ಶನಿವಾರ, ಜುಲೈ 31, 2021
25 °C
ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿಎಸ್‌ವೈ ಮೌಖಿಕ ಸಮ್ಮತಿ : 14ರ ಕಾರ್ಯಕ್ರಮ ಮುಂದೂಡಿಕೆ

ಕೆಪಿಸಿಸಿ | ಡಿಕೆ ಶಿವಕುಮಾರ್ ಪದಗ್ರಹಣಕ್ಕೆ ಶೀಘ್ರವೇ ದಿನಾಂಕ ನಿಗದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಅನುಮತಿ ನೀಡಿದ್ದು, ಪಕ್ಷದ ನಾಯಕರೊಂದಿಗೆ ಚರ್ಚಿಸಿದ ಬಳಿಕ ದಿನಾಂಕ ನಿಗದಿಯಾಗಲಿದೆ.

‌ಗುರುವಾರ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು, 'ಡಿ.ಕೆ. ಶಿವಕುಮಾರ್ ಅವರು ಯಾವಾಗ ಬೇಕಾದರೂ ಕಾರ್ಯಕ್ರಮ ಮಾಡಿಕೊಳ್ಳಲಿ. ನಮ್ಮದೇನೂ ಅಭ್ಯಂತರ ಇಲ್ಲ. ಆದರೆ ಹೆಚ್ಚು ಜನ ಸೇರಬಾರದೆಂದು ಹೇಳಿದ್ದೇನೆ. ದೂರವಾಣಿಯಲ್ಲಿ ನಿನ್ನೆ ಶಿವಕುಮಾರ್ ಜೊತೆ ಮಾತನಾಡಿದ್ದೇನೆ. ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗದುಕೊಳ್ಳುವುದಾಗಿ ಅವರು ಹೇಳಿದ್ದಾರೆ' ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು ಮುಖ್ಯಮಂತ್ರಿಗೆ ಧನ್ಯವಾದ ಅರ್ಪಿಸಿದರು. ‘ಇದೇ 14ರಂದು ಕಾರ್ಯಕ್ರಮ ನಡೆಯುವುದಿಲ್ಲ ಎಂದು ನಾನು ಈಗಾಗಲೇ ಹೇಳಿರುವ ಕಾರಣ ಅಂದು ಆ ಕಾರ್ಯಕ್ರಮ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನಲ್ಲಿ ಮಾತ್ರವಲ್ಲ. ರಾಜ್ಯದ ಮೂಲೆಯಲ್ಲೂ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಹೀಗಾಗಿ ಸಿದ್ಧತೆ ಮುಂದುವರಿಯಲಿದೆ. ದಿನಾಂಕವನ್ನು ಶೀಘ್ರ ತಿಳಿಸಲಿದ್ದೇವೆ’ ಎಂದರು.

‘ಮುಟ್ಠಾಳ ನಾನಲ್ಲ’
‘ದೇವೇಗೌಡರು ನನ್ನ ಬೆಂಬಲದಿಂದ ರಾಜ್ಯಸಭೆಗೆ ಹೋಗುತ್ತಿದ್ದಾರೆ ಎಂದು ಹೇಳಲು ನಾನು ಮುಟ್ಠಾಳನಲ್ಲ. ಅವರಿಗೆ ಅವರದೇ ಆದ ವ್ಯಕ್ತಿತ್ವ, ಹಿರಿತನವಿದೆ. ರಾಜ್ಯಸಭೆಗೆ ದೇವೇಗೌಡರನ್ನು ಬೆಂಬಲಿಸುವುದು ಪಕ್ಷದ ವರಿಷ್ಠರ ತೀರ್ಮಾನ. ಅವರು ರಾಷ್ಟ್ರದ ಆಸ್ತಿ. ಅವರ ಆಯ್ಕೆ ವಿಚಾರದಲ್ಲಿ ಚೌಕಾಸಿ ಮಾಡುತ್ತಾ ಕೂರುವುದಿಲ್ಲ.

ನನಗೂ 40 ವರ್ಷದ ರಾಜಕೀಯ ಅನುಭವವಿದೆ. ಪರಿಷತ್ ಚುನಾವಣೆಯಲ್ಲಿ ನಾನು ಯಾರಿಗೂ ಟಿಕೆಟ್ ಕೊಡುವುದಿಲ್ಲ. ಅದೇನಿದ್ದರೂ ಪಕ್ಷದ ಹೈಕಮಾಂಡ್ ನಿರ್ಧಾರ. ಅವರು ತೆಗೆದುಕೊಂಡ ನಿರ್ಧಾರವನ್ನು ತಿಳಿಸುವುದು ನನ್ನ ಕೆಲಸ’ ಎಂದು ಶಿವಕುಮಾರ್‌ ಹೇಳಿದರು.

**

ಮುಖ್ಯಮಂತ್ರಿಗಳು ರಾಜ್ಯ ಹಾಗೂ ದೇಶದ ಮುಂದೆ ಅನುಮತಿ ನೀಡಿದ್ದಾರೆ. ಇನ್ನೇನು ಬೇಕು? ಈ ವಿಚಾರದಲ್ಲಿ ಅವರ ಸತ್ಯ ಪರೀಕ್ಷೆ ಮಾಡಲು ಹೋಗುವುದಿಲ್ಲ.
-ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು