ಮಂಗಳವಾರ, ಸೆಪ್ಟೆಂಬರ್ 28, 2021
24 °C
ರಾಜ್ಯದಲ್ಲಿ 1,823 ಪ್ರಕರಣ ವರದಿ

ಕೊರೊನಾಗಿಂತ ಡೆಂಗಿ ಪೀಡಿತರ ಸಂಖ್ಯೆ ಹೆಚ್ಚು: ಶ್ರೀರಾಮುಲು ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಭೀತಿ ನಡುವೆಯೇ ಡೆಂಗಿ ಜ್ವರ ಕೂಡ ಜನರನ್ನು ಕಾಡಲಾರಂಭಿಸಿದೆ. ರಾಜ್ಯದಲ್ಲಿ 1,823 ಡೆಂಗಿ ಪ್ರಕರಣಗಳು ವರದಿಯಾಗಿವೆ. 

ಕಳೆದ ವರ್ಷ ಈ ವೇಳೆಗೆ ರಾಜ್ಯದಲ್ಲಿ 809 ಮಂದಿ ಈ ಜ್ವರದಿಂದ ಬಳಲಿದ್ದರು. ಮುಂಗಾರು ಮಳೆ ಪ್ರಾರಂಭವಾದ ಬಳಿಕ ಜ್ವರಕ್ಕೆ ಬಳಲಿದವರ ಸಂಖ್ಯೆ ಹೆಚ್ಚಳವಾಗಿತ್ತು. ವರ್ಷಾಂತ್ಯಕ್ಕೆ 18,183 ಪ್ರಕರಣಗಳು ವರದಿಯಾಗಿದ್ದವು. ಅದರಲ್ಲಿ 17 ಮಂದಿ ಜ್ವರದ ತೀವ್ರತೆಯಿಂದ ಮೃತಪಟ್ಟಿದ್ದರು. ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕಾಡುವ ಜ್ವರ, ಈ ವರ್ಷ ಅವಧಿಗೂ ಮುನ್ನವೇ ಸಾವಿರಕ್ಕೂ ಅಧಿಕ ಮಂದಿಯನ್ನು ಅಸ್ವಸ್ಥಗೊಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. 

ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಿಂದ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗಲಿದ್ದು, ಆ ಸೊಳ್ಳೆಗಳ ಕಡಿತದಿಂದ ಡೆಂಗಿ ಜ್ವರ ಬರುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ 46,958 ಮಂದಿ ಡೆಂಗಿ ಜ್ವರದಿಂದ ಬಳಲಿದ್ದಾರೆ. 39 ಮಂದಿ ಸಾವಿಗೀಡಾಗಿದ್ದಾರೆ. ಈ ಜ್ವರಕ್ಕೆ ಲಸಿಕೆ ಲಭ್ಯ ಇಲ್ಲದ ಪರಿಣಾಮ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ನೋವು, ವಾಕರಿಕೆ, ವಾಂತಿ ಹಾಗೂ ಆಂತರಿಕ ರಕ್ತಸ್ರಾವ ಡೆಂಗಿ ಜ್ವರದ  ಪ್ರಮುಖ ಲಕ್ಷಣವಾಗಿದೆ. 

‘ಮುಂಗಾರು ಮಳೆ ಪ್ರಾರಂಭವಾದ ಬಳಿಕ ಡೆಂಗಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈಡಿಸ್ ಎಂಬ ಸೊಳ್ಳೆ ಕಡಿತದಿಂದ ಈ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈ ಸೊಳ್ಳೆ, ಸಂಗ್ರಹಿಸಿಟ್ಟ ನೀರಿನಲ್ಲಿ ಮೊಟ್ಟೆಯಿಟ್ಟು, ಸಂತಾನೋತ್ಪತ್ತಿ ಮಾಡುತ್ತದೆ. ಜನರಲ್ಲಿ ಸ್ವಚ್ಛತೆ ಬಗ್ಗೆ ಇರುವ ಅಸಡ್ಡೆ ಹಾಗೂ ಜಾಗೃತಿ ಕೊರತೆ ರೋಗ ಹೆಚ್ಚಳಕ್ಕೆ ಪ್ರಮುಖ ಕಾರಣ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು