‘ಕೊಟ್ಟ ಹೆಚ್ಚುವರಿ ಸಂಬಳ ವಾಪಸ್ ನೀಡಿ’

ಬುಧವಾರ, ಜೂಲೈ 17, 2019
30 °C
ಯುಜಿಸಿ ವೇತನ ಪಡೆದ ಉಪನ್ಯಾಸಕರಿಗೆ ಹೊಸ ಸಂಕಷ್ಟ

‘ಕೊಟ್ಟ ಹೆಚ್ಚುವರಿ ಸಂಬಳ ವಾಪಸ್ ನೀಡಿ’

Published:
Updated:

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ, ಯುಜಿಸಿ ವೇತನ ಪಡೆಯುತ್ತಿರುವ ಹಲವು ಉಪನ್ಯಾಸಕರಿಗೆ ಹೆಚ್ಚುವರಿಯಾಗಿ ನೀಡಲಾದ ಸುಮಾರು ₹ 22 ಕೋಟಿಯಷ್ಟು ಹಣವನ್ನು ಸರ್ಕಾರಕ್ಕೆ ವಾಪಸ್‌ ನೀಡಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.

2006ರ ಜನವರಿ 1ರಿಂದ 2010ರ ಮಾರ್ಚ್‌ 31ರ ನಡುವೆ ನೇಮಕಗೊಂಡ 600ಕ್ಕೂ ಅಧಿಕ ಉಪನ್ಯಾಸಕರಿಗೆ ಇದು ಅನ್ವಯವಾಗುತ್ತದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಒಬ್ಬಬ್ಬರು ಕನಿಷ್ಠ ₹ 20 ಸಾವಿರದಿಂದ ₹ 1.2 ಲಕ್ಷದವರೆಗೆ ಸರ್ಕಾರಕ್ಕೆ ಬಾಕಿ ಹಣ ಪಾವತಿಸಬೇಕಾಗುತ್ತದೆ.

ಹಿನ್ನೆಲೆ: ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪ್ರತಿ 10 ವರ್ಷಗಳಿಗೊಮ್ಮೆ ತನ್ನ ಬೋಧಕ ವರ್ಗದ ವೇತನ ಪರಿಷ್ಕರಣೆ ಮಾಡುತ್ತದೆ. 2006ರಲ್ಲಿ 6ನೇ ವೇತನ ಆಯೋಗದ ಶಿಫಾರಸಿನಂತೆ ಪದವಿ ಕಾಲೇಜುಗಳಿಗೆ ಬಾಕಿ ರೂಪದಲ್ಲಿ ₹ 1 ಸಾವಿರ ಕೋಟಿ ನೀಡಲಾಗಿತ್ತು. ಆದರೆ ಕಾಲೇಜು ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ, 2006ರ ಜನವರಿ 1ರ ಬಳಿಕ ನೇಮಕಗೊಂಡವರು ಈ ಬಾಕಿ ವೇತನ ಪಡೆಯಲು ಅರ್ಹರಲ್ಲ. ಆದರೆ ಅವರಿಗೂ ಸಹ ಬಾಕಿ ಹಣ ಕೊಡಲಾಗಿತ್ತು.

ಯುಜಿಸಿ ನಿರ್ದೇಶನದ ಮೇರೆಗೆ ಈಗಾಗಲೇ ಹಿಂಬಾಕಿ ರೂಪದಲ್ಲಿ ನೀಡಲಾದ ಹಣವನ್ನು ವಾಪಸ್‌ ಮಾಡುವಂತೆ ಇಲಾಖೆ ಆದೇಶ ನೀಡಿತ್ತು. 2017ರ ಸೆಪ್ಟೆಂಬರ್‌ 1ರೊಳಗೆ ಅದನ್ನು ಮರಳಿಸಬೇಕು ಎಂದು ಮೊದಲಿಗೆ ತಿಳಿಸಲಾಗಿತ್ತು. ಬಳಿಕ ಮೂರು ಕಂತಿನಲ್ಲಿ ಪಾವತಿಸಲು ಸೂಚಿಸಲಾಗಿತ್ತು. ಆದರೆ ಕೊನೆಗೆ ಅದನ್ನು ಸರ್ಕಾರ ಸ್ಥಗಿತಗೊಳಿಸಿತ್ತು.

ಈ ಹಣ ವಸೂಲಿಯನ್ನು ಪ್ರತಿಭಟಿಸಿ ಉಪನ್ಯಾಸಕರು 2017ರಲ್ಲಿ ಮೌಲ್ಯಮಾಪನವನ್ನು ಬಹಿಷ್ಕರಿಸಿದ್ದರು. ಅಂದು ಸರ್ಕಾರ ಹಣ ವಸೂಲಿಯನ್ನು ಸ್ಥಗಿತಗೊಳಿಸಿತ್ತಾದರೂ ಇದೀಗ ಮತ್ತೆ ಹಣ ವಸೂಲಿಗೆ ಇಲಾಖೆ ಮುಂದಾಗಿದೆ. ಯಾವ ಜಿಲ್ಲೆಯಿಂದ ಎಷ್ಟು ಹಣ ಬರಬೇಕು ಎಂಬ ವಿವರವಾದ ಮಾಹಿತಿಯನ್ನು ಜಂಟಿ ನಿರ್ದೇಶಕರಿಂದ ತರಿಸಿಕೊಳ್ಳಲಾಗುತ್ತಿದೆ.

ಮತ್ತೊಂದು ಆಕ್ಷೇಪ: ಉಪನ್ಯಾಸಕರು ಬಾಕಿ ಹಣ ಪಾವತಿಸುವಾಗ 2006ರಿಂದ 2019ರ ಜನವರಿವರೆಗೂ ನೀಡಲಾದ ತುಟ್ಟಿಭತ್ಯೆಯನ್ನೂ ಸೇರಿಸಿಕೊಂಡು ನೀಡಬೇಕು ಎಂದು ಇಲಾಖೆ ಸೂಚಿಸಿರುವುದಕ್ಕೆ ಸಹ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

ಹಣಕಾಸು ಇಲಾಖೆ ಲೆಕ್ಕಾಚಾರ ಮಾಡುವಾಗ ಒಂದಿಷ್ಟು ತಪ್ಪು ಮಾಡಿದೆ. ಮೂಲವೇತನಕ್ಕೆ ಮಾತ್ರ ಹಿಂಬಾಕಿ ಲೆಕ್ಕ ಹಾಕುವ ಬದಲಿಗೆ ಡಿಎ, ಎಚ್‌ಆರ್‌ಎ, ಸಿಸಿಎಗಳನ್ನೂ ಸೇರಿಸಿಕೊಂಡು ಲೆಕ್ಕ ಹಾಕಿತ್ತು. ಇದರಿಂದಾಗಿ ಸುಮಾರು 5 ಸಾವಿರ ಮಂದಿಗೆ ಹೆಚ್ಚು ಲಾಭ ಆಗಿದೆ. ಇದೀಗ ಅವರೆಲ್ಲರೂ 10 ಕಂತುಗಳಲ್ಲಿ ಹೆಚ್ಚುವರಿಯಾಗಿ ದೊರೆತ ವೇತನವನ್ನು ಹಿಂದಕ್ಕೆ ನೀಡಬೇಕು ಎಂದೂ ಇಲಾಖೆ ಸೂಚಿಸಿದೆ.

ಆದರೆ ಸರ್ಕಾರದ ಈ ಕ್ರಮಕ್ಕೆ ಕರ್ನಾಟಕ ಸರ್ಕಾರಿ ಕಾಲೇಜು ಡಾಕ್ಟರೇಟ್‌ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರೊ.ಪ್ರಕಾಶ್‌ ಆಕ್ಷೇಪ ವ್ಯಕ್ತಪಡಿಸಿದ್ದು, ಈಗಾಗಲೇ ಖರ್ಚು ಮಾಡಿರುವ ವೇತನವನ್ನು ವಾಪಸ್‌ ಕೊಡುವುದು ಹೇಗೆ? ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆಯಬೇಕು, ತಪ್ಪಿದಲ್ಲಿ ನಾವು ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯವಾಗುತ್ತದೆ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !