆಡಿಎಸ್ ಸಂಸದರಿರುವುದರಿಂದ ಆ ಸೀಟು ಕಾಂಗ್ರೆಸ್‌ಗೆ ಸಿಗುವುದಿಲ್ಲ. ಅಂದ ಮೇಲೆ ಸುಮಲತಾ ಅವರನ್ನು ಕಣಕ್ಕಿಳಿಸುವ ಪ್ರಶ್ನೆ ಉದ್ಭವಿಸದು. ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವುದು ಬಿಡುವುದು ಅವರಿಗೆ ಸೇರಿದ್ದು. ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆ ಎದುರಿಸಿದರೆ 20ಕ್ಕಿಂತ ಅಧಿಕ ಸ್ಥಾನ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 37

  Happy
 • 1

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !