ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಕ್ವಾರಂಟೈನ್‌ನಲ್ಲಿ ನಾಲ್ವರು ಸಚಿವರು ಏನು ಮಾಡುತ್ತಿದ್ದಾರೆ?

Last Updated 6 ಮೇ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕು ಇಂದು ಇಡೀ ಜಗತ್ತಿನ ಮನೆ ಮಾತು. ಲಾಕ್‌ಡೌನ್‌, ಕ್ವಾರಂಟೈನ್‌ ಪದಗಳೇ ಕಣ್ಣು, ಕಿವಿ ತುಂಬಿವೆ. ಸಾವಿರಾರು ಜನರು ಮನೆ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಇವರ ಸಾಲಿಗೆ ರಾಜ್ಯದ ನಾಲ್ವರು ಸಚಿವರೂ ಸೇರಿಕೊಂಡಿದ್ದರು. ಇದೀಗ 14 ದಿನಗಳ ಮನೆ ಕ್ವಾರಂಟೈನ್‌ ಮುಗಿಸಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರದು ವಿಭಿನ್ನ ಅನುಭವ.

ಈ ನಾಲ್ವರೂ ಎರಡೆರಡು ಬಾರಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ ಹಾಗೂ ನೆಗೆಟಿವ್‌ ವರದಿ ಬಂದಿದೆ. ಸೋಂಕು ತಟ್ಟಿಲ್ಲ ಎಂಬುದು ಎಲ್ಲರ ಅರಿವಿಗೂ ಇತ್ತು, ಆದರೆ ಸಾರ್ವಜನಿಕ ಜೀವನದಲ್ಲಿರುವಾಗ ನಿಯಮ ಪಾಲಿಸಬೇಕು ಎಂಬ ಕಾರಣಕ್ಕೆ ಕ್ವಾರಂಟೈನ್‌ನಲ್ಲಿದ್ದರು. ಎಲ್ಲ ಸಚಿವರೂ ತಮ್ಮ ದೈನಂದಿನ ಕೆಲಸಕ್ಕಿಂತ ತುಸು ಹೆಚ್ಚೇ ಎಂಬಂತೆ ಆಡಳಿತದಲ್ಲಿ ತೊಡಗಿದ್ದರು. ಅದಕ್ಕಿಂತಮೂ ಮುಖ್ಯವಾಗಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಿದರು.

ಬದುಕಿನ ಕ್ಷಣಗಳಿಗೆ ಹೊಸ ಭಾಷ್ಯ

‘ಅದೆಷ್ಟೋ ವರ್ಷಗಳ ನಂತರ ದಿನದ ಮೂರು ಹೊತ್ತು ಮನೆಯಲ್ಲಿಯೇ ಊಟ ಮಾಡಿದೆ. ನನ್ನ ಪತ್ನಿ, ಮಕ್ಕಳು, ತಂದೆಯವರಲ್ಲಿ ಕಂಡ ಆನಂದ ಬದುಕಿನ ಕ್ಷಣಗಳಿಗೆ ಹೊಸ ಭಾಷ್ಯ ಬರೆಯಿತೇನೋ ಅನಿಸುತ್ತಿದೆ. ಆಗಾಗ ಮಗಳು ಮಾಡಿಟ್ಟ ‘ಪ್ರಾಯೋಗಿಕ ತಿನಿಸು'ಗಳ ಸವಿರುಚಿಯನ್ನು ಹೇಗೆ ವರ್ಣಿಸಲಿ?’ ಎಂದು ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹೇಳಿದರು. ‘ತಂತ್ರಜ್ಞಾನ ಬಳಸಿಕೊಂಡು ಆಡಳಿತಕ್ಕೆ ಚುರುಕು ಕೊಡುವ ಬಗೆ, ಜರೂರಾಗಿ ನಿರ್ಧಾರಗಳನ್ನು ಕೈಗೊಳ್ಳುವ ಪರಿಗಳನ್ನು ಕ್ವಾರಂಟೈನ್ ಕಾಲ ಕಲಿಸಿದೆ. ಸ್ಟೀವ್‌ಜಾಬ್ಸ್ ಅವರ ‘ಜಾಬ್ಸ್', ಸ್ಟಿಫೆನ್ ಹಾಕಿನ್ಸ್ ಅವರ ಜೀವನ ಕಥೆ ‘ಥಿಯರಿ ಆಫ್ ಎವರಿಥಿಂಗ್', ಬಿಹಾರದ ಗಣಿತ ತಜ್ಞ ಆನಂದ್ ಕುಮಾರ್ ಅವರ ಲೈಫ್‌ಸ್ಟೋರಿ ‘ಸೂಪರ್ 30’ ಓದಿದೆ. ‘ಎ ಬ್ಯೂಟಿಫುಲ್ ಮೈಂಡ್’, ‘ದಿ ಇಮಿಟೇಶನ್ ಗೇಮ್’, ‘ದಿ ಏವಿಯೇಟರ್’, ‘ರೈಡ್’, ‘ಸ್ಪೆಷಲ್ 26’, 'ದಿ ಟರ್ನಿಂಗ್' ಹಾಲಿವುಡ್‌ ಸಿನಿಮಾಗಳನ್ನು ನೋಡಿದೆ’ ಎಂದರು.

ಆತ್ಮಾವಲೋಕನ ಸಮಯ

‘ಕ್ವಾರಂಟೈನ್‌ ಅವಧಿಯನ್ನು ನನ್ನ ಎರಡು ಆಸಕ್ತಿಯ ವಿಷಯಗಳಾದ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರಗಳಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಲುಪ್ರಯತ್ನಿಸಿದೆ. ಅರ್ಥಶಾಸ್ತ್ರದಲ್ಲಿ ತತ್ವಶಾಸ್ತ್ರವನ್ನೂ, ತತ್ವಶಾಸ್ತ್ರದಲ್ಲಿ ಅರ್ಥಶಾಸ್ತ್ರವನ್ನೂ ಹುಡುಕುವ ಪ್ರಯತ್ನ ಮಾಡಿದ್ದೇನೆ. ಅದೇ ಹಿನ್ನೆಲೆಯಲ್ಲಿ ‘ನಾನು ಮತ್ತು ನನ್ನ ಮನಸ್ಸು’ ಎಂಬ ವಿಷಯದಲ್ಲಿ ಲೇಖನ ಬರೆಯುತ್ತಿದ್ದೇನೆ. ಮೊಂಟೆಕ್‌ ಸಿಂಗ್ ಅಹ್ಲೂವಾಲಿಯಾ ಅವರ ‘ಬ್ಯಾಕ್‌ಸ್ಟೇಜ್‌’ ಪುಸ್ತಕ ಓದಿದೆ. ಸದ್ಗುರು ಅವರ ‘ಡೆತ್‌’ ಪುಸ್ತಕ ಓದುತ್ತಿದ್ದೇನೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

‘ಮನೆಯೊಳಗೆಯೇ ಇದ್ದರೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆ. ಆತ್ಮಾವಲೋಕನ ಮಾಡಿಕೊಳ್ಳಲು ಒಂದಿಷ್ಟು ಸಮಯ ಸಿಕ್ಕಿತು’ ಎಂದರು.

ಕನ್ನಡಿಗರ ಕಷ್ಟ ತಿಳಿಯಲು ಯತ್ನಿಸಿದೆ

‘ಬಹಳ ದಿನಗಳ ನಂತರ ನಾನೇ ದನಗಳನ್ನು ಹೊಲಕ್ಕೆ ಕೊಂಡೊಯ್ದು ಮೇಯಿಸಿದೆ. ಟ್ರಾಕ್ಟರ್‌ನಲ್ಲಿ ಹೊಲ ಉಳುಮೆ ಮಾಡಿಸಿದೆ, ದನಗಳ ಮೇವಿಗಾಗಿ ಜೋಳ ಬಿತ್ತನೆ ಮಾಡಿಸಿದೆ. ಸತ್ಯಕಾಮ ಅವರ ‘ರಾಜಬಲಿ’ ಮತ್ತು ದತ್ತೋಪಂಥ ಠೇಂಗಡಿ ಅವರು ಅಂಬೇಡ್ಕರ್ ಬಗ್ಗೆ ಬರೆದ ‘ಸಾಮಾಜಿಕ ಕ್ರಾಂತಿಸೂರ್ಯ’ ಪುಸ್ತಕಗಳನ್ನು ಓದಿದೆ. ದಿನವೂ ಯೋಗ, ನಡಿಗೆ ತಪ್ಪಿಸಲಿಲ್ಲ’ ಎಂದು ಸಿ.ಟಿ.ರವಿ ಹೇಳಿದರು.

‘ಚಿಕ್ಕಮಗಳೂರು ಜಿಲ್ಲೆಯ 32 ಮಂದಿ ಹಿರಿಯ ಕಾರ್ಯಕರ್ತರನ್ನು ಸಂಪರ್ಕಿಸಿ ಮಾತನಾಡಿದೆ. 32 ದೇಶಗಳ 57 ಸಂಘಟನೆಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಕನ್ನಡಿಗರ ಕಷ್ಟ, ಸುಖ ತಿಳಿಯಲುಪ್ರಯತ್ನಿಸಿದೆ’ ಎಂದರು.

ಪ್ಯಾಂಡಮಿಕ್ ಅಧ್ಯಯನ ನಡೆಸಿದೆ

‘ಪ್ರತಿದಿನ ಒಂದು ತಾಸು ಮಾಡುತ್ತಿದ್ದ ವ್ಯಾಯಾಮವನ್ನು ಎರಡೂವರೆ ತಾಸಿಗೆ ವಿಸ್ತರಿಸಿಕೊಂಡೆ. ಕೊರೊನಾ ಮಾದರಿಯಲ್ಲಿ ಈ ಹಿಂದೆ ಮನುಕುಲ ಕಾಡಿದ ಪ್ಯಾಂಡಮಿಕ್‌ಗಳು ಅವುಗಳಿಂದ ಉಂಟಾದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಪರಿಣಾಮಗಳ ಬಗ್ಗೆ ಇತಿಹಾಸದ ಪುಟಗಳಲ್ಲಿನ ಮಾಹಿತಿಗಳ ಅಧ್ಯಯನ ನಡೆಸಿದೆ. ಮೊದಲ ಸಲ ಮಕ್ಕಳಿಗೆ ಮ್ಯಾಗಿ ಮಾಡಿಕೊಟ್ಟೆ’ ಎಂದು ಡಾ.ಕೆ.ಸುಧಾಕರ್‌ ಹೇಳಿದರು.

‘ಇಲಾಖೆ ಅಧಿಕಾರಿಗಳ ಜತೆಗೆ ವಿಡಿಯೊ ಸಂವಾದ ನಡೆಸಿ ಕೋವಿಡ್‌ ಹಾಗೂ ಇಲಾಖೆಯ ಇತರ ವಿಷಯಗಳ ಬಗ್ಗೆ ಕೂಲಂಕಷ ಚರ್ಚಿಸಿದೆ. ಚಲನಚಿತ್ರ ಕಲಾವಿದರು, ನಿರ್ದೇಶಕರೊಂದಿಗಿನ ಸಂವಾದ ವಿಶಿಷ್ಟ ಅನುಭವ ಕೊಟ್ಟಿತು. ಪ್ರೊ. ಕೃಷ್ಣೇಗೌಡ, ಪ್ರಾಣೇಶ್‌ ಅವರ ಹಾಸ್ಯ ಕಾರ್ಯಕ್ರಮಗಳನ್ನು ನೋಡಿ ಮನಸ್ಸು ಹಗುರವಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT