ಮಂಗಳವಾರ, ಆಗಸ್ಟ್ 3, 2021
23 °C
ಸದ್ಯಕ್ಕೆ ತೀರ್ಥ, ಪ್ರಸಾದ ಇಲ್ಲ: ಸುರಕ್ಷತಾ ಕ್ರಮ ಅನುಸರಿಸುವುದು ಕಡ್ಡಾಯ

ದಕ್ಷಿಣ ಕನ್ನಡ | ಧರ್ಮಸ್ಥಳ, ಕೊಲ್ಲೂರು, ಕಟೀಲು ದೇಗುಲಗಳಲ್ಲಿ ಸೋಮವಾರದಿಂದ ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಲಾಕ್‌ಡೌನ್ ಸಡಿಲಿಕೆಯ ಬಳಿಕ ಇದೀಗ ದೇವಸ್ಥಾನಗಳಲ್ಲಿ ಭಕ್ತರಿಗೆ ಅವಕಾಶ ನೀಡಲಾಗುತ್ತಿದ್ದು, ಇದೇ 8ರಿಂದ ಕೆಲ ಷರತ್ತುಗಳೊಂದಿಗೆ ಭಕ್ತಾದಿಗಳು ದೇವರ ದರ್ಶನ ಪಡೆಯಬಹುದಾಗಿದೆ.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಇದೇ 8ರಿಂದ ಮಾಡಿ ಕೊಡಲಾಗುವುದು. ಧರ್ಮಸ್ಥಳದ ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ, ಅನ್ನಪೂರ್ಣ ಭೋಜನ ಮಂದಿರದಲ್ಲಿ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ತಿಳಿಸಿದ್ದಾರೆ.

ಮುಜರಾಯಿ ಇಲಾಖೆಯ ಆದೇಶದಂತೆ ಕೊಲ್ಲೂರು, ಕಟೀಲು ದೇವಸ್ಥಾನಗಳೂ ಸೋಮವಾರ ದೇವರ ದರ್ಶನಕ್ಕೆ ಮುಕ್ತವಾಗಲಿವೆ. ಆದರೆ ಈ ಎರಡು ದೇವಾಲಯಗಳಲ್ಲಿ ಸದ್ಯಕ್ಕೆ ಅನ್ನಪ್ರಸಾದದ ವ್ಯವಸ್ಥೆ ಇರುವುದಿಲ್ಲ. ಮುಖಕ್ಕೆ ಮಾಸ್ಕ್ ಧರಿಸಿರಬೇಕು. ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಬೇಕು. ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಕೈಗೆ ಸ್ಯಾನಿಟೈಸರ್ ಹಾಕಿ ದೇವಸ್ಥಾನದ ಒಳಗೆ ಪ್ರವೇಶ ಮಾಡಬೇಕು.

ಕುದ್ರೋಳಿ ನಾಳೆಯಿಂದ ದರ್ಶನ: ಎರಡೂವರೆ ತಿಂಗಳ ಬಳಿಕ ಇದೇ 8ರಂದು ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ತೆರೆಯಲಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಅಂದು ಬೆಳಿಗ್ಗೆ 8.30ರಿಂದ ಲೋಕಕಲ್ಯಾಣಾರ್ಥ ಹಾಗೂ ಕೊರೊನಾ ಮಹಾಮಾರಿ ಮುಕ್ತಿಗಾಗಿ ಧನ್ವಂತರಿಯಾಗ ನಡೆಯಲಿದೆ. ಮಧ್ಯಾಹ್ನ 11.30ಕ್ಕೆ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಲಿದೆ.

ಕ್ಷೇತ್ರಕ್ಕೆ ಬರುವ ಭಕ್ತರು ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್‌ ಧರಿಸಬೇಕು, ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್‌ನಲ್ಲಿ ಕೈ ಸ್ವಚ್ಛ ಮಾಡಿಕೊಳ್ಳಬೇಕು, ತಾಪಮಾನ ಪರೀಕ್ಷೆ ಮಾಡಬೇಕು, ದೇವಸ್ಥಾನ ಪ್ರವೇಶ ಮತ್ತು ನಿರ್ಗನಕ್ಕೆ ಮೀಸಲಿರಿಸಿದ ದ್ವಾರಗಳಲ್ಲಿಯೇ ತೆರಳಬೇಕು, ದೇವಸ್ಥಾನದಲ್ಲಿರುವ ಗಂಟೆ ಬಾರಿಸುವಂತಿಲ್ಲ, ಯಾವುದೇ ಸ್ವತ್ತುಗಳನ್ನು ಮುಟ್ಟುವಂತಿಲ್ಲ, ದೇವಸ್ಥಾನ ಸುತ್ತಮುತ್ತ ಸ್ವಚ್ಛತೆ ಆದ್ಯತೆ ನೀಡಬೇಕು. ದೇವಸ್ಥಾನದಲ್ಲಿ ಸಿಬ್ಬಂದಿ ಹಾಗೂ ಗೋಕರ್ಣನಾಥ ಸೇವಾ ಬಳಗ ಭಕ್ತರಿಗೆ ಮಾರ್ಗದರ್ಶನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಟೀಲು: ಸುರಕ್ಷಿತ ಅಂತರಕ್ಕೆ ವ್ಯವಸ್ಥೆ

ಮೂಲ್ಕಿ: ಕಟೀಲು ದೇವಳದಲ್ಲಿ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಬರಲು ವ್ಯವಸ್ಥೆ ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆ ಆದೇಶ ನೀಡಿದ್ದು, ಅದರಂತೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇದೇ 8ರಿಂದ ಭಕ್ತರಿಗೆ ದೇವಳ ಪ್ರವೇಶಕ್ಕೆ ಅವಕಾಶವಾಗುವ ಸಾಧ್ಯತೆಯಿದ್ದು, ಎಲ್ಲ ಸೇವೆಗಳು ಭಕ್ತರಿಗೆ ಲಭ್ಯವಾಗಲಿವೆ. ಆದರೆ ಸುರಕ್ಷಿತ ಅಂತರ, ಮಾಸ್ಕ್ ಕಡ್ಡಾಯ ಸೇರಿದಂತೆ ಕೆಲವು ನಿರ್ಬಂಧಗಳನ್ನು ಪಾಲಿಸಬೇಕಾಗಿದೆ.

ಶೀಘ್ರದಲ್ಲಿ ತೆರೆಯಲಿರುವ ಕಟೀಲು ದೇವಳದಲ್ಲಿ ಭಕ್ತರಿಗೆ ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಲು ದೇವಳದ ಹೊರ ಭಾಗದಲ್ಲಿ ಮತ್ತು ಒಳಾಂಗಣದಲ್ಲಿ ಒಂದು ಮೀಟರ್ ದೂರದಲ್ಲಿ ಗುರುತುಗಳನ್ನು ಹಾಕಲಾಗಿದೆ. ದೇವಳದ ಒಳಗೆ ಬರುವ ಭಕ್ತರಿಗೆ ದ್ವಾರದ ಬಳಿಯಿಂದ ಅಂತರವನ್ನು ಕಾಪಾಡಿಕೊಳ್ಳಲು ಗುರುತು ಹಾಕಲಾಗಿದ್ದು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

ಸರ್ಕಾರದ ಸೂಚನೆಯಂತೆ ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿಯೂ ಭಕ್ತರಿಗೆ ದರ್ಶನ ಆರಂಭವಾಗಲಿದ್ದು, ಅಂತರ ಹಾಗೂ ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಸರ್ಕಾರದ ನಿಯಮಗಳಿಗಾಗಿ ದೇವಳದ ಅನುವಂಶಿಕ ಮೊಕ್ತೇಸರರು ಹಾಗೂ ಭಕ್ತ ವೃಂದ ಕಾಯುತ್ತಿದೆ.

ಚರ್ಚ್‌ಗಳಲ್ಲಿ 13ರಿಂದ ಪ್ರಾರ್ಥನೆ

ಮಂಗಳೂರು ಧರ್ಮಪ್ರಾಂತ್ಯದಲ್ಲಿ ಇದೇ 13ರಿಂದ ಸರ್ಕಾರದ ನಿಯಮಗಳನ್ನು ಪಾಲಿಸಿ ಚರ್ಚ್‌ಗಳಲ್ಲಿ ಪ್ರಾರ್ಥನೆ ಆರಂಭಿಸಲಾಗುವುದು ಎಂದು ಧರ್ಮಾಧ್ಯಕ್ಷ ರೆ.ಡಾ.ಪೀಟರ್ ಪಾವ್ಲ್ ಸಲ್ದಾನ್ ತಿಳಿಸಿದ್ದಾರೆ.

ಚರ್ಚ್‌ಗಳಲ್ಲಿ ಬಲಿಪೂಜೆಗಳನ್ನು ನೆರವೇರಿಸುವ ಕುರಿತಂತೆ ಸರ್ಕಾರ ಈಗಾಗಲೇ ಮಾರ್ಗಸೂಚಿ ನೀಡಿದ್ದು, ಅದರಂತೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗಿದೆ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಥರ್ಮಲ್ ಸ್ಕ್ರೀನರ್, ಸ್ಯಾನಿಟೈಸರ್, ಸ್ವಯಂಸೇವಕರು, ಆಸನ ವ್ಯವಸ್ಥೆ ಇತ್ಯಾದಿ ಮಾಡಿಕೊಳ್ಳಬೇಕಾಗಿದೆ.

ಈ ನಿಟ್ಟಿನಲ್ಲಿ ಆಯಾ ಚರ್ಚ್‌ಗಳ ಧರ್ಮಗುರುಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಎಲ್ಲ ನಿಯಮಗಳನ್ನು ಸಿದ್ದಪಡಿಸಿಕೊಂಡಿರುವುದು ಖಾತರಿ ಪಡಿಸಿಕೊಂಡು 13ರಿಂದ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಬಲಿಪೂಜೆಗಳನ್ನು ನೆರವೇರಿಸಬಹುದು. ಈ ಕುರಿತು ಹೆಚ್ಚಿನ ಮಾರ್ಗದರ್ಶಿ ಸೂಚನೆಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು