ಗುರುವಾರ , ಜುಲೈ 7, 2022
23 °C

'ಭಾರತ ಸೇಲ್‌, ಭಾರತ ಜೈಲ್‌’ ಪರಿಸ್ಥಿತಿ: ದೇವನೂರ ಮಹಾದೇವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ಭಾರತ ‘ಸೇಲ್‌’ ಮಾಡಲಾಗುತ್ತಿದೆ. ಮತ್ತೊಂದೆಡೆ, ಸಿಎಎ, ಎನ್‌ಆರ್‌ಸಿಯಂತಹ ಕಾನೂನು ತರುವ ಮೂಲಕ ದೇಶದ ಪೌರರಿಗೆ ಸಂಕಷ್ಟ ತಂದು, ಭಾರತವನ್ನೇ ‘ಜೈಲ್‌’ ಮಾಡುವ ಸಿದ್ಧತೆ ನಡೆಯುತ್ತಿದೆ’ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.

ನಗರದಲ್ಲಿ ಶನಿವಾರ ಕೆನರಾ ಬ್ಯಾಂಕ್‌ ಸ್ಟಾಫ್‌ ಫೆಡರೇಷನ್ (ಸಿಬಿಎಸ್‌ಎಫ್‌)ನ ಅಖಿಲ ಭಾರತ ಐದನೇ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭಾರತ್‌ ‍‍ಪೆಟ್ರೋಲಿಯಂ ಸಂಸ್ಥೆ ಐದು ವರ್ಷಗಳಿಂದ ಸತತವಾಗಿ ಸರಾಸರಿ ₹5 ಸಾವಿರ ಕೋಟಿಗಳಿಗೂ ಹೆಚ್ಚು ಲಾಭ ಗಳಿಸುತ್ತ ಬಂದಿದೆ. ಈ ಕಂಪನಿಯು ಸರ್ಕಾರಕ್ಕೆ ಡಿವಿಡೆಂಡ್, ಜಿಎಸ್‌ಟಿ, ಕಾರ್ಪೊರೇಟ್‌ ತೆರಿಎ ರೂಪದಲ್ಲಿ ಐದು ವರ್ಷಗಳಲ್ಲಿ ₹30 ಸಾವಿರ ಕೋಟಿ ಸಂದಾಯ ಮಾಡಿದೆ. ಆದರೆ, ಈ ಕಂಪನಿಯನ್ನು ಸರ್ಕಾರ ಕೇವಲ ₹60 ಸಾವಿರ ಕೋಟಿಗೆ ಮಾರಿಬಿಡುತ್ತಿದೆ’ ಎಂದರು. 

ಬುಡಕ್ಕೆ ಕೊಡಲಿಯೇಟು

‘ಮೊದಲಿದ್ದ ಟ್ರೇಡ್‌ ಯೂನಿಯನ್‌ಗಳಿಗೂ, ಈಗಿನ ವೃತ್ತಿ ಸಂಘಟನೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಜಾಗತೀಕರಣ, ಖಾಸಗೀಕರಣ ನಂತರ, ಈಗಿನ ವೃತ್ತಿ ಸಂಘಟನೆಗಳಿಗೆ ಕಾಲಿಗೆ ಸರಪಳಿ ಕಟ್ಟಿದಂತಾಗಿ ನಡೆದಾಡಲೂ ಕಷ್ಟ ಪಡುತ್ತಿವೆ’ ಎಂದು ಮಹಾದೇವ ಹೇಳಿದರು. 

‘ಆರ್‌ಬಿಐ 45 (ಇ) ಎಂಬ ಕಾಯ್ದೆಯೊಂದಿದೆ. 1934ರಲ್ಲಿ ಬ್ರಿಟಿಷರು ರೂಪಿಸಿದ ಕಾನೂನು ಇದು. ಬ್ಯಾಂಕುಗಳಿಂದ ಸಾಲ ಪಡೆದ ಬ್ರಿಟಿಷ್‌ ಅಧಿಕಾರಿಗಳು ಹಣ ಪಾವತಿಸದೆ ದಗಾ (ಮೋಸ) ಮಾಡಿದರೆ, ಅದನ್ನು ಗೋಪ್ಯವಾಗಿ ಇಡುವ ಕಾಯ್ದೆ ಇದು. ಇದೇ ಕಾನೂನು ಈಗಲೂ ಜಾರಿಯಲ್ಲಿದ್ದು, ಕಾರ್ಪೊರೇಟ್‌ ಕಂಪನಿ ಕುಳಗಳು ಈ ಗೋಪ್ಯತೆಯ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ’ ಎಂದು ಹೇಳಿದರು. 

‘ಬ್ಯಾಂಕ್‌ಗಳ ಬುಡಕ್ಕೇ ಕೊಡಲಿಯೇಟು ಕೊಡುವಂತಹ ಇಂತಹ ಕಾನೂನಿನ ವಿರುದ್ಧ ಬ್ಯಾಂಕ್‌ ನೌಕರರ ಸಂಘಟನೆಗಳು ಏಕೆ ಹೋರಾಡಲಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ. ಆರ್‌ಬಿಐ 45 (ಇ) ವಿರುದ್ಧ ಸಂಘಟನೆಗಳು ಹೋರಾಡಿದ್ದರೆ, ಇಡೀ ಜನಸಮುದಾಯ ಬ್ಯಾಂಕ್‌ಗಳು ತಮ್ಮವು ಎಂದುಕೊಳ್ಳುತ್ತಿತ್ತು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು