ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹8.6 ಕೋಟಿ ಅಕ್ರಮ ಹಣದ ‍ಪ‍್ರಕರಣ; ಡಿಕೆಶಿಗೆ ಬಂಧನ ಭೀತಿ?

Last Updated 30 ಆಗಸ್ಟ್ 2019, 3:40 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ವಶಪಡಿಸಿಕೊಂಡ ₹ 8.60 ಕೋಟಿ ಅಕ್ರಮ ಹಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ನೀಡಿದ್ದ ಸಮನ್ಸ್‌ ರದ್ದುಗೊಳಿಸಬೇಕು’ ಎಂದು ಕೋರಿದ್ದ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿರುವುದರಿಂದ ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ಮತ್ತು ಅವರ ಐವರು ಆಪ್ತರಿಗೆ ಬಂಧನ ಭೀತಿ ಎದುರಾಗಿದೆ.

ಶಿವಕುಮಾರ್ ಮನೆಗೆ ಗುರುವಾರ ರಾತ್ರಿಯೇ ಬಂದಿದ್ದ ನಾಲ್ವರು ಇ.ಡಿ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದರು. ಸಮನ್ಸ್ ಬಂದಿರುವುದನ್ನು ಅವರು ದೃಢಪಡಿಸಿದ್ದಾರೆ.

ಈ ಕುರಿತಂತೆ ಕಾಯ್ದಿರಿಸಲಾಗಿದ್ದ ಆದೇಶವನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಗುರುವಾರ ಪ್ರಕಟಿಸಿದೆ. ತೀರ್ಪು ಹೊರಬರುತ್ತಿದ್ದಂತೆ ಆತಂಕಕ್ಕೆ ಒಳಗಾದ ಶಿವಕುಮಾರ್‌, ಹಿರಿಯ ವಕೀಲರ ಜತೆ ಸಮಾಲೋಚಿಸಿದ್ದು, ತೀರ್ಪನ್ನು ಪ್ರಶ್ನಿಸಿ ಇದೇ ಹೈಕೋರ್ಟ್‌ನ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸುವಂತೆ ಹೇಳಿದ್ದಾರೆ.

‘ಈಗಾಗಲೇ ಆದಾಯ ತೆರಿಗೆ ಇಲಾಖೆ, ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಇದರನ್ವಯ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಸಿಐಆರ್ (ಪೊಲೀಸ್ ಎಫ್‌ಐಆರ್‌ಗೆ ಸಮಾನವಾದ–ಜಾರಿ ಪ್ರಕರಣ ಮಾಹಿತಿ ವರದಿ) ದಾಖಲಿಸಿದ್ದಾರೆ. ಹೀಗಾಗಿ, ಈ ಹಂತದಲ್ಲಿ ಆರೋಪಿಗಳ ಅರ್ಜಿಗಳು ವಿಚಾರಣೆಗೆ ಅರ್ಹವಾಗಿಲ್ಲ’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

‘ಆರೋಪಿಗಳು ಷೋಕಾಸ್‌ ನೋಟಿಸ್‌ ಪಡೆದಿದ್ದಾರೆ. ಇದಕ್ಕಾಗಿ ತನಿಖಾಧಿಕಾರಿಗಳ ಮುಂದೆ ಹಾಜರಾಗಿ, ತಮ್ಮನ್ನು ಸಮರ್ಥಿಸಿಕೊಳ್ಳುವ ದಾಖಲಾತಿ ನೀಡಬಹುದು. ಆದರೆ, ಸಂವಿಧಾನದ 226ನೇ ವಿಧಿಯ ವ್ಯಾಪ್ತಿ ಯಲ್ಲಿ ಪರಿಹಾರ ಪಡೆಯಲುರಿಟ್‌ ಅರ್ಜಿಗಳು ಯೋಗ್ಯವಾಗಿಲ್ಲ’ ಎಂದು ವಿವರಿಸಲಾಗಿದೆ.

‘ಆರೋಪಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪ ಇದ್ದು, ಕಳಂಕಿತ ಹಣವನ್ನು ದೇಶದ ಆರ್ಥಿಕತೆಯಲ್ಲಿ ತೊಡಗಿಸುವುದು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ (ಪಿಎಂಎಲ್ಎ) ಅಡಿ ಅಪರಾಧವಾಗಿದೆ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಹೆಚ್ಚಿನ ವಿಚಕ್ಷಣಾ ಧೋರಣೆ ಹೊಂದಿರಬೇಕು’ ಎಂದು ತಿಳಿಸಲಾಗಿದೆ.

‘ಪಿಎಂಎಲ್‌ ಕಾಯ್ದೆ–2002ರ ಅಡಿಯಲ್ಲಿ ಒಂದೇ ಒಂದು ಪ್ರಕರಣ ದಾಖಲಿಸಿದ್ದರೂ ಸಾಕು. ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120 ಬಿ (ಒಳಸಂಚು) ಜತೆಗೆ ಷೆಡ್ಯೂಲ್ಡ್‌ ಪ್ರಕರಣವೇ ದಾಖಲಾಗಬೇಕು ಎಂದೇನೂ ಇಲ್ಲ. ಹೀಗಾಗಿ ಇದೊಂದು ತನಿಖೆಗೆ ಯೋಗ್ಯವಾದ ಪ್ರಕರಣ’ ಎಂದು ವಿವರಿಸಲಾಗಿದೆ.

ಅಕ್ರಮ ಹಣ ಕ್ರೋಡೀಕರಣ ಹಾಗೂ ಕ್ರಿಮಿನಲ್‌ ಸಂಚುಗಳ ಆರೋಪದಡಿ ಆದಾಯ ತೆರಿಗೆ ಕಾಯ್ದೆ ಹಾಗೂ ಐಪಿಸಿ ಕಲಂಗಳಡಿ ಡಿ.ಕೆ.ಶಿವಕುಮಾರ್, ಅವರ ಆಪ್ತರಾದ ಸಚಿನ್‌ ನಾರಾಯಣ, ಸುನಿಲ್‌ ಕುಮಾರ್‌ ಶರ್ಮ, ಆಂಜನೇಯ, ಮತ್ತು ರಾಜೇಂದ್ರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಶಿವಕುಮಾರ್ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್ ಹಾಗೂ ಇ.ಡಿ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪ್ರಭುಲಿಂಗ ಕೆ‌.ನಾವದಗಿ ವಾದ ಮಂಡಿಸಿದ್ದರು.

ಬಂಧನ ಸಾಧ್ಯತೆ

ಶಿವಕುಮಾರ್‌ ಹಾಗೂ ಅವರ ಆಪ್ತರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತು ಇ.ಡಿ, ದೆಹಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು, ಆರೋಪಿಗಳನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್‌ ಕೊಡಬಹುದು. ಅಕಸ್ಮಾತ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ತನಿಖಾಧಿಕಾರಿಗಳು ಭಾವಿಸಿದರೆ ಅದಕ್ಕೂ ಅವಕಾಶವಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸದ್ಯ, ದೆಹಲಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹಿರಿಯ ಅಧಿಕಾರಿಗಳಿಗೆ ಈ ಪ್ರಕರಣವನ್ನು ದೇಶದ ಯಾವುದೇ ಭಾಗಕ್ಕಾದರೂ ವರ್ಗಾಯಿಸುವ ಅಧಿಕಾರವಿದೆ. ಅಕಸ್ಮಾತ್‌ ವಿಚಾರಣೆಗೆ ಬರುವಂತೆ ಸಮನ್ಸ್‌ ಕೊಟ್ಟರೆ, ಆರೋಪಿಗಳು ಕಾಲಾವಕಾಶ ಕೇಳಬಹುದು. ಸಮಯ ಕೊಡುವುದು ಅಥವಾ ಬಿಡುವುದು ತನಿಖಾ ಸಂಸ್ಥೆಗೆ ಬಿಟ್ಟ ವಿಷಯ ಎಂದೂ ಮೂಲಗಳು ವಿವರಿಸಿವೆ.

***

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನನ್ನನ್ನು ಬಂಧಿಸುವ ಭೀತಿ ಇಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ಪಡೆಯುವುದಿಲ್ಲ

–ಡಿ.ಕೆ. ಶಿವಕುಮಾರ್, ಕಾಂಗ್ರೆಸ್‌ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT