ಮಂಡ್ಯ, ಹಾಸನದಲ್ಲಿ ಬಿಕ್ಕಟ್ಟು: ‘ಕೈ’ ನಾಯಕರಿಂದ ‘ಮೈತ್ರಿ ಧರ್ಮ’ದ ಪಾಠ!

ಗುರುವಾರ , ಏಪ್ರಿಲ್ 25, 2019
29 °C
ಬಿಕ್ಕಟ್ಟು ಬಿಗಡಾಯಿಸದಂತೆ ಎಚ್ಚರಿಕೆ ಹೆಜ್ಜೆ ಇಡಲು ತೀರ್ಮಾನ

ಮಂಡ್ಯ, ಹಾಸನದಲ್ಲಿ ಬಿಕ್ಕಟ್ಟು: ‘ಕೈ’ ನಾಯಕರಿಂದ ‘ಮೈತ್ರಿ ಧರ್ಮ’ದ ಪಾಠ!

Published:
Updated:

ಬೆಂಗಳೂರು: ಗುಂಪುಗಾರಿಕೆ, ಗೊಂದಲ, ವೈರುಧ್ಯದ ಹೇಳಿಕೆ ನೀಡುತ್ತಿರುವ ಮಂಡ್ಯ, ಹಾಸನ ಲೋಕಸಭಾ ಕ್ಷೇತ್ರಗಳ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರಿಗೆ ‘ಮೈತ್ರಿ’ ಧರ್ಮದ ಅನಿವಾರ್ಯತೆ ಬೋಧಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಹೆಣಗಾಡುತ್ತಿದ್ದಾರೆ.

ಕ್ಷೇತ್ರ ಹಂಚಿಕೆ ವಿಷಯದಲ್ಲಿ ಹೈಕಮಾಂಡ್‌ ತೆಗೆದುಕೊಂಡ ನಿಲುವಿಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೆ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್‌ ನಾಯಕರು, ಬಿಕ್ಕಟ್ಟು ಬಿಗಡಾಯಿಸದಂತೆ ಎಚ್ಚರಿಕೆಯ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ.

ಅದಕ್ಕೆ ಪೂರಕವಾಗಿ, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ‘ರಾಜಕೀಯ ಹೊಂದಾಣಿಕೆ’ಗೆ ಮುಂದಾಗಿದ್ದಾರೆ. ಪಕ್ಷದ ಪಾಲಿಗೆ ಸಿಕ್ಕಿರುವ ಉಡುಪಿ– ಚಿಕ್ಕಮಗಳೂರು ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸಿಗರನ್ನು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಪರ ನಿಲ್ಲಲು ಹಿಂಜರಿಯುತ್ತಿರುವ ಕಾರ್ಯಕರ್ತರನ್ನು ಮನವೊಲಿಸುವ ಹೊಣೆಯನ್ನು ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ವಹಿಸಿದೆ. ಹಾಸನದ ಮುಖಂಡರು ಮತ್ತು ಕಾರ್ಯಕರ್ತರನ್ನು ಓಲೈಸುವ ಕಾರ್ಯವನ್ನು ಖುದ್ದು ಸಿದ್ದರಾಮಯ್ಯ ಮಾಡಲಿದ್ದಾರೆ.

ಹಾಸನದ ಗೊಂದಲ ಪರಿಹರಿಸಲು ಪಕ್ಷದ ಸ್ಥಳೀಯ ಮುಖಂಡರ ಜೊತೆ ರೇವಣ್ಣ ಸಮ್ಮುಖದಲ್ಲೇ ಗುರುವಾರ ಸಭೆ ನಡೆಸಲು ತೀರ್ಮಾನಿಸಲಾಗಿತ್ತು. ಆದರೆ, ಆ ಸಭೆಯನ್ನು ಶನಿವಾರಕ್ಕೆ ಮುಂದೂಡಲಾಗಿದೆ. ಸಭೆಗೆ ಬಂದಿದ್ದ ಮಾಜಿ ಸಚಿವ ಗಂಡಸಿ ಶಿವರಾಂ ಶುಕ್ರವಾರ ಮಾತನಾಡಿ, ‘ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ನಮ್ಮನ್ನು ಕರೆದರೆ ಹೋಗುತ್ತೇವೆ. ಕರೆಯದಿದ್ದರೆ ಮುಂದೇನು ಮಾಡಬೇಕು ಎಂದು ಯೋಚಿಸುತ್ತೇವೆ’ ಎಂದರು.

ಯಾವುದೇ ಅಸಮಾಧಾನ ಇಲ್ಲ: ಮಂಡ್ಯ ಜಿಲ್ಲೆಯ ಪಕ್ಷದ ಪ್ರಮುಖರ ಜೊತೆ ಸಚಿವ ಡಿ.ಕೆ. ಶಿವಕುಮಾರ್‌ ಗುರುವಾರವೂ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ‘ಚೆಲುವರಾಯಸ್ವಾಮಿ ನಮ್ಮ ಪಕ್ಷದ ನಾಯಕ. ಹೀಗಾಗಿ ಅವರ ಜೊತೆ ಚರ್ಚೆ ಮಾಡಿದ್ದೇನೆ. ಹಾಸನ, ಮಂಡ್ಯ, ರಾಮನಗರ, ಮೈಸೂರಿನಲ್ಲಿ ಕಾರ್ಯಕರ್ತರ ಮಧ್ಯೆ ಗೊಂದಲ ಇದೆ. ಸಮಸ್ಯೆ ತಿಳಿಗೊಳಿಸುವ ಜವಾಬ್ದಾರಿಯನ್ನು ನಾನು ತೆಗೆದುಕೊಂಡಿದ್ದೇನೆ’ ಎಂದರು.

‘ಸುಮಲತಾ ಅಂಬರೀಷ್‌ ನನ್ನ ಸಹೋದರಿ. ಯಾರದ್ದೊ ಒತ್ತಡದ ಮೇಲೆ ಅವರು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಕೆಲವು ನಾಯಕರ ಜೊತೆ ಬುಧವಾರ ಚರ್ಚೆ ಮಾಡಿದ್ದೇನೆ. ಪಕ್ಷ ಅವರಿಗೆ ಟಿಕೆಟ್ ನೀಡಲಿದೆ ಎಂದು ಭಾವಿಸಿಕೊಂಡು ಅವರ ಜೊತೆ ಕೆಲಸ ಮಾಡಿದ್ದೇವೆ ಎಂದು ಕೆಲವು ನಾಯಕರು ಹೇಳಿದ್ದಾರೆ. ನಮ್ಮ ನಾಯಕರು ಯಾರೂ ಈಗ ಅವರ ಜೊತೆ ಇಲ್ಲ’ ಎಂದರು.

ದರ್ಶನ್, ಯಶ್ ವಿರುದ್ಧ ಅನ್ನದಾನಿ ಕಿಡಿ

ಸುಮಲತಾ ಅಂಬರೀಷ್‌ಗೆ ಸಾಥ್‌ ನೀಡಿರುವ ಚಿತ್ರನಟರಾದ ದರ್ಶನ್, ಯಶ್ ವಿರುದ್ಧ ಮಳವಳ್ಳಿ ಜೆಡಿಎಸ್‌ ಶಾಸಕ ಡಾ.ಕೆ ಅನ್ನದಾನಿ ಕಿಡಿಕಾರಿದ್ದಾರೆ.

‘ಡಾ. ರಾಜ್ ಕುಮಾರ್‌ ಅವರಿಗಿಂತ ದೊಡ್ಡ ಸ್ಟಾರ್ ಯಾರೂ ಇಲ್ಲ. ಅವರೇ ರಾಜಕೀಯಕ್ಕೆ ಬರಲಿಲ್ಲ. ಜನರ, ರೈತರ ಕಷ್ಟಸುಖ ನೋಡುವವರು ನಾವುಗಳೇ ಹೊರತು ಸ್ಟಾರ್‌ಗಳಲ್ಲ. ಸುಮಲತಾ ನಾಮಪತ್ರ ಸಲ್ಲಿಸುವ ವೇಳೆ ಬಂದಿದ್ದ ಸ್ಟಾರ್‌ಗಳನ್ನು ನೋಡಲು ‌ಜನ ಸೇರಿದ್ದರು ಅಷ್ಟೆ’ ಎಂದರು.

‘ನಮಗೆ ದೇವೇಗೌಡ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಸ್ಟಾರ್‌ಗಳು. ನಮ್ಮ ಸ್ಟಾರ್‌ಗಳಿಗೆ ವಾಸ್ತವ ಏನೆಂಬುವುದು ಗೊತ್ತಿದೆ. ಸಿನಿಮಾ ಸ್ಟಾರ್‌ಗಳು ಬಡವರ ಪರ ಯಾವಾಗ ಕೆಲಸ ಮಾಡಿದ್ದಾರೆ. ಜನರು ನಮ್ಮ ಕೈ ಬಿಡುವುದಿಲ್ಲ ಎಂಬ ವಿಶ್ವಾಸವಿದೆ’ ಎಂದರು.

* ದೇವೇಗೌಡ ಮತ್ತು ಕುಮಾರಸ್ವಾಮಿ ಎಂದೂ ಸುರಕ್ಷಿತ ರಾಜಕಾರಣ ಮಾಡಿಲ್ಲ. ಕಷ್ಟದ ಸಮಯದಲ್ಲಿ ರಾಜಕೀಯ ಮಾಡಿದ್ದಾರೆ. ಸವಾಲು ಸ್ವೀಕರಿಸಲೂ ತಯಾರಿದ್ದಾರೆ

-ಡಿ.ಕೆ. ಶಿವಕುಮಾರ್‌, ಜಲಸಂಪನ್ಮೂಲ ಸಚಿವ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !