ಶನಿವಾರ, ಮಾರ್ಚ್ 28, 2020
19 °C

ಕೋವಿಡ್-19: ಕಲಬುರ್ಗಿಯಲ್ಲಿ ಮತ್ತೆ ನಾಲ್ವರ ಮಾದರಿ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: ಜಿಲ್ಲೆಯಲ್ಲಿ ಸೋಮವಾರ ಮತ್ತೆ ನಾಲ್ವರಿಗೆ ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡಿದ್ದು, ಇವರ ರಕ್ತ ಹಾಗೂ ಕಫದ ಮಾದರಿಯನ್ನು ಬೆಂಗಳೂರು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

ನಾಲ್ವರಲ್ಲಿ ಇಬ್ಬರು ಈಚೆಗೆ ಕೋವಿಡ್‌- 19ನಿಂದಲೇ ಮೃತಪಟ್ಟ ಮೊಹಮ್ಮದ್ ಹುಸೇನ್‌ ಸಿದ್ದಿಕಿ (76) ಅವರ ಸಂಪರ್ಕದಲ್ಲಿ ಇದ್ದವರು. ಇನ್ನಿಬ್ಬರು ವಿದೇಶಗಳಿಂದ ಇಲ್ಲಿಗೆ ಬಂದವರು. ನಾಲ್ವರನ್ನೂ ಇಎಸ್‌ಐ ಆಸ್ಪತ್ರೆಯಲ್ಲಿ ತೆರೆದಿರುವ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ. ಇದರೊಂದಿಗೆ ನಗರದಲ್ಲಿ ಈ ವಿಶೇಷ ವಾರ್ಡ್‌‌ಗೆ ದಾಖಲಾದವರ ಸಂಖ್ಯೆ 8ಕ್ಕೆ ಏರಿದೆ.

‘ಒಬ್ಬ ವ್ಯಕ್ತಿಯನ್ನು ಚಿತ್ತಾಪುರದಲ್ಲಿ ಪತ್ತೆ ಮಾಡಿದ್ದು, ಅವರು ದುಬೈನಿಂದ ಈಚೆಗೆ ಮರಳಿದ್ದಾರೆ. ಇನ್ನೊಬ್ಬರು‌ ಚಿಂಚೋಳಿಯಲ್ಲಿ ವಾಸವಾಗಿದ್ದ ವಾರದ ಹಿಂದಷ್ಟೇ ಸೌದಿ ಅರೇಬಿಯಾದಿಂದ ಬಂದಿದ್ದಾರೆ. ಈ ಇಬ್ಬರನ್ನೂ ಪ್ರಾಥಮಿಕ ತಪಾಸಣೆಗೆ ಒಳಪಡಿಸಿದ್ದು, ಸೋಂಕು ತಗುಲಿರುವ ಸಾಧ್ಯತೆ ಇರುವುದರಿಂದ ತೀವ್ರ ನಿಗಾ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಬಿ.ಶರತ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಮೃತಪಟ್ಟ ಮೊಹಮ್ಮದ್ ಹುಸೇನ್‌ ಸಿದ್ದಿಕಿ ಅವರ ನೇರ ಸಂಪರ್ಕದಲ್ಲಿದ್ದ ಒಟ್ಟು 71 ಮಂದಿಯನ್ನು ಈವರೆಗೆ ಗುರುತಿಸಿದ್ದು, ಎಲ್ಲರನ್ನೂ ಅವರ ಮನೆಯಲ್ಲೇ ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ. ಇವರಲ್ಲಿ ಇಬ್ಬರಿಗೆ ಶೀತ, ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಕಂಡುಬಂದಿದ್ದು, ಸೋಮವಾರ ಇಎಸ್‌ಐ ಆಸ್ಪತ್ರೆಯ ವಿಶೇಷ ವಾರ್ಡ್‌‌ಗೆ ದಾಖಲಿಸಲಾಯಿತು ಎಂದರು.

ಪ್ರತ್ಯೇಕವಾಗಿರಿಸಿರುವ ಎಲ್ಲ 71 ಮಂದಿಯ ಚಲನವಚಲನಗಳನ್ನೂ ದಾಖಲಿಸಿಕೊಂಡಿದ್ದು, ಅವರೊಂದಿಗೆ ನೇರ ಸಂಪರ್ಕಕ್ಕೆ ಬಂದ 238 ಜನರನ್ನು ‍ಪತ್ತೆ ಮಾಡಲಾಗಿದೆ. ಎಲ್ಲರನ್ನೂ ಅವರ ಮನೆಯಲ್ಲಿ ಇರಿಸಿ, ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಸೋಮವಾರದ ಹೊತ್ತಿಗೆ ಒಟ್ಟು 370 ಮಂದಿಯನ್ನು ಹೋಂ ಕೊರೊಂಟೈನ್‌ (ಮನೆಯಲ್ಲೇ ಇರಿಸಿ ನಿಗಾ ವಹಿಸುವುದು) ಮಾಡಲಾಗಿದೆ.

ಮೃತಪಟ್ಟ ವೃದ್ಧನ ಕುಟುಂಬದ ನಾಲ್ವರು ಶಂಕಿತರಲ್ಲಿ ಮೂವರ ಮಾದರಿ ಋಣಾತ್ಮಕವಾಗಿ ಬಂದಿದ್ದು, ಒಬ್ಬರಲ್ಲಿ ಮಾತ್ರ ಕೋವಿಡ್‌–19 ಸೋಂಕು ದೃಢಪಟ್ಟಿದೆ. ಸೋಂಕಿತರಿಗೆ ಅಗತ್ಯ ಚಿಕಿತ್ಸೆ ಮುಂದುವರಿದಿದೆ. ಉಳಿದ ಮೂವರನ್ನೂ ಕೂಡ ಪ್ರತ್ಯೇಕ ವಾರ್ಡ್‌ಗಳಲ್ಲೇ ಇರಿಸಿ, ಇನ್ನೂ ನಿಗಾ ವಹಿಸಿದ್ದೇವೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು