ಭಾನುವಾರ, ಆಗಸ್ಟ್ 1, 2021
22 °C

ಸಾರಿಗೆ ಸಿಬ್ಬಂದಿ ವೇತನ ಕಡಿತ ಇಲ್ಲ: ಸಾರಿಗೆ ಸಚಿವ ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ ಇಲಾಖೆ ಸಂಕಷ್ಟದಲ್ಲಿರುವ ಕಾರಣ ಅನಗತ್ಯವಾಗಿ ಹೊರಗುತ್ತಿಗೆ ಸಿಬ್ಬಂದಿ ಪಡೆಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ, ಇರುವ ಸಿಬ್ಬಂದಿಗೆ ಯಾವುದೇ ಕಾರಣಕ್ಕೂ ವೇತನ ಕಡಿತ ಮಾಡುವುದಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದರು.

ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಮೊದಲು ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದೆವು. ಅದನ್ನು ಈಗ ನಿಲ್ಲಿಸಿದ್ದು, ಇಲಾಖೆಗೆ ವರ್ಷಕ್ಕೆ ₹5ರಿಂದ ₹6 ಕೋಟಿ ಉಳಿಯುತ್ತದೆ. ಸಿಬ್ಬಂದಿ ಕೊರೊನಾ ವಾರಿಯರ್‌ಗಳೆಂದು ಕೆಲಸ ಮಾಡುತ್ತಿದ್ದಾರೆ. ಸಂಸ್ಥೆಗಳಿಗೆ ಆದಾಯ ಬಾರದಿದ್ದರೂ ಅವರಿಗೆ ವೇತನದಲ್ಲಿ ವ್ಯತ್ಯಾಸವಾಗುವುದಿಲ್ಲ. ಸಿಬ್ಬಂದಿ ವೇತನಕ್ಕೆ ಪ್ರತಿ ತಿಂಗಳು ₹326 ಕೋಟಿ ಬೇಕಾಗುತ್ತದೆ. ಶೇ 75ರಷ್ಟು ಸರ್ಕಾರ ಮತ್ತು ಶೇ 25ರಷ್ಟು ಸಾರಿಗೆ ಸಂಸ್ಥೆಗಳು ವೇತನಕ್ಕೆ ಹಣ ನೀಡುತ್ತಿವೆ’ ಎಂದರು.

ಬಸ್ ಓಡಿಸಲು ಸಿದ್ಧ: ಪೂರ್ಣ ಪ್ರಮಾಣದಲ್ಲಿ ಬಸ್‌ ಓಡಿಸಲು ನಾವು ಸಿದ್ಧರಿದ್ದೇವೆ; ಆದರೆ ಪ್ರಯಾಣಿಕರೇ ಬರುತ್ತಿಲ್ಲ. ಆದ್ದರಿಂದ ಅನಗತ್ಯವಾಗಿ ಬಸ್‌ಗಳ ಓಡಾಟ ಕಡಿಮೆ ಮಾಡಬೇಕಾಗುತ್ತದೆ ಎಂದರು.

ಇದಕ್ಕೂ ಮೊದಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಜೊತೆ ಸಭೆ ನಡೆಸಿದ ಸವದಿ ‘ವಿಜಯಪುರದಿಂದ ಸಂಕೇಶ್ವರದವರೆಗಿನ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಮೊದಲ ಹಂತದ ಟೆಂಡರ್ ಆಗಿದ್ದು, ಎರಡು ಮತ್ತು ಮೂರನೇ ಹಂತದಲ್ಲಿ ಆಗಬೇಕಾಗಿದೆ. ಈ ಕುರಿತು ಜೋಶಿ ಅವರೊಂದಿಗೆ ಚರ್ಚಿಸಿದ್ದೇನೆ. ಅವರು ನಿತಿನ್‌ ಗಡ್ಕರ್‌ ಅವರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ದೆಹಲಿಗೆ ಬರುವಂತೆ ತಿಳಿಸಿದ್ದಾರೆ’ ಎಂದರು.

ಕೋವಿಡ್‌ 19 ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ಸಿದ್ದರಾಮಯ್ಯ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿ ‘ರಾಜ್ಯದಲ್ಲಿ ಕೊರೊನಾ ಸೋಂಕು ಪತ್ತೆಯಾದಾಗಿನಿಂದ ಇಲ್ಲಿಯವರೆಗೆ ₹600 ಕೋಟಿಯ ಉಪಕರಣಗಳನ್ನಷ್ಟೇ ಖರೀದಿಸಿದ್ದೇವೆ. ಅದು ಹೇಗೆ ₹2,000 ಕೋಟಿ ಹಗರಣ ನಡೆಯಲು ಸಾಧ್ಯ’ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರು ಆರೋಪ ಮಾಡುವ ಮೊದಲು ತಮ್ಮ ಸ್ಥಾನದ ಘನತೆ ಅರ್ಥ ಮಾಡಿಕೊಳ್ಳಬೇಕು. ಅವರ ಮಾತುಗಳು ಜನ ಒಪ್ಪುವಂತೆ, ಸತ್ಯಕ್ಕೆ ಹತ್ತಿರವಿರಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು