ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ; ‘ಮೈತ್ರಿ’ ಮಧ್ಯೆ ಕ್ಷೇತ್ರ ಜಗ್ಗಾಟ

ಹಾಲಿ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್‌ ವಿರೋಧ
Last Updated 24 ಜನವರಿ 2019, 19:28 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆಯಲ್ಲಿ ಪಕ್ಷ ಪ್ರತಿನಿಧಿಸುತ್ತಿರುವ ಒಂಬತ್ತು ಸ್ಥಾನಗಳನ್ನು ಬಿಟ್ಟುಕೊಡದಂತೆ ಹಾಲಿ ಕಾಂಗ್ರೆಸ್ ಸಂಸದರು ಪಟ್ಟು ಹಿಡಿದಿದ್ದಾರೆ. ಹೀಗಾಗಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ‘ದೋಸ್ತಿ’ಗಳ (ಜೆಡಿಎಸ್‌–ಕಾಂಗ್ರೆಸ್‌)‌ ಮಧ್ಯೆ ಸ್ಥಾನ ಹೊಂದಾಣಿಕೆ ಹಗ್ಗಜಗ್ಗಾಟಕ್ಕೆ ದಾರಿಮಾಡಿಕೊಡುವ ಸಾಧ್ಯತೆ ಇದೆ.

ಈ ಮಧ್ಯೆ, ಪಕ್ಷ ಗೆದ್ದಿರುವ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ (ತುಮಕೂರು, ಚಿಕ್ಕಬಳ್ಳಾ‍ಪುರ, ಚಿತ್ರದುರ್ಗ, ಕೋಲಾರ) ಹೊಸಬರಿಗೆ ಅವಕಾಶ ನೀಡಬೇಕು ಎಂದು ಆ ಕ್ಷೇತ್ರಗಳ ಸ್ಥಳೀಯ ನಾಯಕರು ಕಾಂಗ್ರೆಸ್‌ ವರಿಷ್ಠರ ಬಳಿ ಗುರುವಾರ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ, ಸ್ಥಾನ ಹೊಂದಾಣಿಕೆ ಬಳಿಕ ‘ಹಾಲಿ’ ಕ್ಷೇತ್ರಗಳು ಕಾಂಗ್ರೆಸ್‌ಗೆ ಪಾಲಿಗೆ ಬಂದರೂ ಟಿಕೆಟ್‌ ಹಂಚಿಕೆ ಆ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸುವ ಸಂಭವ ಇದೆ.

12 ಕ್ಷೇತ್ರಗಳನ್ನು ಬಿಟ್ಟು ಕೊಡಬೇಕೆಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಈಗಾಗಲೇ ಬೇಡಿಕೆ ಮುಂದಿಟ್ಟಿದ್ದಾರೆ. ಆ ಕ್ಷೇತ್ರಗಳಲ್ಲಿ ಒಕ್ಕಲಿಗ ಸಮುದಾಯ ಪ್ರಾಬಲ್ಯವಿರುವ ತುಮಕೂರು, ಚಿಕ್ಕಬಳ್ಳಾ‍ಪುರ, ಕೋಲಾರ ಕ್ಷೇತ್ರಗಳು ಸೇರಿವೆ. ಆದರೆ, ಎಂಟು ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಕಾಂಗ್ರೆಸ್‌ ವಲಯದಲ್ಲಿ ಚರ್ಚೆ ನಡೆದಿದೆ.

ಗುರುವಾರ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಮಾತನಾಡಿದ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ, ‘ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಪ್ರಾಥಮಿಕ ಹಂತದ ಮಾತುಕತೆ ಮಾಡಿದ್ದೇವೆ. ಇನ್ನು 2–3 ದಿನಗಳಲ್ಲಿ ಮತ್ತೊಮ್ಮೆ ಸಭೆ ಸೇರಿ ಯಾರಿಗೆ ಯಾವ ಕ್ಷೇತ್ರ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ’ ಎಂದರು.

ಆ ಮಾತಿಗೆ ದನಿಗೂಡಿಸಿದ ಸಮಿತಿ ಸಂಚಾಲಕ ಡ್ಯಾನಿಶ್ ಅಲಿ, ‘ಇಲ್ಲಿ ಸ್ಥಾನಗಳ ಬೇಡಿಕೆ ಪ್ರಶ್ನೆ ಇಲ್ಲ. ಬಿಜೆಪಿಯನ್ನು ಕಟ್ಟಿ ಹಾಕುವುಷ್ಟೆ ನಮ್ಮ ಗುರಿ. ಕನಿಷ್ಠ 25 ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಬೇಕು ಎಂಬ ಉದ್ದೇಶದಿಂದ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ’ ಎಂದರು.

ಗೆಲ್ಲುವವರಿಗೆ ಮಾತ್ರ ಟಿಕೆಟ್: ಜೆಡಿಎಸ್‌ ಕಣ್ಣಿಟ್ಟಿರುವ ಹಳೇ ಮೈಸೂರು ಭಾಗದ ಪಕ್ಷದ ಮುಖಂಡರಿಂದ ಕೆಪಿಸಿಸಿ ಕಚೇರಿಯಲ್ಲಿ ವೈಯಕ್ತಿಕ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾತನಾಡಿದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ‘ಗೆಲ್ಲುವ ಶಕ್ತಿ ಇರುವ ಹಾಲಿ ಸಂಸದರಿಗೆ ಮಾತ್ರ ಟಿಕೆಟ್ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಬೆಂಗಳೂರು ಕೇಂದ್ರ ಕ್ಷೇತ್ರ ದಾವಣಗೆರೆ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಗಳ ನಾಯಕರ ಅಭಿಪ್ರಾಯವನ್ನು ವೇಣುಗೋಪಾಲ್‌ ಆಲಿಸಿದರು.

ಈ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯಿಲಿ, ‘ಕಳೆದ ಚುನಾವಣೆ ವೇಳೆ ನರೇಂದ್ರ ಮೋದಿ ಅಲೆ ವಿರುದ್ಧ ಪಕ್ಷದಿಂದ ಒಂಬತ್ತು ಮಂದಿ ಗೆದ್ದಿದ್ದೇವೆ. ನಾವೆಲ್ಲರೂ ಕಷ್ಟಕಾಲದಲ್ಲಿ ಗೆದ್ದವರು. ಹೀಗಾಗಿ, ಈ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂಬುದು ನಮ್ಮ ಅಭಿಪ್ರಾಯ’ ಎಂದರು.

ನೋಟಿಸ್‌ಗೆ ಉತ್ತರ ಕೊಟ್ಟ ಶಾಸಕರು

ಪಕ್ಷದ ಶಾಸಕಾಂಗ ಸಭೆಗೆ ಗೈರಾಗಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದ ಕಾಂಗ್ರೆಸ್‌ನ ನಾಲ್ಕು ಶಾಸಕರ ಪೈಕಿ ಮೂವರು, ಪಕ್ಷ ಕೊಟ್ಟಿದ್ದ ನೋಟಿಸ್‌ಗೆ ಉತ್ತರ ಕೊಟ್ಟಿದ್ದಾರೆ.

ಬಿಜೆಪಿ ಜತೆಗೆ ಗುರುತಿಸಿಕೊಂಡು, ಮುಂಬೈನ ರೆಸಾರ್ಟ್‌ನಲ್ಲಿದ್ದಾರೆ ಎಂಬ ಆರೋಪಕ್ಕೆ ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಬಿ. ನಾಗೇಂದ್ರ ಹಾಗೂ ಉಮೇಶ ಜಾಧವ ಅವರು ಗುರಿಯಾಗಿದ್ದರು. ಸಭೆಗೆ ಗೈರಾದ ಬೆನ್ನಲ್ಲೇ, ಶಿಸ್ತುಕ್ರಮದ ಎಚ್ಚರಿಕೆ ನೀಡಿ ನೋಟಿಸ್ ಕೊಡಲಾಗಿತ್ತು.

‘ಪಕ್ಷ ತೊರೆಯುವುದಿಲ್ಲ’ ಎಂದು ರಮೇಶ, ಮಹೇಶ, ನಾಗೇಂದ್ರ ಅವರು ನೋಟಿಸ್‌ಗೆ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ‘ಮಗಳ ಮದುವೆ ಸಿದ್ಧತೆಯಲ್ಲಿ ಇದ್ದುದರಿಂದ ಬರಲಾಗಿಲ್ಲ’ ಎಂಬ ಕಾರಣವನ್ನೂ ಜಾರಕಿಹೊಳಿ ನೀಡಿದ್ದಾರೆ. ನೋಟಿಸ್‌ಗೆ ಉತ್ತರ ನೀಡದ ಉಮೇಶ ಜಾಧವ, ‘ನಾನಿನ್ನೂ ಗೊಂದಲದಲ್ಲಿದ್ದು, ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ’ ಎಂದು ತಿಳಿಸಿದ್ದಾರೆ.

*ಲೋಕಸಭೆ ಚುನಾವಣೆಗೆ ಸಂಬಂಧಿಸಿ ಜೆಡಿಎಸ್ ವರಿಷ್ಠ ಎಚ್‌.ಡಿ. ದೇವೇಗೌಡರ ಜತೆ ಶೀಘ್ರದಲ್ಲೇ ಸಭೆ ನಡೆಸಿ ಸ್ಥಾನ ಹೊಂದಾಣಿಕೆ ಕುರಿತು ತೀರ್ಮಾನಿಸುತ್ತೇವೆ

– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT