ಭಾನುವಾರ, ಸೆಪ್ಟೆಂಬರ್ 20, 2020
21 °C
ಮೇಜರ್ ಮುನ್ರೋ ಮೊದಲ ಕಲೆಕ್ಟರ್, ಎಸ್. ಸಸಿಕಾಂತ್ ಸೆಂಥಿಲ್‌ 128ನೇ ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲೆಗೆ ಈಗ 220 ವರುಷ

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಇಂದಿಗೆ 220 ವರ್ಷ. ಮೇಜರ್ ಮನ್ರೋ ಮೊದಲ ಕಲೆಕ್ಟರ್ ಆಗಿದ್ದರು. ಅದುವೇ, ಆಡಳಿತಾತ್ಮಕವಾಗಿ ಜಿಲ್ಲೆಯ ಹುಟ್ಟು. ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್‌ ಜಿಲ್ಲೆಯ 128ನೇ ಸಾರಥಿ.

1799ರ ಜುಲೈ 8ರಂದು ಮಂಗಳೂರನ್ನು ಕೇಂದ್ರವಾಗಿರಿಸಿಕೊಂಡ ಬ್ರಿಟಿಷರ ಈಸ್ಟ್‌ ಇಂಡಿಯಾ ಕಂಪೆನಿ ಆಡಳಿತವು ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಕಾಸರಗೋಡು ಜಿಲ್ಲೆಯ ಕಾಂಞಿಂಗಾಡು ತನಕದ ಪ್ರದೇಶವನ್ನು ‘ಕೆನರಾ’ಜಿಲ್ಲೆ ಎಂದು ಘೋಷಿಸಿತ್ತು.(ಲಕ್ಷದೀಪವೂ ಜಿಲ್ಲೆಗೆ ಸೇರ್ಪಟ್ಟಿತ್ತು).

ಅಂದಿನಿಂದ 1857ರ ತನಕ ಈಸ್ಟ್‌ ಇಂಡಿಯಾ ಕಂಪನಿಯ ಆಡಳಿತಕ್ಕೆ ಒಳಪಟ್ಟಿತ್ತು. ಆ ಬಳಿಕ ಬ್ರಿಟಿಷರೇ ನೇರ ಆಳ್ವಿಕೆ ಆರಂಭಿಸಿದ್ದರು. 16ನೇ ಏಪ್ರಿಲ್ 1862ರಲ್ಲಿ ಜಿಲ್ಲೆಯನ್ನು ‘ಉತ್ತರ ಕನ್ನಡ’ ಎಂದು ವಿಭಜಿಸಿ ಮುಂಬೈ ಪ್ರೆಸಿಡೆನ್ಸಿಗೆ ಸೇರಿಸಲಾಗಿತ್ತು. ‘ದಕ್ಷಿಣ ಕನ್ನಡ’ ಜಿಲ್ಲೆಯನ್ನು ಮದ್ರಾಸ್ ಪ್ರೆಸಿಡೆನ್ಸಿಗೆ ನೀಡಲಾಯಿತು. 

‘ಹತ್ತಿಯ ಅಂತರರಾಷ್ಟ್ರೀಯ ವ್ಯಾಪಾರವನ್ನು ಮುಂಬೈ ಮೂಲಕ ನಡೆಸಲು ಉತ್ತರ ಕನ್ನಡ ಜಿಲ್ಲೆಯನ್ನು ಮುಂಬೈ ಪ್ರಾಂತ್ಯಕ್ಕೆ ವರ್ಗಾಯಿಸಲ್ಪಟ್ಟಿದೆ’ ಎಂದು ಬ್ರಿಟಿಷರು ಸ್ಪಷ್ಟನೆ ನೀಡಿದ್ದರು. ಆದರೆ, ‘1857ರ ಸಿಫಾಯಿ ದಂಗೆ ಸರಣಿಯು ಕೆನರಾ ಜಿಲ್ಲೆಯಲ್ಲಿ ಮುಂದುವರಿದು, ಬಿಟಿಷರ ವಿರುದ್ಧದ ಹೋರಾಟ ನಡೆಯಿತು. ಇದುವೇ ಕೆನರಾ ಜಿಲ್ಲೆಯ ವಿಭಜನೆಗೆ ಮೂಲ ಪಚೋದನೆಯಾಗಿತ್ತು’ ಎಂದು ಇತಿಹಾಸಕಾರರು ದಾಖಲಿಸಿದ್ದನ್ನು ಗೆಜೆಟಿಯರ್‌ನಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲಿಂದ 1947ರ ತನಕವೂ ಬ್ರಿಟಿಷ್ ಆಡಳಿತವಿತ್ತು. ಸ್ವತಂತ್ರ ಭಾರತದಲ್ಲಿ ಭಾಷಾವಾರು ರಾಜ್ಯಗಳ ಪುನರ್ ವಿಂಗಡಣೆಯ ಶಿಫಾರಸ್ಸಿನಂತೆ 1ನೇ ನವೆಂಬರ್ 1956ರಂದು ‘ಮೈಸೂರು ರಾಜ್ಯ’ವು ಅಸ್ತಿತ್ವಕ್ಕೆ ಬಂದಾಗ, ‘ದಕ್ಷಿಣ ಕನ್ನಡ ಜಿಲ್ಲೆ’ಯನ್ನು ಈ ಹೊಸ ರಾಜ್ಯಕ್ಕೆ ಸೇರಿಸಲಾಯಿತು. ಆದರೆ, ಜಿಲ್ಲೆಯ ಭಾಗವಾಗಿದ್ದ ಕಾಸರಗೋಡನ್ನು ಕೇರಳ ರಾಜ್ಯಕ್ಕೆ ಸೇರಿಸಲಾಯಿತು. 1997ರಲ್ಲಿ ಮತ್ತೆ ವಿಂಗಡಿಸಿ ಉಡುಪಿ ಜಿಲ್ಲೆ ರಚಿಸಲಾಯಿತು. ಮಂಗಳೂರು ಕೇಂದ್ರವಾಗಿ ರಚನೆಗೊಂಡಿದ್ದ ಜಿಲ್ಲೆಯು ಪ್ರಸ್ತುತ ನಾಲ್ಕು ಜಿಲ್ಲೆಗಳಾಗಿ ವಿಭಜನೆಗೊಂಡಿವೆ.

ಜಿಲ್ಲೆಗೂ ಪೂರ್ವ: ಈ ಪ್ರದೇಶವು ಕ್ರಿಸ್ತ ಪೂರ್ವ 14 ನೇ ಶತಮಾನದ ಅಂತ್ಯದ ತನಕ ಆಳುಪರಿಂದ ಆಳಲ್ಪಟ್ಟಿತ್ತು. ಅಲ್ಲಿಂದ 16 ನೇ ಶತಮಾನದವರೆಗೆ ವಿಜಯ ನಗರದ ಸಾಮ್ರಾಜ್ಯದ ಆಡಳಿತಕ್ಕೆ ಒಳಪಟ್ಟಿತ್ತು. ಕೆಳದಿ ನಾಯಕರೂ ಆಳಿದ್ದರು. 15ನೇ ಶತಮಾನದಲ್ಲಿ  ಪೋರ್ಚುಗೀಸರ ಪ್ರಭಾವದಿಂದ ವ್ಯಾಪಾರಕ್ಕಾಗಿ ಕಾರ್ಖಾನೆಗಳು ತೆರೆಯಲ್ಪಟ್ಟವು. 1763 ರಲ್ಲಿ ಹೈದರಾಲಿಯು ಮಂಗಳೂರನ್ನು ಮುಖ್ಯ ಬಂದರನ್ನಾಗಿಸಿದರು. 1799 ರಲ್ಲಿ ಟಿಪ್ಪುವಿನ ಸಾಮ್ರಾಜ್ಯದ ಅವನತಿಯ ನಂತರ, ಬ್ರಿಟಿಷರು  ‘ಕೆನರಾ’ ಜಿಲ್ಲೆಯಾಗಿ ಘೋಷಿಸಿದ್ದರು.

ಜಿಲ್ಲೆ ಕುರಿತು ಇನ್ನಷ್ಟು: ಮೊದಲ ಕಲೆಕ್ಟರ್ ಮೇಜರ್‌ ಮುನ್ರೋ ಭೂ ವಿತರಣೆ ಹಾಗೂ ಕಂದಾಯ ವಸೂಲಿಯ ಬಗ್ಗೆ ಹಲವು ಕ್ರಾಂತಿಕಾರಿ ಪರಿವರ್ತನೆಗಳನ್ನು ಕೈಗೊಂಡಿದ್ದರು. ಆದರೆ, ಅನಂತರ ಬಂದವರು, ನೂತನ ಕಂದಾಯ ವಸೂಲಾತಿಯ ನಿಯಮಗಳನ್ನು  ಜಾರಿಗೊಳಿಸಿದರು. 1830ರ ಸುಮಾರಿಗೆ ಆರ್ಥಿಕ ಸಂಕಷ್ಟದ ಕಾರಣ ರೈತರು ಕರ ನಿರಾಕರಣೆ ಮಾಡಿದರು. ಬ್ರಿಟಿಷ್ ಆಡಳಿತವು ಆರಂಭದಲ್ಲಿ ದಬ್ಬಾಳಿಕೆ ಧೋರಣೆ ಅನುಸರಿಸಿದರೂ, ಕೊನೆಗೂ ಮಣಿದು ಭೂಕಂದಾಯದ ಪದ್ಧತಿಯಲ್ಲಿ ಸುಧಾರಣೆ ತಂದಿತು.

ಇತಿಹಾಸ: ಕಿ.ಶ.1801ರಲ್ಲಿ ಬಂದ ಡಾ.ಫ್ರಾನ್ಸಿನ್ಸ್ ಬುಕಾನನ್‌ ಈ ಪ್ರದೇಶದ ಬಗ್ಗೆ ವರದಿಯನ್ನು ಸಲ್ಲಿಸಿದ್ದರು. ಫ್ರೆಂಚ್ ಯಾತ್ರಿಕ ಫಾನ್‌ಕೋಯಿಸ್ ಪೈರಾಡ್ (1600), ಪಿಯಾತೋಡೆಲ್ಲವೆಲ್ಲೆ (1633), ಪೀಟರ್‌ಮಂಡಿರ, (1636–37), ಫೈಯರ್ (1674–76), ತೇವ್ನೋಟ್ (1664) ಮೊದಲಾದವರ ವರದಿಗಳು ಆಕರಗಳಾಗಿವೆ ಎಂದು ಗೆಜೆಟಿಯರ್‌ನಲ್ಲಿ ಉಲ್ಲೇಖಿಸಿದೆ.

ಆಡಳಿತ ಸುಧಾರಣೆಗಾಗಿ ಮಂಗಳೂರು ಮುನಿಸಿಪಾಲಿಟಿಯನ್ನು 1866ರಲ್ಲಿ ಅಸ್ತಿತ್ವಕ್ಕೆ ತರಲಾಗಿತ್ತು. ಸ್ವಾತಂತ್ರ್ಯಾನಂತರ 1952ರಲ್ಲಿ ಜರುಗಿದ ಮೊದಲ ಚುನಾವಣೆಯಲ್ಲಿ ಮದ್ರಾಸ್‌ ರಾಜ್ಯದ ವಿಧಾನಸಭೆಗೆ ಜಿಲ್ಲೆಯ ಕುಂದಾಪುರ, ಕಾರ್ಕಳ, (ದ್ವಿಸದಸ್ಯ), ಬಹ್ಮಾವರ, ಉಡುಪಿ, ಪುತ್ತೂರು-ಎ, ಪುತ್ತೂರು-ಬಿ, ಪಾಣೆಮಂಗಳೂರು, ಮಂಗಳೂರು, ಕಾಸರಗೋಡು ಹಾಗೂ ಹೊಸದುರ್ಗ ಸೇರಿದಂತೆ ಒಟ್ಟು ಹತ್ತು ಕ್ಷೇತಗಳಿಂದ 11 ಸದಸ್ಯರನ್ನು ಆಯ್ಕೆ ಮಾಡಿ ಕಳುಹಿಸಲಾಗಿತ್ತು. ಲೋಕಸಭೆಯ ಎರಡು (ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಉಡುಪಿ) ಕ್ಷೇತ್ರಗಳಿಗೆ ಬಿ. ಶಿವರಾವ್ ಹಾಗೂ ಶ್ರೀನಿವಾಸ ಯು. ಮಲ್ಯ ಆಯ್ಕೆಯಾಗಿದ್ದರು. ವಾಣಿಜ್ಯ, ಶೈಕ್ಷಣಿಕ, ಪ್ರವಾಸೋ ದ್ಯಮ, ಕೈಗಾರಿಕೆ, ಬ್ಯಾಂಕಿಂಗ್ ಹೆಸರುವಾಸಿಯಾದ ದಕ್ಷಿಣ ಕನ್ನಡ ಜಿಲ್ಲೆ, ಒಟ್ಟು 4,859 ಚ.ಕಿ.ಮೀ. ವಿಸ್ತೀರ್ಣ ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು