ಬುಧವಾರ, ಜುಲೈ 28, 2021
26 °C
ಸೋಂಕು ಲಕ್ಷಣಗಳು ಗೋಚರಿಸದ ರೋಗಿಗಳು ಬೇಗ ಗುಣಮುಖ

ಕೋವಿಡ್: ಚಿಕಿತ್ಸಾ ಅವಧಿ 13.5 ದಿನಗಳಿಗೆ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರಲ್ಲಿ ಅರ್ಧದಷ್ಟು ಮಂದಿ ಚೇತರಿಸಿಕೊಂಡಿದ್ದು,  ಗುಣಮುಖರಾದವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದ ಅವಧಿ ಸರಾಸರಿ 15.6 ದಿನಗಳಿಂದ 13.5 ದಿನಗಳಿಗೆ ಇಳಿಕೆಯಾಗಿದೆ. 

ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ವರದಿಯಾಗಿರುವ ಬಹುತೇಕ ಕೋವಿಡ್ ಪ್ರಕರಣಗಳಲ್ಲಿ ರೋಗ  ಲಕ್ಷಣಗಳೇ ಗೋಚರಿಸುತ್ತಿಲ್ಲ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆ (ಐಎಲ್‌ಐ), ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿದ ವೇಳೆ ಸೋಂಕಿತರಾಗಿರುವುದು ದೃಢಪಡುತ್ತಿದೆ. ಈ ರೀತಿಯ ರೋಗಿಗಳು ಆಸ್ಪತ್ರೆಗಳಲ್ಲಿ ನೀಡುತ್ತಿರುವ ಪೂರಕ ಚಿಕಿತ್ಸೆಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇದರಿಂದಾಗಿ ಮಕ್ಕಳು ಹಾಗೂ ಮಧ್ಯಮ ವಯಸ್ಕರು ಬೇಗ ಗುಣಮುಖರಾಗಿ, ಮನೆಗೆ ತೆರಳುತ್ತಿದ್ದಾರೆ. ಮನೆಗೆ ತೆರಳಲು ನಿಗದಿಪಡಿಸಿದ್ದ 14 ದಿನಗಳ ಅವಧಿಯನ್ನು 7ದಿನಗಳಿಗೆ ಕಡಿತ ಮಾಡಿದ ಪರಿಣಾಮ ಹೆಚ್ಚಿನ ರೋಗಿಗಳು ಕೆಲವೇ ದಿನಗಳಲ್ಲಿ ಮನೆಗೆ ವಾಪಸ್ ಆಗುತ್ತಿದ್ದಾರೆ.

ರಾಜ್ಯದಲ್ಲಿ 2,976 (ಜೂ.11ರವರೆಗೆ) ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟು ಪ್ರಕರಣಗಳಲ್ಲಿ ಶೇ 48 ರಷ್ಟು ಮಂದಿ ಚೇತರಿಸಿಕೊಂಡಿದ್ದಾರೆ. 60 ವರ್ಷ ಮೇಲ್ಪಟ್ಟವರು ಹಾಗೂ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಕಾಯಿಲೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಮಾತ್ರ ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದು, ಕೆಲವರು 20 ದಿನಗಳಿಗೂ ಅಧಿಕ ಅವಧಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ಆಸ್ಪತ್ರೆಗಳಲ್ಲಿ 6.2 ದಿನಗಳು: ರಾಜ್ಯದಲ್ಲಿ ಕೋವಿಡ್‌ ಕಾಯಿಲೆಗೆ 52 ಮಂದಿ ಮೃತಪಟ್ಟ ವೇಳೆ (ಜೂ.2) ಪ್ರತಿ ವ್ಯಕ್ತಿ  ಸರಾಸರಿ 4.4 ದಿನಗಳು ಮಾತ್ರ ಆಸ್ಪತ್ರೆಯಲ್ಲಿ ಕಳೆದಿದ್ದರು. ಈಗ ಆಸ್ಪತ್ರೆಯಲ್ಲಿನ ಅವಧಿ ಹೆಚ್ಚಳವಾಗಿದೆ. ಮೃತರ ಸಂಖ್ಯೆ 72ಕ್ಕೆ (ಜೂ.11) ತಲುಪಿದ್ದು, ಪ್ರತಿ ವ್ಯಕ್ತಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯ ಅವಧಿ 6.2 ದಿನಗಳಿಗೆ ಏರಿಕೆಯಾಗಿದೆ. 

ರಾಜ್ಯದಲ್ಲಿ ಸದ್ಯ ಮರಣ ಪ್ರಮಾಣ ಶೇ 1.2ರಷ್ಟಿದೆ. ಆದರೆ, ಕಳೆದ ಒಂದು ವಾರಗಳಿಂದ ಮೃತರ ಸಂಖ್ಯೆ ಏರುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ಈ ಪ್ರಮಾಣ ಹೆಚ್ಚಳವಾಗುವ ಆತಂಕ ಉಂಟಾಗಿದೆ. ಹೃದಯ ಕಾಯಿಲೆ, ಮೂತ್ರಪಿಂಡ ಸಮಸ್ಯೆ, ಪಾರ್ಶ್ವವಾಯು, ಬಹು ಅಂಗಾಂಗ ವೈಫಲ್ಯ, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ಜೀವಕ್ಕೆ ಕೋವಿಡ್‌ ಅಪಾಯವನ್ನು ತಂದೊಡ್ಡುತ್ತಿದ್ದೆ.

**

ಐಎಲ್‌ಐ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚಾಗಿ ಸೋಂಕಿತರಾಗುತ್ತಿದ್ದಾರೆ. ಹಾಗಾಗಿ ಅಂತಹವರನ್ನು ಪ್ರತ್ಯೇಕ ಮಾಡಿ, ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ರೋಗಿಗಳು ಬೇಗ ಗುಣಮುಖರಾಗುತ್ತಿದ್ದಾರೆ.
-ಡಾ.ಕೆ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು