ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಪರಿಣಾಮ: ತೊಗರಿಬೇಳೆ ಕೃತಕ ಅಭಾವ ಸೃಷ್ಟಿ; ದರ ಏರಿಕೆ

ಕೊರೊನಾ ಅಟ್ಟಹಾಸದಿಂದಾಗಿ ನಲುಗಿದ ಕಲ್ಯಾಣ ಕರ್ನಾಟಕದ ದಾಲ್‌ಮಿಲ್‌ ಸಾಮ್ರಾಜ್ಯ
Last Updated 28 ಮಾರ್ಚ್ 2020, 10:29 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಅಟ್ಟಹಾಸದಿಂದಾಗಿ ತೊಗರಿಬೇಳೆ ಸಾಮ್ರಾಜ್ಯ ನಲುಗಿ ಹೋಗಿದೆ. ಎಲ್ಲೆಂದರಲ್ಲಿ ಸಾಕಷ್ಟು ಅಭಾವ ಉಂಟಾಗಿದ್ದು, ದಿನೇದಿನೇ ದರ ಏರುತ್ತಲೇ ಇದೆ.

ಚಿಲ್ಲರೆ ಮಾರುಕಟ್ಟೆಯಲ್ಲಿಮಾರ್ಚ್‌ ಮೊದಲ ವಾರದಲ್ಲಿ ₹ 72 ಇದ್ದ ಕೆ.ಜಿ. ತೊಗರಿ ಬೇಳೆಯ ದರ; ಶುಕ್ರವಾರ (ಮಾರ್ಚ್‌ 27) ₹ 82ಕ್ಕೆ ಏರಿದೆ. ಸಗಟು ವ್ಯಾಪಾರಿಗಳೂ ದರ ಏರಿಸಿದ್ದು, ₹ 600ರಿಂದ 800ಕ್ಕೆ ಜಂಪ್ ಆಗಿದೆ. ಏಕಾಏಕಿ ತೊಗರಿ ಸರಬರಾಜು ನಿಂತುಹೋಗಿದೆ. ಹಲವು ವರ್ತಕರು ತಮ್ಮ ಬಳಿ ಸಂಗ್ರಹಿಸಿಕೊಂಡಿದ್ದ ಬೇಳೆಯನ್ನು ಮಾರದೇ, ಕೃತಕ ಅಭಾವ ಸೃಷ್ಟಿಮಾಡಿದ್ದಾರೆ.

ಕಾಳು ಹಾಗೂ ದಿನಸಿ ಅಂಗಡಿಗಳಲ್ಲಿ ಸಂಗ್ರಹವಾಗಿರುವ ಬೇಳೆ ಹೊರಗೆ ಬರುತ್ತಿಲ್ಲ. ಇನ್ನೊಂದೆಡೆ ಕೃಷಿ ಸಾವಿರಾರು ಕ್ವಿಂಟಲ್‌ ಉತ್ಪನ್ನ ಎಪಿಎಂಸಿ ಆವರಣದಲ್ಲಿ ಬಿದ್ದಿದೆ. ಮಾರುಕಟ್ಟೆಗಳನ್ನು ಬಂದ್‌ ಮಾಡಿದ್ದರಿಂದ ಬೇಳೆ ಸಾಕಷ್ಟು ಸಂಗ್ರಹವಿದ್ದರೂ ಜನರ ಕೈಗೆ ಸಿಗುತ್ತಿಲ್ಲ.‌

‘ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲಿಯೂ ಈಗ ತೊಗರಿ ಇಳುವರಿ ಕೊರತೆ ಇಲ್ಲ. ಆದರೆ, ಕಚ್ಚಾ ಮಾಲು ಮಿಲ್‌ಗಳಿಗೆ ಸರಬರಾಜು ಆಗದ ಕಾರಣ ಉತ್ಪಾದನೆ ನಿಂತು ಹೋಗಿದೆ. ಇನ್ನೊಂದೆಡೆ, ಇರುವ ಬೇಳೆಯನ್ನೂ ಸರಬರಾಜು ಮಾಡಲು ವಾಹನ ಸವಾರರು ಮುಂದೆ ಬರುತ್ತಿಲ್ಲ. ಇದು ಮಾನವ ನಿರ್ಮಿತ ಕೊರತೆ’ ಎಂದು ದಾಲ್‌ಮಿಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಶರಣಪ್ಪ ಸಿ. ನಿಗ್ಗುಡಗಿ ಹೇಳುತ್ತಾರೆ.

ಕಲಬುರ್ಗಿಯಿಂದ ಮಂಗಳೂರಿಗೆ ಒಂದು ಕ್ವಿಂಟಲ್‌ ತೊಗರಿ ಸಬರಾಜು ಮಾಡಲು ಲಾರಿಯವರು ₹200 ದರ ನಿಗದಿ ಮಾಡಿದ್ದರು. ಆದರೆ, ಈಗ ₹370 ಕೇಳುತ್ತಿದ್ದಾರೆ. ಲಾರಿಯಲ್ಲಿ ಬೇಳೆ ಒಯ್ದು ಮಂಗಳೂರಿನಿಂದ ಇನ್ನೊಂದು ಸಾಮಗ್ರಿಯನ್ನು ಅವರು ತರುತ್ತಿದ್ದರು. ಆದರೆ, ಈಗ ಅಲ್ಲಿಂದ ಯಾವ ಸಾಮಗ್ರಿಯೂ ಸಿಗುತ್ತಿಲ್ಲ. ಹಾಗಾಗಿ, ಹೋಗಿ ಬರುವ ದರವನ್ನೂ ನಾವೇ ಭರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಹೇಗೆ ಸರಬರಾಜು ಮಾಡಲು ಸಾಧ್ಯ ಎಂದೂ ಅವರು ಪ್ರಶ್ನಿಸುತ್ತಾರೆ.

ಸಾವಿರಾರು ಕುಟುಂಬ ತಲ್ಲಣ

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈಸಣ್ಣ ಉದ್ಯಮವನ್ನೇ ನಂಬಿಕೊಂಡ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಕುಟುಂಬಗಳು, ವರ್ತಕರು ತಲ್ಲಣಗೊಂಡಿದ್ದಾರೆ. ಕಳೆದ ಎರಡು ವಾರಗಳಿಂದ ದಾಲ್‌ಮಿಲ್‌ಗಳಿಗೆ ಕಚ್ಚಾ ಸಾಮಗ್ರಿ (ತೊಗರಿ) ಬರುವುದೇ ನಿಂತುಹೋಗಿದೆ. ಇದರಿಂದ ಹಲವು ಮಿಲ್‌ಗಳು ಈಗಾಗಲೇ ಬಾಗಿಲು ಮುಚ್ಚಿವೆ. ಮುಂಚಿತವಾಗಿಯೇ ಕಚ್ಚಾ ಮಾಲು ಸಂಗ್ರಹಿಸಿಕೊಂಡಿದ್ದ ಬೆರಳೆಣಿಕೆಯುಷ್ಟು ಉದ್ಯಮಗಳು ಮಾತ್ರ ಇನ್ನೂ ಉಸಿರಾಡುತ್ತಿವೆ.

ಮತ್ತೆ ಕೆಲವೆಡೆ ಕಚ್ಚಾ ಸಾಮಗ್ರಿ ಇದ್ದಾಗಿಯೂ ಕಾರ್ಮಿಕರ ಕೊರತೆಯಿಂದಾಗಿ ಬಂದ್‌ ಆಗಿವೆ. ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿ ನಾಲ್ಕು ದಿನ ಕಳೆದಿದೆ. ಆದರೆ, ಇದಕ್ಕೂ ಮುಂಚೆ ಕಲಬುರ್ಗಿ ಜಿಲ್ಲೆಯನ್ನು ಬಂದ್‌ ಮಾಡಿ ಎರಡು ವಾರವಾಗಿದೆ. ಆಗಿನಿಂದಲೂ ಕಾರ್ಮಿಕರು ಮಿಲ್‌ಗಳತ್ತ ಬರಲು ಸಾಧ್ಯವಾಗಿಲ್ಲ. ಇದರಿಂದ ಒಂದೆಡೆ ಕಾರ್ಮಿಕರು, ಇನ್ನೊಂದೆಡೆ ಮಿಲ್‌ ಮಾಲೀಕರೂ ತಲ್ಲಣ ಅನುಭವಿಸುವಂತಾಗಿದೆ.

ಸಾಲ ಮತ್ತು ಬಡ್ಡಿಯ ಹೊರೆ, ಸೆಸ್‌ ಭಾರ ತಾಳಿಕೊಳ್ಳಲು ಪರದಾಡುತ್ತಿದ್ದ ಮಿಲ್‌ಗಳು ಈಗ ಉಸಿರಾಟ ನಿಲ್ಲಿಸುವ ಸ್ಥಿತಿ ತಲುಪಿವೆ.‘ದಾಲ್‌ಮಿಲ್‌ ಉಳಿದರೆ ಮಾತ್ರ ಕಲಬುರ್ಗಿಗೆ ಉಳಿವು’ ಎನ್ನುತ್ತಾರೆ ಉದ್ಯಮಿಗಳು.

‘ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಲಿ’

ಬೇಳೆ ಅಭಾವ ಉಂಟಾಗದಂತೆ ನಿರಂತರ ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿ ಕೋರಿದ್ದಾರೆ. ಆದರೆ, ಯಾವ ಮಿಲ್‌ಗಳೂ ಈಗ ಸ್ವಂತ ಹಣ ಹಾಕಿ ಸರಬರಾಜು ಮಾಡುವಷ್ಟು ಸಶಕ್ತವಾಗಿಲ್ಲ. ಆದ್ದರಿಂದ ಜಿಲ್ಲಾಡಳಿತದಿಂದ ಲಾರಿ ವ್ಯವಸ್ಥೆ ಮಾಡಿದರೆ ನಾವು ತೊಗರಿ ನೀಡುತ್ತೇವೆ. ಕಾರ್ಮಿಕರ ಕೂಲಿ ಮಾತ್ರ ನೀಡಿದರೆ ಸಾಕು. ಅಭಾವ ನಿವಾರಣೆ ಮಾಡಲು ಇದು ಸುಲಭ ಉಪಾಯ ಎಂದು ದಾಲ್‌ಮಿಲ್ಲರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಶಿವಶರಣಪ್ಪ ನಿಗ್ಗುಡಗಿ ಹೇಳಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯವಿರುವ 20 ಮಿಲ್‌ಗಳನ್ನು ಆಯ್ಕೆ ಮಾಡಿಕೊಂಡು, ಅವುಗಳ ಉತ್ಪಾದನೆಗೆ ಅವಕಾಶ ಕಲ್ಪಿಸಬೇಕು.ಇಲ್ಲದಿದ್ದರೆ ಕೃತಕ ಅಭಾವದಿಂದ ಮಧ್ಯವರ್ತಿ– ವ್ಯಾಪಾರಿಗಳು ಹಣ ಮಾಡಿಕೊಳ್ಳುತ್ತಾರೆ ಹೊರತು; ರೈತರಿಗಾಗಲೀ, ಮಿಲ್‌ನವರಿಗಾಗಲೀ ಹೊಡೆತ ತಪ್ಪಿದ್ದಲ್ಲ. ಇದು ಹೀಗೇ ಮುಂದುವರಿದರೆ ಮಾರ್ಚ್ ಕೊನೆಯ ವಾರದಲ್ಲಿ ಮತ್ತಷ್ಟು ಅಭಾವ ಸೃಷ್ಟಿಯಾಗಲಿದೆ ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT