ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹ ಶಾಸಕರ ಅರ್ಜಿ ವಿಚಾರಣೆ ಮುಕ್ತಾಯ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

Last Updated 25 ಅಕ್ಟೋಬರ್ 2019, 10:05 IST
ಅಕ್ಷರ ಗಾತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಪೂರ್ಣಗೊಂಡಿದ್ದು ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿದೆ.

ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠಅನರ್ಹ ಶಾಸಕರಿಗೆ ಸಂಬಂಧಿಸಿದ ಅರ್ಜಿ ವಿಚಾರಣೆಯ ಪೂರ್ಣ ವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿದೆ. ನವೆಂಬರ್‌ ಮೊದಲ ವಾರದಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.

ಶುಕ್ರವಾರ ಬೆಳಗ್ಗೆಯಿಂದ ಕಪಿಲ್‌ ಸಿಬಲ್‌, ಮುಕುಲ್‌ ರೋಹ್ಟಗಿ, ವಿ.ಗಿರಿ, ಸುಂದರಂ, ಸಜನ್‌ ಪೂವಯ್ಯ ಸೇರಿದಂತೆ ವಿವಿಧ ವಕೀಲರ ವಾದವನ್ನು ತ್ರಿಸದಸ್ಯ ಪೀಠ ಆಲಿಸಿತು. ನ್ಯಾಯಪೀಠಕ್ಕೆ ಸಲ್ಲಿಸಬೇಕಿರುವ ದಾಖಲೆಗಳು ಹಾಗೂ ಬಾಕಿ ಇರುವ ವಾದವನ್ನು ಲಿಖಿತ ರೂಪದಲ್ಲಿ ಶನಿವಾರದ ಒಳಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.

ಬೆಳಗ್ಗೆ ನಡೆದ ವಾದ ಪ್ರತಿವಾದದ ಪೂರ್ಣ ವಿವರ

ಅನರ್ಹ ಶಾಸಕರ ಅರ್ಜಿ ವಿಚಾರಣೆ ಶುಕ್ರವಾರವೂ ಮುಂದುವರೆದಿದ್ದು ಕಾಂಗ್ರೆಸ್‌ ಪಕ್ಷದ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡನೆ ಮಾಡುತ್ತಿದ್ದು ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ವಾದ ಮಂಡಿಸಿದ್ದಾರೆ.

ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಅನರ್ಹತೆಗೆ ಅರ್ಥವೇ ಬರುವುದಿಲ್ಲ, ಸದನದ ಒಳಗಿನ ತೀರ್ಮಾನಗಳಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬಾರದು ಎಂದು ಕಪಿಲ್ ಸಿಬಲ್‌ ವಾದ ಮಂಡಿಸಿದ್ದಾರೆ.

ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದರೆ ಅವರು ಬೇರೆ ಪಕ್ಷದಿಂದ ಸ್ಪರ್ಧೆ ಮಾಡಿ ಮತ್ತೆ ಗೆದ್ದು ಬರುತ್ತಾರೆ, ನಂತರ ಮಂತ್ರಿಗಳಾಗುತ್ತಾರೆ ಅವರಿಗೆ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ನೀಡಬಾರದು ಎಂದು ಬಲವಾಗಿ ವಾದ ಮಂಡನೆ ಮಾಡಿದರು.

ಈ ಪ್ರಕರಣದಲ್ಲಿ 10ನೇ ಶಡ್ಯೂಲ್‌ ಅನ್ವಯವಾಗಿದೆ ಎಂಬುದು ಮುಖ್ಯವಾಗುತ್ತದೆ. ರಾಜೀನಾಮೆ ನೀಡಿದ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡುವ ಅಗತ್ಯ ಎನಿತ್ತು? ಬಳಿಕ ಗುಂಪಾಗಿ ವಿಶೇಷ ವಿಮಾನದಲ್ಲಿ ಮುಂಬೈಗೆ ಹೋಗಿದ್ದರ ಅರ್ಥ ಏನು? ಆ ವಿಶೇಷ ವಿಮಾನ ಯಾರಿಗೆ ಸೇರಿದ್ದು ? ಎಂಬುದನ್ನು ನ್ಯಾಯಾಲಯ ಪರಿಗಣಿಸಬೇಕು ಎಂದು ವಾದ ಮಂಡನೆ ಮಾಡಿದರು.

ರಾಜೀನಾಮೆ ನೀಡಿರುವುದು ನೈಜವೇ ಎಂಬುದನ್ನು ಸ್ವೀಕರ್‌ ಪರಿಗಣಿಸಿದ್ದಾರೆ, ಅವರ ಚಟುವಟಿಕೆಗಳನ್ನು ಆಧರಿಸಿ ಅನರ್ಹಮಾಡಿದ್ದಾರೆ ಎಂದು ಕಪಿಲ್‌ ಸಿಬಲ್‌ ವಾದ ಮಂಡಿಸಿದ್ದಾರೆ.

ಬಿಜೆಯವರು ನಮಗೂ ಅನರ್ಹ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಿದ್ದಾರೆ ಆದರೆ ಅನರ್ಹ ಶಾಸಕರ ಜತೆ ಬಿಜೆಪಿಯ ಸಂತೋಷ್‌, ಶಾಸಕ ಅಶ್ವತ್ಥ್‌ ನಾರಾಯಣ ಕೂಡ ಇದ್ದರು. ವಿಧಾನಸಭೆ ಕಲಾಪ ನಡೆಯುವಾಗ ಅನರ್ಹ ಶಾಸಕರು ಐಷಾರಾಮಿ ಹೊಟೇಲ್‌ನಲ್ಲಿ ಇದ್ದರು. ಇವರಿಗೆ ಮಹಾರಾಷ್ಟ್ರ ಬಿಜೆಪಿಯವರು ಭದ್ರತೆ ನೀಡಿದ್ದರು. ಇದನ್ನು ಗಮನಿಸಿದರೆ ಅನರ್ಹ ಶಾಸಕರು ಪಕ್ಷಾಂತರ ಮಾಡುವುದಕ್ಕಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ವಾದ ಮಂಡಿಸಿದರು.

ಸ್ಪೀಕರ್‌ ಅವರು ತಮ್ಮ ಕಾರ್ಯವ್ಯಾಪ್ತಿ ಅಡಿಯಲ್ಲಿ ಕೆಲಸ ಮಾಡಿ ಶಾಸಕರನ್ನು ಅನರ್ಹ ಮಾಡಿರುವುದು ಸರಿಯಾಗಿದೆ. ಸ್ಪೀಕರ್‌ ರಾಜೀನಾಮೆ ಸ್ವೀಕರಿಸುವ ವಿಚಾರದಲ್ಲಿ ಸಂವಿಧಾನಿಕ ಅಂಶಗಳು ಇರುವುದರಿಂದ ಈ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಕಪಿಲ್‌ ಸಿಬಲ್‌ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಶಾಸಕರು ರಾಜೀನಾಮೆ ಕೊಟ್ಟು ಸುಮ್ಮನೆ ಇರಬೇಕಿತ್ತು. ಆದರೆ ಅವರು ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು ಯಾಕೆ? ಈ ವಿಚಾರದಲ್ಲಿ ಪ್ರತಿಯೊಬ್ಬರ ಬಗ್ಗೆ ನಾನು ವಾದ ಮಾಡುವುದಿಲ್ಲ, ಇಡೀ ಪ್ರಕ್ರಿಯೆ ಬಗ್ಗೆ ವಾದ ಮಾಡುತ್ತೇನೆ ಎಂದು ಹೇಳಿದರು. ಸುಧಾಕರ್‌ ಮತ್ತು ಆನಂದ್‌ ಸಿಂಗ್‌ ಅವರ ಆರೋಪಕ್ಕೆ ಬೇರೆ ವಕೀಲರು ವಾದ ಮಾಡುತ್ತಾರೆ ಎಂದು ಕಪಿಲ್‌ ಸಿಬಲ್‌ ಹೇಳಿದರು.

ಸ್ಪೀಕರ್‌ ಅವರು ತಮ್ಮ ಕಾರ್ಯವ್ಯಾಪ್ತಿ ಅಡಿಯಲ್ಲಿ ಕೆಲಸ ಮಾಡಿ ಶಾಸಕರನ್ನು ಅನರ್ಹ ಮಾಡಿರುವುದು ಸರಿಯಾಗಿದೆ. ಸ್ಪೀಕರ್‌ ರಾಜೀನಾಮೆ ಸ್ವೀಕರಿಸುವ ವಿಚಾರದಲ್ಲಿ ಸಂವಿಧಾನಿಕ ಅಂಶಗಳು ಇರುವುದರಿಂದ ಈ ಪ್ರಕರಣವನ್ನು ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ಕಪಿಲ್‌ ಸಿಬಲ್‌ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಶಾಸಕರು ರಾಜೀನಾಮೆ ಕೊಟ್ಟು ಸುಮ್ಮನೆ ಇರಬೇಕಿತ್ತು. ಆದರೆ ಅವರು ಬೇರೆ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು ಯಾಕೆ? ಈ ವಿಚಾರದಲ್ಲಿ ಪ್ರತಿಯೊಬ್ಬರ ಬಗ್ಗೆ ನಾನು ವಾದ ಮಾಡುವುದಿಲ್ಲ, ಇಡೀ ಪ್ರಕ್ರಿಯೆ ಬಗ್ಗೆ ವಾದ ಮಾಡುತ್ತೇನೆ ಎಂದು ಹೇಳಿದರು. ಸುಧಾಕರ್‌ ಮತ್ತು ಆನಂದ್‌ ಸಿಂಗ್‌ ಅವರ ಆರೋಪಕ್ಕೆ ಬೇರೆ ವಕೀಲರು ವಾದ ಮಾಡುತ್ತಾರೆ ಎಂದು ಕಪಿಲ್‌ ಸಿಬಲ್‌ ಹೇಳಿದರು.

ಕಾಂಗ್ರೆಸ್‌ ಪರವಾಗಿ ವಕೀಲ ದೇವದತ್ತ ಕಾಮತ್‌ ಅವರು ಅನರ್ಹ ಶಾಸಕ ಶ್ರೀಮಂತ್‌ ಪಾಟೀಲ್‌ ಪ್ರಕರಣ ಬಗ್ಗೆ ವಾದ ಮಂಡನೆ ಆರಂಭಿಸಿದರು.

ಶ್ರೀಮಂತ ಪಾಟೀಲ್‌ ಅವರು ಎದೆ ನೋವು ಎಂದು ಹೇಳಿ ಚೆನ್ನೈ ಮೂಲಕ ಮುಂಬೈಗೆ ತೆರಳಿ ಅಲ್ಲಿ ಸಂಜೀವಿನಿ ಆಸ್ಪತ್ರೆಯಿಂದ ಪತ್ರ ಬರೆದಿದ್ದಾರೆ. ಬೆಂಗಳೂರು ಅಥವಾ ಚೆನ್ನೈನಲ್ಲಿ ಆಸ್ಪತ್ರೆ ಇರಲಿಲ್ಲವೇ? ಶ್ರೀಮಂತ ಪಾಟೀಲ್‌ ಚೆನ್ನೈಗೆ ಹೋಗುವಾಗ ಬಿಜೆಪಿ ನಾಯಕರು ಜತೆಯಲ್ಲಿ ಇದ್ದರು ಎಂಬುದಕ್ಕೆ ಸಾಕ್ಷ್ಯಗಳಿವೆ ಎಂದು ಕಾಮತ್‌ ವಾದ ಮಂಡನೆ ಮಾಡಿದರು.

ಶಾಸಕ ಶ್ರೀಮಂತ ಪಾಟೀಲ್‌ ಅವರ ಪತ್ರ ಕೇಳಿದ ನ್ಯಾಯಮೂರ್ತಿಗಳು ಅದಕ್ಕೆ ಪತ್ರ ತಂದುಕೊಡುವುದಾಗಿ ಹೇಳಿದ ಸ್ಪೀಕರ್‌ ಕಚೇರಿ ವಕೀಲರು.

ಕಾಂಗ್ರೆಸ್‌ ಪಕ್ಷದ ಜೊತೆ ಕೆಪಿಜೆಪಿ ವಿಲೀನದ ಬಗ್ಗೆ ಸ್ಪೀಕರ್‌ ಪರ ವಕೀಲರ ಶಶಿ ಕಿರಣ್‌ ಶೆಟ್ಟಿ ವಾದ ಮಾಡಿದರು. ಶಾಸಕ ಆರ್‌ ಶಂಕರ್‌ ಅವರು ತಮ್ಮ ಕೆಪಿಜೆಪಿ ಪಕ್ಷವನ್ನು ವಿಲೀನ ಮಾಡಿದ್ದರ ಬಗ್ಗೆ ಪತ್ರ ನೀಡಿದ್ದಾರೆ ಎಂದು ನ್ಯಾಯಾಲಯಕ್ಕೆ ದಾಖಲೆ ನೀಡಿದರು.

ಕಾಂಗ್ರೆಸ್‌ ಪಕ್ಷದ ಕೋಟಾದಲ್ಲಿ ಮಂತ್ರಿಯಾಗಿದ್ದ ಅವರು ಮಾಧ್ಯಮಗಳ ಮುಂದೆ ವಿಲೀನವಾಗಿರುವುದಾಗಿ ಅವರು ಹೇಳಿದ್ದರು ಎಂದು ಶಶಿಕಿರಣ್‌ ಶೆಟ್ಟಿ ನ್ಯಾಯಾಲಯಕ್ಕೆ ಹೇಳಿದರು.

ಇದಕ್ಕೆ ಪ್ರತಿವಾದವಾಗಿ ಆರ್‌. ಶಕಂರ್‌ ಪರ ವಕೀಲ ವಿ .ಗಿರಿ ವಾದ ಮಾಡಿದರು. ಕಾಂಗ್ರೆಸ್‌ ಜೊತೆ ಕಪಿಜೆಪಿ ವಿಲೀನವಾಗಿಲ್ಲ, ಆದರೆ ಅವರನ್ನು ಶೆಡ್ಯೂಲ್‌ 10ರ ಅಡಿಯಲ್ಲಿ ಅನರ್ಹ ಮಾಡಲಾಗಿದೆ. ಈ ವೇಳೆ ವಾದವನ್ನು ಹೆಚ್ಚು ಎಳೆಯಬೇಡಿ ಮುಖ್ಯಾಂಶಗಳನ್ನು ಮಾತ್ರ ಹೇಳಿ ಎಂದು ನ್ಯಾಯಮೂರ್ತಿಗಳು ಸೂಚಿಸಿದರು.ಈ ಸದರ್ಭದಲ್ಲಿ ವಕೀಲ ಗಿರಿ ಸಂಕ್ಷಿಪ್ತವಾಗಿ ಹೇಳಿ ವಾದ ಮುಗಿಸಿದರು.

ಸ್ಪೀಕರ್‌ ಅವರಿಗೆ ರಾಜೀನಾಮೆ ಬಗ್ಗೆ ತಿರ್ಮಾನಿಸುವ ಮತ್ತು ಶೆಡ್ಯೂಲ್‌ 10ರ ಪ್ರಕಾರ ಅನರ್ಹಗೊಳಿಸುವ ಅಧಿಕಾರ ಇದೆ. ಆದರೆ ಚುನಾವಣೆಗೆ ಸ್ಪರ್ಧೆ ಮಾಡದಂತೆ ನಿರ್ಬಂಧ ವಿಧಿಸುವ ಅಧಿಕಾರ ಇಲ್ಲ ಎಂದು ಚುನಾವಣಾ ಆಯೋಗದ ಪರ ವಕೀಲ ಸುಪ್ರೀಂ ಕೋರ್ಟ್‌ಗೆ ಹೇಳಿದರು.

ಸುಧಾಕರ್‌ ಪರ ವಕೀಲ ಸುಂದರಂ ವಾದ ಮಂಡಿಸಿದರು. ಹೇಳಿದ್ದನೇ ಹೇಳ ಬೇಡಿ, ವಾದವನ್ನು ಸಂಕ್ಷಿಪ್ತವಾಗಿ ಮಂಡಿಸಿ ಎಂದು ನ್ಯಾಯಮೂರ್ತಿಗಳು ವಕೀಲರಿಗೆ ಹೇಳಿದರು. ವಾದದ ಪ್ರತಿಯನ್ನು ನಾಳೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು ಎಂದು ನ್ಯಾಯ ಮೂರ್ತಿಗಳು ಸೂಚಿಸಿದರು.

ಅನರ್ಹ ಶಾಸಕರ ಪರವಾಗಿ ಮುಕುಲ್‌ ರೋಹ್ಟಗಿ ವಾದ ಮಾಡಿದರು. ಶಾಸಕರು ರಾಜೀನಾಮೆಯನ್ನು ಮೊದಲು ಇತ್ಯರ್ಥ ಮಾಡದೇ ಅನರ್ಹತೆಗೊಳಿಸಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು. ರಾಜೀನಾಮೆ ನೀಡಿದ ಶಾಸಕರು ಪೂರ್ವಗ್ರಹ ಪೀಡಿತರಾಗಿರಲಿಲ್ಲ, ಸ್ಪೀಕರ್‌ ಅರ್ನಹಗೊಳಿಸಿ ನೀಡಿರುವ ಕಾರಣ ಇಲ್ಲಿ ಅಪ್ರಸ್ತುತ ಮೊದಲು ಅವರು ರಾಜೀನಾಮೆಯನ್ನು ಇತ್ಯರ್ಥಪಡಿಸಬೇಕು ಎಂದು ನ್ಯಾಯಾಪೀಠಕ್ಕೆ ಹೇಳಿದರು.

ಎರಡು ಕಡೆಯವಕೀಲರ ವಾದ ಮತ್ತು ಪ್ರತಿವಾದ ಮುಕ್ತಾಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT