ಸೋಮವಾರ, ಮಾರ್ಚ್ 30, 2020
19 °C
ಡಿ.ಕೆ.ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ; ಜೆಡಿಎಸ್‌ ಮುಖಂಡರ ಚಿತ್ತ ಕಾಂಗ್ರೆಸ್‌ನತ್ತ

ಡಿಕೆಶಿಗೆ ಕೆಪಿಸಿಸಿ ಪಟ್ಟ: ಸಿದ್ಧವಾಗುತ್ತಿದೆಯೇ ಪಕ್ಷಾಂತರಕ್ಕೆ ವೇದಿಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಹೆಸರು ಘೋಷಣೆ ಆಗುತ್ತಿದ್ದಂತೆಯೇ ಜಿಲ್ಲಾ ರಾಜಕಾರಣದ ‘ಒಳಸುಳಿ’ಯಲ್ಲಿ ಪಕ್ಷಾಂತರದ ಸದ್ದು ಕೇಳಿ ಬರುತ್ತಿದೆ.

ಶಿವಕುಮಾರ್ ಜತೆ ಉತ್ತಮ ಸಂಬಂಧ ಹೊಂದಿರುವ ಜೆಡಿಎಸ್‌ನ ಕೆಲವು ಮುಖಂಡರು ಕಾಂಗ್ರೆಸ್‌ನತ್ತ ಕಿರು ನೋಟ ಬೀರಿದ್ದಾರೆ ಎನ್ನುವ ಸುದ್ದಿ ಹೊಸದೇನೂ ಅಲ್ಲ. ಗುಬ್ಬಿ ಶಾಸಕ ಎಸ್‌.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜ್, ಚಿಕ್ಕನಾಯಕಹಳ್ಳಿ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಕೆಲ ಜೆಡಿಎಸ್ ಮುಖಂಡರು ಈ ಹಿಂದೆ ಮಲೇಷ್ಯಾ ಪ್ರವಾಸಕ್ಕೆ ತೆರಳಿದ್ದರು. ಆ ಸಮಯದಲ್ಲೇ ಜೆಡಿಎಸ್‌ನಿಂದ ಈ ಮುಖಂಡರು ದೂರವಾಗಲಿದ್ದಾರೆ ಎಂಬ ಸುದ್ದಿ
ಹರಿದಾಡಿತ್ತು.

ಶ್ರೀನಿವಾಸ್, ಯಾವುದೇ ಪಕ್ಷವನ್ನು ಸೇರುವುದಿಲ್ಲ ಎನ್ನುತ್ತಲೇ ವರಿಷ್ಠರ ನಡೆಗಳನ್ನು ಟೀಕಿಸುತ್ತಿದ್ದರು. ವರಿಷ್ಠರಿಗೆ ಟಾಂಗ್ ನೀಡುತ್ತಿದ್ದರು. ಅವರ ನಿಲುವು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಇತ್ತು. ಮಲೇಷ್ಯಾ ಪ್ರವಾಸದಿಂದ ಬಂದ ಜೆಡಿಎಸ್ ಮುಖಂಡರು ಡಿ.ಕೆ.ಶಿವಕುಮಾರ್ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಜೋರಾಗಿಯೇ ಹರಿದಾಡಿತ್ತು. ಈ ಬೆಳವಣಿಗೆಗಳ ನಡುವೆಯೇ ಶಿವಕುಮಾರ್ ಜೈಲು ಸೇರಿದರು. ಆ ಮೂಲಕ ಜೋರಾಗಿದ್ದ ಸುದ್ದಿ ತಣ್ಣಗಾಗಾಗಿತ್ತು.

ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕನ ಕೊರತೆಯೂ ಕಾಡುತ್ತಿದೆ. ಬೆಮಲ್ ಕಾಂತರಾಜು ತುರುವೇಕೆರೆ ವಿಧಾನಸಭಾ ಕ್ಷೇತ್ರದ ಮೇಲೆ ದೃಷ್ಟಿ ನೆಟ್ಟಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಸಮಯದಲ್ಲೇ ಜೆಡಿಎಸ್‌ನಿಂದ ಟಿಕೆಟ್ ಬಯಸಿದ್ದರು. ಈ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಬಲಿಷ್ಠವಾಗಿಲ್ಲ.

ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಕಾಂತರಾಜ್ ಕಾಂಗ್ರೆಸ್ ಸೇರಿ ತುರುವೇಕೆರೆಯಿಂದ ಸ್ಪರ್ಧಿಸುವರು ಎನ್ನುವ ಮಾತು ಕಾಂಗ್ರೆಸ್ ಮತ್ತು ಜೆಡಿಎಸ್ ಆಂತರಿಕ ವಲಯದಲ್ಲೇ ಕೇಳಿಬರುತ್ತಿವೆ. ಅವರು ಸಹ ಬೇರೆ ವಿಧಾನಸಭಾ ಕ್ಷೇತ್ರಗಳಿಗಿಂತ ತುರುವೇಕೆರೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದಾರೆ. ಅವರ ಈ ನಡೆ ಇದಕ್ಕೆ ಪುಷ್ಟಿ ಒದಗಿಸಿದೆ.

ಜೆಡಿಎಸ್‌ ಚಟುವಟಿಕೆಗಳಿಂದ ದೂರ ಉಳಿದಿರುವ ಸಿ.ಬಿ.ಸುರೇಶ್ ಬಾಬು ಸಹ ಶಿವಕುಮಾರ್ ಮೂಲಕ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗೆ ಶಿವಕುಮಾರ್ ಸಂಪರ್ಕದಲ್ಲಿ ಜಿಲ್ಲೆಯ ಜೆಡಿಎಸ್‌ನ ಹಲವು ಮುಖಂಡರು ಇದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ರಾಜ್ಯ ಕಾಂಗ್ರೆಸ್‌ನಲ್ಲಿ ಕೊರಟಗೆರೆ ಶಾಸಕ ಡಾ.ಜಿ.ಪರಮೇಶ್ವರ ಮುಂಚೂಣಿ ನಾಯಕ. ಪರಮೇಶ್ವರ, ಶಿವಕುಮಾರ್ ನಡುವೆ ಉತ್ತಮ ಸಂಬಂಧ ಇದೆ. ಪರಮೇಶ್ವರ ಅವರಿಗೆ ಪದೇ ಪದೇ ಟಾಂಗ್ ನೀಡುವ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜಣ್ಣ ವಿರುದ್ಧ ಪರಮೇಶ್ವರ ಬೆಂಬಲಿಗರು ಕೆಪಿಸಿಸಿಗೆ ದೂರು ನೀಡಿದಾಗಲೆಲ್ಲಾ ಅವರ ಪರವಾಗಿ ಸಿದ್ದರಾಮಯ್ಯ ನಿಂತಿದ್ದರು. ಈಗ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿರುವುದು
ಪರಮೇಶ್ವರ ಬೆಂಬಲಿಗರಿಗೂ ಖುಷಿ ತಂದಿದೆ ಎನ್ನಲಾಗುತ್ತಿದೆ.

ಧಾರ್ಮಿಕವಾಗಿಯೂ ಬಲ: ಶಿವಕುಮಾರ್ ತಮಗೆ ಕಷ್ಟಗಳು ಎದುರಾದ ಸಮಯದಲ್ಲಿ ಪ್ರಮುಖವಾಗಿ ಆಶ್ರಯಿಸುವುದು ತಿಪಟೂರು ತಾಲ್ಲೂಕಿನ ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿಯನ್ನು. ಅವರು ಮಠದ ‘ಪರಮಭಕ್ತ’. ವಿಲಾಸರಾವ್ ದೇಶ್‌ಮುಖ್ ಮಹಾರಾಷ್ಟ್ರ ಮುಖ್ಯಮಂತ್ರಿ
ಯಾಗಿದ್ದ ವೇಳೆ ಅವರನ್ನು ಸಹ ಇಲ್ಲಿಗೆ ಕರೆತಂದಿದ್ದರು. ಕಾಡಸಿದ್ದೇಶರ ಮಠದ ಕಟ್ಟಡದ ಶಿಲಾಫಲಕದಲ್ಲಿ ಶಿವಕುಮಾರ್ ಹೆಸರಿನ ಮುಂದೆ ‘ಮಹಾದಾನಿ’ ಎನ್ನುವ ಪ್ರಶಂಸೆ ಇದೆ. ಹೀಗೆ ನಾನಾ ರೀತಿಯಲ್ಲಿ ಶಿವಕುಮಾರ್ ಕಲ್ಪತರು ನೆಲದ ಮೇಲೆ ತಮ್ಮ ಪ್ರಭಾವ ಹೊಂದಿದ್ದಾರೆ.

ತಮ್ಮ ಸಂಸದ, ನೆಂಟ ಶಾಸಕ

ಕುಣಿಗಲ್ ವಿಧಾನಸಭಾ ಕ್ಷೇತ್ರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿನ ಸಂಸದರೂ ಆದ ಡಿ.ಕೆ. ಸುರೇಶ್‌ ಸಹೋದರ ಡಿ.ಕೆ.ಶಿವಕುಮಾರ್, ಕುಣಿಗಲ್ ಮೇಲೆ ಹಿಡಿತ ಸಾಧಿಸಿದ್ದಾರೆ. ಬಿ.ಬಿ.ರಾಮಸ್ವಾಮಿಗೌಡ ಅವರಿಗೆ ಟಿಕೆಟ್ ತಪ್ಪಿಸುವ ಮೂಲಕ ತಮ್ಮ ನೆಂಟ ಎಚ್‌.ಡಿ.ರಂಗನಾಥ್ ಅವರಿಗೆ ಟಿಕೆಟ್ ಕೊಡಿಸಿ ಶಾಸಕರನ್ನಾಗಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು