ಶುಕ್ರವಾರ, ಜನವರಿ 27, 2023
27 °C

ಕನ್ನಡ, ಇಂಗ್ಲಿಷ್, ಹಿಂದಿಯಲ್ಲಿ ಯಕ್ಷಗಾನ ಗೊಂಬೆಯಾಟ ಮೂಲಕ ಕೊರೊನಾ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Kasaragodu Gombeyata Team

ಕಾಸರಗೋಡು: ಜಾಗತಿಕ ಮಟ್ಟದಲ್ಲಿ ಜನಜೀವನ ತಲ್ಲಣಗೊಳಿಸುತ್ತಿರುವ ಮಹಾಮಾರಿ ಕೊರೊನಾ ವೈರಸ್‌ನಿಂದ ಬರುವ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಕ್ಷಗಾನ ಕಲೆ ಹಾಗೂ ಗೊಂಬೆಯಾಟದ ಮೂಲಕ ಮೂರು ಬೇರೆ ಬೇರೆ ಭಾಷೆಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘವು ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ವಿಚಾರ ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ. ಸಜಿತ್‌ ಬಾಬು ಅಭಿಪ್ರಾಯಪಟ್ಟರು.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಸಂಯೋಜನೆಯಲ್ಲಿ, ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೊಂಬೆಯಾಟ ಸಂಘದ ಸಹಯೋಗದೊಂದಿಗೆ ಕಾಸರಗೋಡು ಸರಕಾರಿ ಕಾಲೇಜಿನ ಸಹಕಾರದೊಂದಿಗೆ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡುವ 'ಕೊರೊನಾ ಯಕ್ಷ ಜಾಗೃತಿ' ಯಕ್ಷಗಾನ ಗೊಂಬೆಯಾಟ ಪ್ರದರ್ಶನ ಯೋಜನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು

ಆರೋಗ್ಯ ಇಲಾಖೆಯ ನಿಬಂಧನೆಗಳಿಗೆ ಅನುಗುಣವಾಗಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಂಶುಪಾಲ ಡಾ. ಎ.ಎಲ್.‌ ಅನಂತಪದ್ಮನಾಭ, ತ್ರಿಕರಿಪುರ ಫೋಕ್‌ಲೆಂಡ್‌ ಅಧ್ಯಕ್ಷ ಹಾಗೂ ಯುನೆಸ್ಕೊ ಸದಸ್ಯ ವಿ. ಜಯರಾಜನ್‌, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಯೋಗೀಶ್‌ ರಾವ್‌ ಚಿಗುರುಪಾದೆ ಶುಭ ಹಾರೈಸಿದರು.

ಇಲ್ಲಿದೆ ಯಕ್ಷಗಾನ ಗೊಂಬೆಯಾಟ:

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಯಕ್ಷಗಾನ ಗೊಂಬೆಯಾಟದ ನಿರ್ದೇಶಕ ರಮೇಶ್‌ ಕೆ.ವಿ. ಕಾಸರಗೋಡು, ಹಿರಿಯ ಯಕ್ಷಗಾನ ಕಲಾವಿದ ರಾಧಾಕೃಷ್ಣ ನಾವಡ ಉಪಸ್ಥಿತರಿದ್ದರು. ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಡಾ. ರತ್ನಾಕರ ಮಲ್ಲಮೂಲೆ ಸ್ವಾಗತಿಸಿ ವಂದಿಸಿದರು.

“ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನ ನಿರ್ಮಾಣದ ತರಾತುರಿಯಲ್ಲಿರುವಾಗಲೇ ಕೊರೊನಾ ಕಾಣಿಸಿಕೊಂಡು ತಡೆಯೊಡ್ಡಿತು. ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ಹೊಣೆಯು ಪ್ರತಿಯೊಬ್ಬ ಕಲಾವಿದನಿಗೂ ಇದೆ. ಸ್ವತಃ ನಾನು ಕಲಾವಿದನಾದ ಕಾರಣ ನಮ್ಮ ಸಂಸ್ಥೆಯ ನೇತೃತ್ವದಲ್ಲಿ ಯಕ್ಷಗಾನ ಗೊಂಬೆಯಾಟದ ಸಹಯೋಗದೊಂದಿಗೆ, ಇಂತಹ ಒಂದು ಮಹತ್ವದ ಯೋಜನೆಗೆ ಕೈ ಹಾಕಿದ್ದೇವೆ. ಈ ಮೊದಲು ಯಕ್ಷಗಾನ ಬಯಲಾಟದ ಮೂಲಕವೂ ಈ ರೋಗದ ಕುರಿತು ಜಾಗೃತಿ ಮೂಡಿಸಲು ಸಾಧ್ಯವಾಗಿತ್ತು. ಈಗ ಮೂರು ಭಾಷೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಯಕ್ಷ ಜಾಗೃತಿಯನ್ನುಂಟು ಮಾಡಲು ಈ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದೇವೆ” ಎಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಿರಿಬಾಗಿಲು ರಾಮಕೃಷ್ಣ ಮಯ್ಯ ಹೇಳಿದರು.
    
“ನಮ್ಮ ಯಕ್ಷಗಾನ ಗೊಂಬೆಗಳು ಈಗಾಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಕೋವಿಡ್‌ 19 ಎಂಬ ಈ ರೋಗದ ಸಮಸ್ಯೆಯಿಂದಾಗಿ ಬಳಲುತ್ತಿರುವ ಈ ಕಾಲಘಟ್ಟದಲ್ಲಿ, ನಮ್ಮ ಗೊಂಬೆಗಳಿಗೆ ಜಗತ್ತಿಗೆ ಜಾಗೃತಿ ಮೂಡಿಸುವ ಮಹತ್ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಲಭಿಸಿರುವುದು ನಮಗೆ ಹೆಮ್ಮೆಯೆನಿಸುತ್ತದೆ.” ಎಂದು ಯಕ್ಷಗಾನ ಗೊಂಬೆಯಾಟ ಸಂಘ (ರಿ.) ಕಾಸರಗೋಡು ಇದರ ನಿರ್ದೇಶಕ ರಮೇಶ್‌ ಕೆ.ವಿ. ನುಡಿದರು.

ಕರ್ನಾಟಕ ಹಾಗೂ ಕೇರಳಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.) ಕಾಸರಗೋಡು ಸಂಸ್ಥೆಯು ತೆಂಕುತಿಟ್ಟು ಶೈಲಿಯ ಏಕೈಕ ಬೊಂಬೆಯಾಟ ತಂಡವಾಗಿದ್ದು, ಯಕ್ಷಗಾನ ವಾಲ್ಮೀಕಿ ಎಂದೇ ಪ್ರಸಿದ್ಧನಾಗಿರುವ ಪಾರ್ತಿಸುಬ್ಬನ ವಂಶಸ್ಥರಾದ ಕಲ್ಲಕಟ್ಟ ಲಕ್ಷ್ಮೀನಾರಾಯಣಯ್ಯ ವಿದ್ವಾನ್‌ ಹಾಗೂ ಕೆ. ವೆಂಕಟಕೃಷ್ಣಯ್ಯನವರಿಂದ ಈ ತಂಡವು ರೂಪುಗೊಂಡಿತ್ತು. ದೇಶ ವಿದೇಶಗಳಲ್ಲಿ 3,000ಕ್ಕಿಂತಲೂ ಅಧಿಕ ಬೊಂಬೆಯಾಟವನ್ನು ಪ್ರದರ್ಶನ ಮಾಡಿದ ಕೀರ್ತಿ ಈ ಸಂಸ್ಥೆಯದು. ಪಾಕಿಸ್ತಾನದ ಲಾಹೋರ್‌, ಫ್ರಾನ್ಸಿನ ಪ್ಯಾರಿಸ್‌, ದುಬೈ, ಜೆಕೋಸ್ಲವಾಕಿಯಾದ ಪ್ರಾಗ್‌, ಚೈನಾದ ಗುಯ್ಯಾಂಗ್‌ನಲ್ಲೂ ಈ ತಂಡವು ಪ್ರದರ್ಶನ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು