ಗುರುವಾರ , ಜೂಲೈ 2, 2020
28 °C

ಕೋವಿಡ್ ವಾರಿಯರ್ಸ್‌ ವೇತನ ಕೂಡಲೇ ಬಿಡುಗಡೆ ಮಾಡಿ: ಯು.ಟಿ. ಖಾದರ್ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಕೋವಿಡ್ ವಾರಿಯರ್ಸ್‌ಗಳಾದ ವೈದ್ಯರು, ಶುಶ್ರೂಷಕಿಯರು ಸೇರಿದಂತೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಅಡಿಯಲ್ಲಿ ಕಾರ್ಯನಿರ್ವಹಿಸುವವರ ಕಳೆದ ಎರಡು ತಿಂಗಳ ವೇತನವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಶಾಸಕ ಯು.ಟಿ.ಖಾದರ್ ಆಗ್ರಹಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಹೂ ಸುರಿಸುವುದು, ಚಪ್ಪಾಳೆ ಹೊಡೆದರೆ ಸಾಲದು. ತಮ್ಮ ಜೀವ ಪಣಕ್ಕಿಟ್ಟು ಕೆಲಸ ಮಾಡುವ ಕೋವಿಡ್ ವಾರಿಯರ್ಸ್‌ಗೆ ವೇತನವನ್ನು ಸರಿಯಾದ ಸಮಯಕ್ಕೆ ನೀಡಿದರೆ ಮಾತ್ರ ಅವರು ಸ್ವಾಭಿಮಾನ ಮತ್ತು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯ ಎಂದರು.

ಸರ್ಕಾರದ ವೈಫಲ್ಯದಿಂದಾಗಿ ವಿದೇಶ ಹಾಗೂ ಹೊರ ರಾಜ್ಯದಿಂದ ಬರುವ ಕನ್ನಡಿಗರಲ್ಲಿ ಕೋವಿಡ್-19  ಸೋಂಕು ಪ್ರಕರಣ ಹೆಚ್ಚಾಗಿದೆ ಎಂದು ಶಾಸಕ ಅವರು ಗಂಭೀರ ಆರೋಪ ಮಾಡಿದರು.

ಸಮರ್ಪಕ ಕಾರ್ಯ ಯೋಜನೆಗಳು ಇಲ್ಲದೇ ಏಕಾಏಕಿ ಲಾಕ್‌ಡೌನ್‌ ಘೋಷಿಸಿರುವುದು ಹಾಗೂ ಈಗ ರಾಜ್ಯ ಸರ್ಕಾರವು ಬೇರೆ ರಾಜ್ಯದಲ್ಲಿರುವ ಕನ್ನಡಿಗರನ್ನು ಕರೆಯಿಸಿಕೊಳ್ಳುವ ಬದಲು, ಬರುವವರಿಗೂ ಅವಕಾಶ ಮುಂದೂಡುತ್ತಿದೆ. ಅವರೆಲ್ಲ ಹೆಚ್ಚು ದಿನ ಹೊರಗೆ ಉಳಿದಿರುವುದೇ ಇನ್ನಷ್ಟು ಪ್ರಕರಣ ಹೆಚ್ಚಲು ಕಾರಣವಾಗಿದೆ ಎಂದು ದೂರಿದರು.

ಲಾಕ್‌ಡೌನ್ ಘೋಷಣೆ ಸಂದರ್ಭವೇ ಅವರು ತವರಿಗೆ ಮರಳಿ ಬರಲು ವ್ಯವಸ್ಥೆ ಮಾಡಿದ್ದರೆ ಇಷ್ಟೊಂದು ಪ್ರಕರಣಗಳು ಏರಿಕೆ ಆಗುತ್ತಿರಲಿಲ್ಲ ಎಂದರು.

ಬೇರೆ ರಾಜ್ಯಕ್ಕೆ ಕಾರ್ಮಿಕರು ಹೋಗಲು ಅನುಮತಿ ಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಮರೆತು ಒಂದೊಂದು ರಾಜ್ಯಗಳು ಬೇಕಾಬಿಟ್ಟಿ ಕಾನೂನು ರೂಪಿಸುತ್ತಿವೆ. ನಾವೆಲ್ಲರೂ ಭಾರತೀಯರು ಎಂಬುದನ್ನು ಮರೆಯುತ್ತಿದ್ದಾರೆ ಎಂದು ಖಂಡಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು