ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎ: ವಿದ್ಯಾರ್ಥಿಗಳ ದತ್ತಾಂಶ ಕಳವು

Last Updated 23 ನವೆಂಬರ್ 2019, 21:50 IST
ಅಕ್ಷರ ಗಾತ್ರ

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜಾಲತಾಣ ಹ್ಯಾಕ್ ಮಾಡಿರುವ ಸೈಬರ್ ವಂಚಕರು, ಸಾವಿರಾರು ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ಶೈಕ್ಷಣಿಕ ದತ್ತಾಂಶ ಕದ್ದಿದ್ದಾರೆ.

ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಸೇರಿದಂತೆ ಹಲವು ಬಗೆಯ ಪರೀಕ್ಷೆಗಳನ್ನು ಕೆಇಎ ನಡೆಸುತ್ತಿದೆ. ಇಂಥ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಕೆಇಎ ಜಾಲತಾಣದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಈಚಿನ ಕೆಲ ವರ್ಷಗಳಲ್ಲಿ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳ ದತ್ತಾಂಶ ಕದಿಯಲಾಗಿದೆ.

ಕದ್ದ ದತ್ತಾಂಶವನ್ನೆಲ್ಲ ‘ನೆಟ್‌ಲಾಗ್‌’ ಸೇರಿದಂತೆ ಕೆಲ ಖಾಸಗಿ ವೆಬ್‌ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಆ ದತ್ತಾಂಶ ಗಮನಿಸಿ ಆತಂಕಗೊಂಡಿದ್ದ ಕೆಲ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದರು. ಪ್ರಾಧಿಕಾರ ಆಡಳಿತಾಧಿಕಾರಿ ಎಂ.ಶಿಲ್ಪಾ ಅವರು ಆಂತರಿಕ ತನಿಖೆ ನಡೆಸಿದಾಗ, ಜಾಲತಾಣ ಹ್ಯಾಕ್ ಆಗಿದ್ದು ಗೊತ್ತಾಗಿದೆ. ಮಲ್ಲೇಶ್ವರ ಠಾಣೆಗೆ ಶಿಲ್ಪಾ ದೂರು ನೀಡಿದ್ದಾರೆ.

‘ಲಿಡ್‌ಟ್ಯಾಪ್’ ಸಂಸ್ಥೆಯಿಂದ ಕೃತ್ಯ: ‘ವಿದ್ಯಾರ್ಥಿಗಳ ಮಾಹಿತಿ ಸರ್ವರ್‌ನಲ್ಲಿ ಇರುತ್ತದೆ. ಈ ಪ್ರಕ್ರಿಯೆಗೆ ನ್ಯಾಷನಲ್ ಇನ್‌ಫಾರ್ಮ್ಯಾಟಿಕ್ಸ್ ಸೆಂಟರ್ (ಎನ್ಐಸಿ) ಸಹಾಯ ಪಡೆಯುತ್ತಿದ್ದೇವೆ.ಲಿಡ್‌ಟ್ಯಾಪ್ ಮೀಡಿಯಾ ಆ್ಯಂಡ್ ಮಾರ್ಕೆಟಿಂಗ್’ ಸಂಸ್ಥೆಯು ಜಾಲತಾಣ ಹ್ಯಾಕ್‌ ಮಾಡಿ ದತ್ತಾಂಶ ಕದ್ದಿದ್ದು, ಸಂಸ್ಥೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಶಿಲ್ಪಾ ದೂರಿನಲ್ಲಿ ತಿಳಿಸಿದ್ದಾರೆ.

‘ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ದತ್ತಾಂಶ ಜಾಲತಾಣದಲ್ಲಿತ್ತು. ಅದನ್ನೆಲ್ಲ ಕದ್ದಸಂಸ್ಥೆ, ಖಾಸಗಿ ಜಾಲತಾಣಗಳಿಗೆ ಲಕ್ಷಾಂತರ ರೂಪಾಯಿಗೆ ಮಾರಿರುವುದು ತಿಳಿದುಬಂದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಖಾಸಗಿ ಕಾಲೇಜುಗಳಿಗೂ ಮಾರಾಟ

‘ವೈದ್ಯಕೀಯ,ಎಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋರ್ಸ್‌ ನಡೆಸುವ ಖಾಸಗಿ ಕಾಲೇಜುಗಳಿಗೂ ದತ್ತಾಂಶ ಮಾರಾಟ ಮಾಡಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದರು.

‘ಪರೀಕ್ಷೆ ಬರೆದ ವಿದ್ಯಾರ್ಥಿಗಳ ದತ್ತಾಂಶ ಖರೀದಿಸುವ ಕಾಲೇಜಿನವರು ಅಂಥ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಕರೆ ಮಾಡಿ ಸೀಟಿನ ಬಗ್ಗೆ ವಿಚಾರಿಸುತ್ತಾರೆ. ತಮ್ಮ ಕಾಲೇಜಿನಲ್ಲಿ ಸೀಟು ನೀಡುವುದಾಗಿ ಹೇಳಿ ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಇನ್ನೂ ಹಲವರು ಸೀಟಿನ ಆಮಿಷವೊಡ್ಡಿ ಹಣ ಪಡೆದು ವಂಚಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT