ಶನಿವಾರ, ಜನವರಿ 25, 2020
27 °C

ಸಿದ್ದರಾಮಯ್ಯ ಸಹಕಾರ ಕೋರಿದ ಡಿಕೆಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ಮುಂದುವರಿಸಿರುವ ಶಾಸಕ ಡಿ.ಕೆ.ಶಿವಕುಮಾರ್ ಭಾನುವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ‘ಕಾವೇರಿ’ಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಪಕ್ಷದ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.

ಸಿದ್ದರಾಮಯ್ಯ ಆಂಜಿಯೊ ಪ್ಲಾಸ್ಟಿ ಚಿಕಿತ್ಸೆಗೆ ಒಳಗಾದ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಆದರೆ ಶಿವಕುಮಾರ್ ಭೇಟಿಯಾಗಿರಲಿಲ್ಲ. ಈಗ ದಿಢೀರ್ ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.

‘ರಾಜ್ಯ ನಾಯಕರು ಭಿನ್ನಮತ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ನಿಮ್ಮಲ್ಲಿ ಸಹಮತ ಮೂಡದ ಹೊರತು ದೆಹಲಿಗೆ ಬರಬೇಡಿ’ ಎಂದು ಪಕ್ಷದ ಹೈಕಮಾಂಡ್ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲೇ ಶನಿವಾರ ಪ್ರಮುಖರ ಸಭೆ ನಡೆಯಿತು. ಸಭೆ ಮಧ್ಯದಲ್ಲೇ ತೆರಳಿದ್ದ ಶಿವಕುಮಾರ್, ಭಾನುವಾರ ಭೇಟಿಯಾಗುವ ಮೂಲಕ ‘ನಮ್ಮಲ್ಲಿ ಯಾವುದೇ ಭಿನ್ನಮತ ಇಲ್ಲ, ಎಲ್ಲರೂ ಒಟ್ಟಾಗಿದ್ದೇವೆ’ ಎಂಬ ಸಂದೇಶ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಶಾಸಕರಾದ ಎಂ.ಬಿ.ಪಾಟೀಲ, ಕೃಷ್ಣಬೈರೇಗೌಡ ಹೆಸರನ್ನು ಸಿದ್ದರಾಮಯ್ಯ ಮುಂಚೂಣಿಗೆ ತಂದಿದ್ದರು. ಹೈಕಮಾಂಡ್ ಭೇಟಿಮಾಡಿಸುವ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿರಲಿಲ್ಲ. ಶಿವಕುಮಾರ್ ಅವರಿಗೆ ಅಧ್ಯಕ್ಷ ಸ್ಥಾನ ನೀಡುವುದಕ್ಕೆ ಸಿದ್ದರಾಮಯ್ಯ ಅಡ್ಡಿಯಾಗಿದ್ದಾರೆ. ತಮ್ಮ ಆಪ್ತರಿಗೆ ಅವಕಾಶ ಕೊಡಿಸುವ ಪ್ರಯತ್ನ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭೇಟಿಯಾಗಿ, ಸಹಕಾರ ಕೋರಿದರು ಎನ್ನಲಾಗಿದೆ.

‘ಆಕಾಂಕ್ಷಿಯಲ್ಲ’

ಭೇಟಿ ಬಳಿಕ ಶಿವಕುಮಾರ್ ಮಾತನಾಡಿ, ‘ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಯುವುದು ಸಹಜ. ಪಕ್ಷದ ಕೆಲ ವಿಚಾರಗಳು ಚರ್ಚೆಯಾಗಿವೆ’ ಎಂದರು.

‘ನಾನು ಯಾವುದಕ್ಕೂ ಸ್ಪರ್ಧಿಯಲ್ಲ. ಯಾವ ಸ್ಥಾನವನ್ನೂ ಕೇಳಿಲ್ಲ. ಕೇಳುವ ಕಾಲವೂ ಮುಗಿದಿದೆ. ಪಕ್ಷ ವಹಿಸಿದ ಕೆಲಸ ಮಾಡುತ್ತೇನೆ. ಪ್ರಕರಣ ಸಂಬಂಧ ಕೋರ್ಟ್‌ಗೆ ಹಾಜರಾಗಬೇಕಿದ್ದು, ನವದೆಹಲಿಗೆ ತೆರಳುತ್ತಿದ್ದೇನೆ’ ಎಂದು ಹೇಳಿದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು