ಶನಿವಾರ, ಜೂನ್ 6, 2020
27 °C

ಕ್ವಾರಂಟೈನ್ ತಪ್ಪಿಸಲು ₹25 ಸಾವಿರಕ್ಕೆ ಬೇಡಿಕೆ; ಮಧ್ಯವರ್ತಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ವಾರಂಟೈನ್‌ ತಪ್ಪಿಸಿ ಮನೆಗೆ ಕಳುಹಿಸಲು ₹ 25 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಆರೋಪಿ ಕೃಷ್ಣೇಗೌಡ (55) ಎಂಬುವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಬ್ಯಾಟರಾಯನಪುರ ನಿವಾಸಿ ಕೃಷ್ಣೇಗೌಡ, ಹೋಟೆಲ್‌ಗಳಿಗೆ ಗ್ರಾಹಕರನ್ನು ಕರೆದೊಯ್ಯುವ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದರು. ವೈದ್ಯ ಬಿ.ವೈ. ನಂದಾ ಎಂಬುವರು ನೀಡಿದ್ದ ದೂರಿನಡಿ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇದೇ 16ರಂದು ದೆಹಲಿಯಿಂದ ಬಂದಿರುವ 70 ಪ್ರಯಾಣಿಕರನ್ನು ಗಾಂಧಿನಗರದ ದೀವಾ ಹೊಟೇಲ್‌ನಲ್ಲಿ 14 ದಿನಗಳ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಮೇ 18ರಂದು ಬೆಳಿಗ್ಗೆ 11ರ ಸುಮಾರಿಗೆ ಹೊಟೇಲ್‌ಗೆ ಬಂದಿದ್ದ ಕೃಷ್ಣೇಗೌಡ, ಕ್ವಾರಂಟೈನ್‌ನಲ್ಲಿದ್ದ ಬ್ರೀಜ್‌ ರಾಣಿ, ಪಿ.ಎಸ್‌. ಜೈನ್‌ ಹಾಗೂ ಪ್ರೇಮ್‌ಕುಮಾರ್‌ ಎಂಬುವರನ್ನು ಪರಿಚಯಿಸಿಕೊಂಡಿದ್ದರು.’

‘ಕ್ವಾರಂಟೈನ್‌ಗಾಗಿ ಆಗುತ್ತಿರುವ ಖರ್ಚಿನ ಬಗ್ಗೆ ಆರೋಪಿ ವಿಚಾರಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕ್ವಾರಂಟೈನ್‌ನಲ್ಲಿದ್ದವರು,  ‘ದಿನಕ್ಕೆ ₹1,400 ಬಾಡಿಗೆಯಂತೆ ₹19,600 ಪಾವತಿಸಬೇಕು. ವೈದ್ಯಕೀಯ ಪರೀಕ್ಷೆಗೆ ₹ 8 ಸಾವಿರ ಕೊಡಬೇಕು’ ಎಂದಿದ್ದರು. ಅವಾಗಲೇ  ಕೃಷ್ಣೇಗೌಡ, ‘ನನಗೆ ₹25 ಸಾವಿರ ಕೊಟ್ಟರೆ ವೈದ್ಯಕೀಯ ಪರೀಕ್ಷೆ ಬಳಿಕವೇ ಯಾವುದೇ ಕ್ವಾರಂಟೈನ್ ಇಲ್ಲದೇ ಮನೆಗೆ ಕಳಿಸುತ್ತೇನೆ’ ಎಂದು ಆಮಿಷವೊಡ್ಡಿದ್ದರು. ಈ ಸಂಗತಿ ದೂರಿನಲ್ಲಿತ್ತು’ ಎಂದು ಪೊಲೀಸರು ಹೇಳಿದರು.

‘ಹಲವು ವರ್ಷಗಳಿಂದ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಹೋಟೆಲ್ ಮಾಲೀಕರ ಜೊತೆಯೂ ಸಂಪರ್ಕ ಇಟ್ಟುಕೊಂಡಿದ್ದರು. ಪ್ರಕರಣದಲ್ಲಿ ಮಾಲೀಕರ ಪಾತ್ರವೇನು ಎಂಬುದು ತನಿಖೆಯಿಂದ ತಿಳಿಯಬೇಕು’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು