ಹಿಂಸೆ, ಶೋಷಣೆ ವಿರುದ್ಧ ಸಂದೇಶ ರವಾನಿಸಿ: ಬಿ.ಕೆ.ಹರಿಪ್ರಸಾದ್ ಆಗ್ರಹ

ಕನ್ಯಾಡಿ- ಉಜಿರೆ (ದಕ್ಷಿಣ ಕನ್ನಡ): 'ದೇಶದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ಶೋಷಣೆ ಮತ್ತು ಅಸಹನೆಯ ವಿರುದ್ಧವಾದ ಸಂದೇಶವನ್ನು ಧರ್ಮ ಸಂಸತ್ ಮೂಲಕ ರವಾನಿಸಬೇಕು. ಧರ್ಮದ ಹೆಸರಿನ ಮೃಗೀಯ ವರ್ತನೆಗಳನ್ನು ತಡೆಯಬೇಕು' ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದರು.
ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ ದಶಮಾನೋತ್ಸವ ಪ್ರಯುಕ್ತ ಸೋಮವಾರ ನಡೆದ ರಾಷ್ಟ್ರೀಯ ಧರ್ಮ ಸಂಸತ್ 2018ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಧರ್ಮ ಮನುಷ್ಯರ ನಡುವಿನ ಸಹಬಾಳ್ವೆ, ಶಾಂತಿ, ನೆಮ್ಮದಿಯ ಜೀವನಕ್ಕೆ ನಾಂದಿ ಹಾಡಬೇಕು. ವಸುಧೈವ ಕುಟುಂಬಕಂ ಎಂದರೆ ಎಲ್ಲ ಧರ್ಮದ ಜನರನ್ನೂ ಪ್ರೀತಿಸುವುದು ಎಂದರ್ಥ. ಇತರೆ ಧರ್ಮದ ಜನರನ್ನು ಸಹಿಸುಕೊಳ್ಳುವ, ಗೌರವಿಸುವ ಸಹಿಷ್ಣುತೆಯ ಸಂದೇಶವನ್ನು ಇಲ್ಲಿರುವ ಸಾಧು, ಸಂತರು ನೀಡಬೇಕು ಎಂದರು.
ಖಾಕಿ, ಖಾವಿ ಮತ್ತು ಖಾದಿಗಳು ದೇಶದಲ್ಲಿ ಪ್ರಬಲ ಶಕ್ತಿ ಹೊಂದಿವೆ. ಈಗ ಬೇರೆ ಬೇರೆ ಕಾರಣಗಳಿಗಾಗಿ ಖಾಕಿ ಮತ್ತು ಖಾದಿಗಳು ಮೌಲ್ಯ ಕಳೆದುಕೊಂಡಿವೆ. ಖಾವಿ ಧರಿಸುವುದು ಎಂದರೆ ಸಮಾಜಕ್ಕಾಗಿ ತ್ಯಾಗದ ಜೀವನ ನಡೆಸುವುದು. ಖಾವಿ ತೊಟ್ಟ ಸಂತರು ಶಾಂತಿ, ಸಹಬಾಳ್ವೆಯನ್ನು ಬೆಂಬಲಿಸುವ ಮೂಲಕ ಖಾವಿಯ ಮೌಲ್ಯವನ್ನು ಉಳಿಸಬೇಕು ಎಂದು ಮನವಿ ಮಾಡಿದರು.
ಧರ್ಮದ ಮೇಲೆ ಜನರು ನಂಬಿಕೆ ಇರಿಸುತ್ತಾರೆ. ಆ ನಂಬಿಕೆಗೆ ಮೋಸ ಆಗಬಾರದು. ಎಲ್ಲರನ್ನೂ ಸಮಾನವಾಗಿ ಕಾಣುವ, ಮಹಿಳೆಯರಿಗೆ ರಕ್ಷಣೆ ನೀಡುವ, ಹಿಂಸೆ ಮುಕ್ತ ಧರ್ಮ ಬೇಕು. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ನಿಲ್ಲಬೇಕು ಎಂದರು.
ನಿರ್ಣಯಕ್ಕೆ ವಿರೋಧ: ಮೆಕಾಲೆ ಶಿಕ್ಷಣ ಪದ್ಧತಿ ತೆಗೆದುಹಾಕಿ ರಾಮಾಯಣ, ಮಹಾಭಾರತ, ಭಗವದ್ಗೀತೆ ಬೋಧಿಸಬೇಕು. ಮೊಘಲರ, ಬ್ರಿಟೀಷರ ಕಾಲದಲ್ಲಿ ರಚಿಸಿದ ಹಾಗೂ ಚೀನಾದ ಇತಿಹಾಸಕಾರರು ದಾಖಲಿಸಿದ ಇತಿಹಾಸವನ್ನು ಬೋಧಿಸಬಾರದು ಎಂದು ಆಗ್ರಹಿಸುವ ನಿರ್ಣಯ ಧರ್ಮ ಸಂಸತ್ ಮುಂದಿದೆ. ಈ ನಿರ್ಣಯವನ್ನು ಹರಿಪ್ರಸಾದ್ ವಿರೋಧಿಸಿದರು.
'ರಾಮಾಯಣ, ಮಹಾಭಾರತ, ಭಗವದ್ಗೀತೆ ಬೋಧಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಜ್ಞಾನದ ದೃಷ್ಟಿಯಿಂದ ಇತಿಹಾಸ ಕಲಿಕೆ ಅಗತ್ಯ. ಅದನ್ನು ತಡೆಯುವುದನ್ನು ಬೆಂಬಲಿಸಲಾಗದು' ಎಂದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.