ಬುಧವಾರ, ಆಗಸ್ಟ್ 4, 2021
22 °C

ಕೋವಿಡ್‌–19 ವಿರುದ್ಧ ಹೋರಾಟ| ಕರ್ನಾಟಕದಲ್ಲಿ ಇಂದು ‘ಮಾಸ್ಕ್‌ ದಿನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ವೈರಸ್‌ (ಕೋವಿಡ್‌–19) ವಿರುದ್ಧದ ಹೋರಾಟದಲ್ಲಿ ಮಾಸ್ಕ್‌ ಬಳಕೆಯ ಅನಿವಾರ್ಯತೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಕರ್ನಾಟಕದಾದ್ಯಂತ ಗುರುವಾರ ‘ಮಾಸ್ಕ್‌ ದಿನ’ ಆಚರಿಸಲಾಗುತ್ತಿದೆ. 

ರಾಜ್ಯದ ಪ್ರತಿ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾಸ್ಕ್‌ ದಿನ ಆಚರಣೆಯಾಗುತ್ತಿದ್ದು, ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಬೆಂಗಳೂರಿನ ವಿಧಾನಸೌಧ ಬಳಿಯ ಅಂಬೇಡ್ಕರ್‌ ಪ್ರತಿಮೆ ಎದುರು ಇದಕ್ಕೆ ಚಾಲನೆ ನೀಡಿದ್ದಾರೆ. 

ಮಾಸ್ಕ ದಿನ ಆಚರಿಸುವ ಬಗ್ಗೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಸೋಮವಾರವೇ ಮಾಧ್ಯಮಗಳಿಗೆ ತಿಳಿಸಿದ್ದರು. ‘ಮಾಸ್ಕ್‌ ಧರಿಸುವ ಅಗತ್ಯದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಲ್ಲಿ ‘ಮಾಸ್ಕ್‌ ದಿನ’ ಆಚರಿಸಲು ನಿರ್ಧರಿಸಲಾಗಿದೆ. ಯಾರು ಮಾಸ್ಕ್‌ ಧರಿಸುವುದಿಲ್ಲವೋ ಅವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಅವರಿಗೆ ₹200  ದಂಡ ವಿಧಿಸಲಾಗುವುದು,’ ಎಂದು ತಿಳಿಸಿದ್ದರು. 

ಮಾಸ್ಕ್‌ ದಿನದ ಸಂದೇಶಗಳು

‘ಕೋವಿಡ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್ ಗಳ ಪಾತ್ರ ಅತ್ಯಂತ ಮಹತ್ವವಾದದ್ದು. ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಕೊರೊನಾದಿಂದ ರಕ್ಷಿಸಿಕೊಳ್ಳೋಣ,’ ಎಂದು ಮುಖ್ಯಮಂತ್ರಿಗಳ ಕಚೇರಿಯಿಂದ ಟ್ವೀಟ್‌ ಮಾಡಲಾಗಿದೆ. 

‘ಕೊರೊನಾ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಮಾಸ್ಕ್ ಧರಿಸುವುದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಇಂದು 'ಮಾಸ್ಕ್ ದಿನ' ಆಚರಿಸಲಾಗುತ್ತಿದೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಾಸ್ಕ್ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದೆ. ಪ್ರತಿ ಬಾರಿ ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ. ಇತರರಿಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಿ,’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್‌ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ. 

‘ರಾಜ್ಯಾದ್ಯಂತ ಎಲ್ಲರೂ ಮಾಸ್ಕ್‌ಗಳನ್ನು ಕಡ್ಡಾಯವಾಗಿ ಧರಿಸೋಣ. 'ಮಾಸ್ಕ್ ದಿನ'ವನ್ನು ಯಶಸ್ವಿಗೊಳಿಸೋಣ. ಮಾಸ್ಕ್ ಗಳ ಮಹತ್ವ ಅರಿಯೋಣ, ಸ್ವಸ್ಥ ಸಮಾಜ ನಿರ್ಮಿಸೋಣ,’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ. 

‘ಶುಭೋದಯ ಗೆಳೆಯರೆ. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿ. ಹಾಗೆಯೇ ನಿಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸಿ,’ ಎಂದು ಟ್ರಾಫಿಕ್‌ ಪೋಲಿಸ್‌ ವಿಭಾಗ ಮನವಿ ಮಾಡಿದೆ. 

"Mask Day" ಟ್ರೆಂಡಿಂಗ್‌

ಕರ್ನಾಟಕ ಇಂದು ಮಾಸ್ಕ್‌ ದಿನ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಟ್ವಿಟರ್‌ನಲ್ಲಿ ಹಲವರು ಸಂದೇಶ ಹಂಚಿಕೊಳ್ಳುತ್ತಿದ್ದಾರೆ. ಹೀಗಾಗಿ "Mask Day" ಟ್ವಿಟರ್‌ನಲ್ಲಿ ಟ್ರೆಂಡಿಂಗ್‌ ಆಗಿದೆ. ಮಾಸ್ಕ್‌ ಧರಿಸಬೇಕಾದ ಅಗತ್ಯ, ಅನಿವಾರ್ಯತೆ ಕುರಿತು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು