ಮಂಗಳವಾರ, ಏಪ್ರಿಲ್ 7, 2020
19 °C
ಮೃತ ವ್ಯಕ್ತಿಯ ಮನೆ ಇರುವ ವಾರ್ಡ್‌ ಮೇಲೆ ಜಿಲ್ಲಾಡಳಿತ ನಿಗಾ

ಕೊರೊನಾ ಭೀತಿ: ನಾಲ್ವರ ಮಾದರಿ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಕೋವಿಡ್‌ನಿಂದ ಮೃತಪಟ್ಟಿರುವ ಮೊಹ್ಮದ್‌ ಹುಸೇನ್‌ ಸಿದ್ದಿಕಿ (76) ಅವರ ನಾಲ್ವರು ಸಂಬಂಧಿಕರಲ್ಲಿ ಕೆಮ್ಮು–ನೆಗಡಿ ಕಾಣಿಸಿಕೊಂಡಿದ್ದು, ಅವರ ರಕ್ತ ಹಾಗೂ ಕಫದ ‌ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ.

ಈ ವ್ಯಕ್ತಿ ವಾಸವಾಗಿದ್ದ ನಗರದ ವಾರ್ಡ್ ಸಂಖ್ಯೆ–30ರ ಮೋಮಿನ್‌ಪುರ ಬಡಾವಣೆಯನ್ನು ಅತಿ ಸೂಕ್ಷ್ಮ ವಲಯವನ್ನಾಗಿ ಘೋಷಿಸಲಾಗಿದೆ. ಆ ಬಡಾವಣೆಯಿಂದ ಹೊರಹೋಗುವ, ಒಳಬರುವ ಜನರ ಮೇಲೆ ಜಿಲ್ಲಾ ಆಡಳಿತ ನಿಗಾ ವಹಿಸಿದೆ. ಸಂಭವನೀಯ ಪರಿಸ್ಥಿತಿ ಎದುರಿಸಲು ಇಲ್ಲಿಯ ಇಎಸ್‌ಐಸಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ.

‘ಮೊಹ್ಮದ್‌ ಹುಸೇನ್‌ ಸಿದ್ದಿಕಿ ಅವರೊಂದಿಗೆ ಒಡನಾಟ ಹೊಂದಿದ್ದ 46 ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ಅವರ ಪೈಕಿ ಹೈರಿಸ್ಕ್‌ ಎಂದು ಪರಿಗಣಿಸಲಾದ 31 ಪೈಕಿ 21 ಜನರನ್ನು ಇಎಸ್‌ಐಸಿ ಆಸ್ಪತ್ರೆಯಲ್ಲಿಯ ವಿಶೇಷ ವಾರ್ಡ್‌ಗಳಲ್ಲಿ ಹಾಗೂ ಸೋಂಕು ತಗುಲಿರುವ ಶಂಕೆ ಇರುವ ನಾಲ್ವರನ್ನು ಇದೇ ಆಸ್ಪತ್ರೆಯಲ್ಲಿಯ ಕೊರೊನಾ ಐಸೋಲೇಶನ್‌ ವಾರ್ಡ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ. 

‘ಸೌದಿ ಅರೇಬಿಯಾದಿಂದ ಈ ವೃದ್ಧರೊಂದಿಗೆ ಯಾರಾದರೂ ‌ಕಲಬುರ್ಗಿಗೆ ಬಂದಿದ್ದಾರೆಯೇ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದನ್ನು ತಾತ್ಕಾಲಿಕವಾಗಿ ಕೈಬಿಡುವಂತೆ ಧಾರ್ಮಿಕ ಮುಖಂಡರಿಗೆ ಮನವಿ ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ. ಆದರೆ, ಕಲಬುರ್ಗಿಯ ಬಹುತೇಕ ಪ್ರಾರ್ಥನಾ ಮಂದಿರಗಳಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. 

ಸೂಚನೆ ಮಧ್ಯೆಯೂ ನಡೆದ ಜಾತ್ರೆ
ಕೊರೊನಾ ಸೋಂಕು ಹರಡುವುದನ್ನು ತಡೆಯುವ ಕ್ರಮವಾಗಿ ಕಲಬುರ್ಗಿ ಜಿಲ್ಲಾಡಳಿತವು ಹೆಚ್ಚು ಜನಸಂದಣಿ ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಶರಣಬಸವೇಶ್ವರ ರಥೋತ್ಸವ ಹಾಗೂ ಜಾತ್ರೆಯನ್ನು ರದ್ದುಗೊಳಿಸಿದ್ದಾಗಿ ಪ್ರಕಟಿಸಿತ್ತು. ಆದರೂ ಶುಕ್ರವಾರ ಸಂಜೆ 4ರ ಸುಮಾರು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥ ಎಳೆಯಲಾಯಿತು.

ಕಲಬುರ್ಗಿ ಜಿಲ್ಲೆ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಗಳು ಹಾಗೂ ಮಹಾರಾಷ್ಟ್ರ, ತೆಲಂಗಾಣದಿಂದ ಬಂದಿದ್ದ ಭಕ್ತರು ತೇರನ್ನು ಎಳೆದರು.

ಜಾತ್ರೆ ರದ್ದು ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಜಿಲ್ಲಾಧಿಕಾರಿ ಶರತ್ ಬಿ. ಅವರು ರಥೋತ್ಸವದ ಸಂದರ್ಭದಲ್ಲಿ ಶರಣಬಸವೇಶ್ವರ ಸಂಸ್ಥಾನಕ್ಕೆ ದೌಡಾಯಿಸಿ ಡಾ.ಶರಣಬಸವಪ್ಪ ಅಪ್ಪ ಅವರೊಂದಿಗೆ ಚರ್ಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಶರಣವಸಪ್ಪ ಅಪ್ಪ ಅವರು, ‘ಪ್ರತಿ ವರ್ಷವೂ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸುತ್ತಿದ್ದೆವು. ಈ ಬಾರಿ ಕೊರೊನಾ ಸೋಂಕು ಹರಡಿರುವುದರಿಂದ ಜಿಲ್ಲಾಧಿಕಾರಿ ಅವರ ಮನವಿ ಮೇರೆಗೆ ಹಾಗೂ ಭಕ್ತರ ಭಾವನೆಗಳಿಗೆ ಸ್ಪಂದಿಸಿ ರಥೋತ್ಸವವನ್ನು ಸಾಂಕೇತಿಕವಾಗಿ ನಡೆಸಿದ್ದೇವೆ’ ಎಂದರು.

‘ವೈದ್ಯರೇ ಒತ್ತಾಯದಿಂದ ಕಳುಹಿಸಿದರು’
ಕಲಬುರ್ಗಿ:
‘ಕೋವಿಡ್‌ನಿಂದ ಮೃತಪಟ್ಟ ಮೊಹ್ಮದ್‌ ಹುಸೇನ್‌ ಸಿದ್ದಿಕಿ ಅವರನ್ನು ವೈದ್ಯರ ಸಲಹೆ ನಿರ್ಲಕ್ಷ್ಯಿಸಿ ಮನೆಯವರು ಹೈದರಾಬಾದ್‌ಗೆ ಚಿಕಿತ್ಸೆಗೆ ಕರೆದೊಯ್ದಿದ್ದರು’ ಎಂದು ಜಿಲ್ಲಾ ಆಡಳಿತ ಹೇಳುತ್ತಿದ್ದರೆ, ‘ಇಲ್ಲಿಯ ಖಾಸಗಿ ಆಸ್ಪತ್ರೆಯವರೇ ಒತ್ತಾಯಪೂರ್ವಕವಾಗಿ ನಮ್ಮ ತಂದೆಯನ್ನು ಹೊರಹಾಕಿದರು’ ಎಂದು ಮೃತನ ಪುತ್ರ ಖಾಜಿ ಹಮೀದ್‌ ಫೈಸಲ್‌ ಸಿದ್ದಿಕಿ ಆರೋಪಿಸಿದ್ದಾರೆ.

‘ವೈದ್ಯರ ಸಲಹೆ ಮೀರಿ ಹೈದರಾಬಾದ್‌ಗೆ ಕರೆದೊಯ್ದೆವು ಎಂಬುದು ಶುದ್ಧ ಸುಳ್ಳು. ಕಲಬುರ್ಗಿಯ ‘ಜಿಮ್ಸ್‌’ನಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಲಭ್ಯವಿದೆ ಎಂಬುದು ನಮಗೆ ಗೊತ್ತಿರಲಿಲ್ಲ. ನಮ್ಮ ತಂದೆಯನ್ನು ದಾಖಲಿಸಿದ್ದ ಇಲ್ಲಿಯ ಖಾಸಗಿ ಆಸ್ಪತ್ರೆಯವರು ಹೇಳಿದ್ದರೆ ನಾವು ಅಲ್ಲಿಗೇ (ಜಿಮ್ಸ್‌) ಹೋಗುತ್ತಿದ್ದೆವು. ಆರೋಗ್ಯ ಇಲಾಖೆಯವರೂ ಹೇಳಲಿಲ್ಲ. ರೋಗಿ ಇಲ್ಲಿಂದ ಹೋದರೆ ಸಾಕು ಎಂಬಂತೆ ಎಲ್ಲರೂ ವರ್ತಿಸಿದರು’ ಎಂದು ಶುಕ್ರವಾರ ಬೆಳಿಗ್ಗೆ ಮಾಧ್ಯಮದವರ ಎದುರು ಅಳಲು ತೋಡಿಕೊಂಡರು.

‘ಹೈದರಾಬಾದ್‌ ವೈದ್ಯರು ಪಶುಗಳಿಗಿಂತ ಕೆಟ್ಟದಾಗಿ ವರ್ತಿಸಿದರು. ನಮ್ಮ ತಂದೆಯ ಸಾವಿಗೆ ಆರೋಗ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳೇ ನೇರ ಹೊಣೆ’ ಎಂದು ದೂರಿದರು. ‘ನಮ್ಮ ಕುಟುಂಬದವರೂ ಸೇರಿ 43 ಜನರ ಮೇಲೆ ಬುಧವಾರದಿಂದಲೇ ನಿಗಾ ವಹಿಸಿದ್ದೇವೆ ಎಂಬ ಜಿಲ್ಲಾ ಆಡಳಿತದ ಮಾಹಿತಿ ಶುದ್ಧ ಸುಳ್ಳು. ಶುಕ್ರವಾರ ಬೆಳಿಗ್ಗೆ 10ಕ್ಕೆ ನಮ್ಮ ಮನೆಗೆ ಬಂದು ಇಬ್ಬರನ್ನು ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಇಬ್ಬರಿಗೆ ಹಿಂದೆ ಜ್ವರ ಇತ್ತು. ಈಗಿಲ್ಲ. ನಮ್ಮಿಂದ ಇತರರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ನಾವು ತಪಾಸಣೆಗೆ ಸಮ್ಮತಿಸಿದ್ದೇವೆ’ ಎಂದರು.

ಉಮ್ರಾ ಯಾತ್ರೆಗೆ ಹೋಗಿದ್ದರು: ‘ನಮ್ಮ ತಂದೆ ಉಮ್ರಾ ಯಾತ್ರೆಗೆ ಜನವರಿ 29ರಂದು ಹೋಗಿದ್ದರು. ಆ ನಂತರ ಸೌದಿಯಲ್ಲಿರುವ ಸಹೋದರನ ಮನೆಯಲ್ಲಿ ಕೆಲಕಾಲ ತಂಗಿದ್ದರು. ಅಲ್ಲಿಂದ ಫೆ.29ರಂದು ವಾಪಸಾದ ನಂತರ ಆರೋಗ್ಯವಾಗಿಯೇ ಇದ್ದರು. ಐದಾರು ದಿನದ ನಂತರ ಅವರ ಆರೋಗ್ಯದಲ್ಲಿ ಏರುಪೇರಾಯಿತು. ನಮ್ಮ ಕುಟುಂಬ ವೈದ್ಯರನ್ನು ಕರೆದು ಚಿಕಿತ್ಸೆ ಕೊಡಿಸಿದೆವು. ಮಾ.8ರಂದು ರಾತ್ರಿ 12ರ ನಂತರ ಕೆಮ್ಮು ಹೆಚ್ಚಾಯಿತು. ಮರುದಿನ ಬೆಳಿಗ್ಗೆ ಆಸ್ಪತ್ರೆಗೆ ಕರೆದೊಯ್ದೆವು. ಬೆಡ್‌ ಖಾಲಿ ಇದ್ದರೂ ಕಲಬುರ್ಗಿಯ ಕೆಲ ಆಸ್ಪತ್ರೆಯವರು ದಾಖಲಿಸಿಕೊಳ್ಳಲಿಲ್ಲ. ಕೊನೆಗೆ ಒಂದು ಆಸ್ಪತ್ರೆಯವರು ದಾಖಲಿಸಿಕೊಂಡರು’ ಎಂದರು.

ಎಲ್ಲ ಶಾಲೆ, ಕಾಲೇಜುಗಳಿಗೆ ಇಂದಿನಿಂದ ರಜೆ
ಬೆಂಗಳೂರು:
ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಶಾಲೆಗಳಿಗೆ ಹಾಗೂ ಪದವಿ ಕಾಲೇಜು, ವಿಶ್ವವಿದ್ಯಾಲಯಗಳಿಗೆ ಶನಿವಾರದಿಂದಲೇ(ಮಾ.14) ರಜೆ ನೀಡಲಾಗಿದೆ. 7ನೇ ತರಗತಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಿಗದಿಯಂತೆಯೇ ನಡೆಯಲಿದ್ದು, ಪದವಿ, ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಮುಂದೂಡಲಾಗಿದೆ.

1ರಿಂದ 6ನೇ ತರಗತಿವರೆಗೆ ಪರೀಕ್ಷೆ ನಡೆಯುತ್ತಿದ್ದರೂ, ಶನಿವಾರದಿಂದ ಅದನ್ನು ಸ್ಥಗಿತಗೊಳಿಸಿ, ಶಾಲೆಗಳಿಗೆ ರಜೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

7ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಹ ಶನಿವಾರದಿಂದಲೇ ಅಧ್ಯಯನ ರಜೆ ನೀಡಬೇಕು, ಪರೀಕ್ಷೆ ದಿನಗಳಂದು ಶಾಲೆಗೆ ಬಂದು ಪರೀಕ್ಷೆ ಬರೆಯಬೇಕು, ಇದೇ 23ರೊಳಗೆ ಎಲ್ಲಾ ಪರೀಕ್ಷೆಗಳನ್ನೂ ಕೊನೆಗೊಳಿಸಿ ಬೇಸಿಗೆ ರಜೆ ನೀಡಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಬಯಸಿದರೆ ಮುಖಗವಸು ಧರಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಈ ನಿಯಮ ರಾಜ್ಯ ಪಠ್ಯಕ್ರಮದ ಶಾಲೆಗಳ ಜತೆಗೆ ಸಿಬಿಎಸ್‌ಇ, ಐಸಿಎಸ್ಇ, ಪಠ್ಯಕ್ರಮದ ಎಲ್ಲ ಶಾಲೆಗಳಿಗೂ ಅನ್ವಯವಾಗುತ್ತದೆ. ಎಲ್ಲ ಸರ್ಕಾರಿ/ಖಾಸಗಿ ವಿಶ್ವವಿದ್ಯಾಲಯಗಳು, ಪದವಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಿಗೆ ಶನಿವಾರದಿಂದ 15 ದಿನಗಳ ಕಾಲ ರಜೆ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು