ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ಅಮೆರಿಕದಲ್ಲಿ ‘ಡ್ರೈವ್ ಥ್ರೂ ಟೆಸ್ಟ್’

ಸೋಂಕು ಹೆಚ್ಚುತ್ತಿರುವ ಅಮೆರಿಕದ ಪ್ರಸ್ತುತ ಪರಿಸ್ಥಿತಿ ಬಗ್ಗೆ ತಿಳಿಸಿದ ಟೆಕಿ
Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಶಿರಸಿ: ‘ಅಮೆರಿಕದಲ್ಲಿ ಸಂಪೂರ್ಣ ಲಾಕ್‌ಡೌನ್ ಅಥವಾ ಶಟ್‌ಡೌನ್ ನಿಯಮ ಈವರೆಗೂ ಇಲ್ಲ. ಭಾರತ ಸರ್ಕಾರ ಕ್ಷಿಪ್ರವಾಗಿ ತೆಗೆದುಕೊಂಡಿರುವ ಲಾಕ್‌ಡೌನ್ ನಿರ್ಧಾರ ಸರಿಯಾದುದೆನಿಸುತ್ತದೆ. ಇಲ್ಲಿ ಬಿಗಡಾಯಿಸುತ್ತಿರುವ ಸಮಸ್ಯೆ ಕಂಡಾಗ, ದೇವರೇ ನನ್ನೂರಿನ ಜನರು ಪರಿಸ್ಥಿತಿ ಕೈಮೀರುವ ಮುನ್ನ, ಸರ್ಕಾರ ನೀಡಿರುವ ಆದೇಶವನ್ನು ಪಾಲಿಸಿ ಮನೆಯಲ್ಲೇ ಇರಲಿ ಎಂದುಕೊಳ್ಳುತ್ತೇನೆ’ ಎನ್ನುತ್ತಲೇ ಸಂಭಾಷಣೆ ಶುರುಮಾಡಿದರು ಅಮೆರಿಕದಲ್ಲಿ ಟೆಕಿಯಾಗಿರುವ ಕೇದಾರ ಭಟ್ಟ.

ಉದ್ಯೋಗದ ನಿಮಿತ್ತ ಅಮೆರಿಕ್ಕೆ ಹೋಗಿರುವ ಶಿರಸಿ ಮೂಲೆಮನೆಯ ಕೇದಾರ ಭಟ್ಟ ಮತ್ತು ಅಶ್ವಿನಿ ದಂಪತಿ, ವಾಷಿಂಗ್ಟನ್ ಡಿಸಿಯಿಂದ 10 ಮೈಲಿ ದೂರದ ಫೇರ್‌ಫೆಕ್ಸ್ ವರ್ಜಿನಿಯಾದ ವಸತಿ ಬಡಾವಣೆಯಲ್ಲಿ ನೆಲೆಸಿದ್ದಾರೆ.

ಅಮೆರಿಕದಲ್ಲಿ ಕೋವಿಡ್–19 ಪೀಡಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇರುವ ಕಾರಣ ಮುನ್ನೆಚ್ಚರಿಕೆಯಾಗಿ ಅವರು, 15 ದಿನಗಳಿಂದ ಅವರು ಮನೆಯಿಂದ ಹೊರಬೀಳದೇ, ವರ್ಕ್ ಫ್ರಂ ಹೋಮ್ ಮಾಡುತ್ತಿದ್ದಾರೆ.

‘ಇಲ್ಲಿ ಪರಿಸ್ಥಿತಿ ಇಷ್ಟು ಗಂಭೀರವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ನ್ಯೂಯಾರ್ಕ್‌ನಲ್ಲಿ ಜನರು ಸಬ್‌ವೇ ಮೆಟ್ರೊದಂತಹ ಸಾರ್ವಜನಿಕ ಸಂಪರ್ಕವನ್ನು ಹೆಚ್ಚು ಅವಲಂಬಿಸಿದ್ದಾರೆ. ಇಲ್ಲಿ ಒಮ್ಮೆಲೇ ಕೋವಿಡ್–19 ಪ್ರಕರಣಗಳು ಹೆಚ್ಚಾದವು. ಇನ್ನುಳಿದ ಪ್ರದೇಶಗಳ ಉದ್ಯೋಗಿಗಳಲ್ಲಿ ಸ್ವಂತ ವಾಹನ ಬಳಸುವವರೇ ಅಧಿಕ. ಕ್ಯಾಲಿಫೋರ್ನಿಯಾದಲ್ಲಿ ಕೆಲವು ಕೋವಿಡ್ ಪ್ರಕರಣಗಳಿವೆ. ಅಲ್ಲಿ ‘ಶೆಲ್ಟರ್ ಇನ್ ಪ್ಲೇಸ್’ ಆದೇಶವಾಗಿದೆ. ಆದರೆ, ನ್ಯೂಯಾರ್ಕ್‌ನಲ್ಲಿ ಈಗಲೂ ಲಾಕ್‌ಡೌನ್ ಇಲ್ಲ. ಆದರೆ, ಅಗತ್ಯ ಸಾಮಗ್ರಿಗಳ ಮಾರ್ಕೆಟ್ ಹೊರತುಪಡಿಸಿ, ಉಳಿದೆಲ್ಲವೂ ಬಂದ್‌ ಆಗಿವೆ’

‘ಎರಡು ವಾರಗಳ ಹಿಂದಿನವರೆಗೂ ವಾಷಿಂಗ್ಟನ್ ಡಿಸಿಯಲ್ಲಿ ಎಲ್ಲ ಪಬ್, ಕ್ಲಬ್‌ಗಳಲ್ಲಿ ಜನರು ತುಂಬಿದ್ದರು ಎಂದು ಇಲ್ಲಿನ ಸ್ನೇಹಿತರು ಹೇಳಿದ್ದನ್ನು ಕೇಳಿದೆ. ಈಗ ರಾತ್ರಿ 9ಕ್ಕೆ ರೆಸ್ಟೊರೆಂಟ್‌ಗಳು ಬಂದಾಗುತ್ತಿವೆ. ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ ಬೆಳಿಗ್ಗೆ 7ರಿಂದ 11ರವರೆಗೆ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೋವಿಡ್–19 ಮೊದಲ ಪ್ರಕರಣ ಸುದ್ದಿಯಾದಾಗ ಜನ ವಿಚಲಿತರಾದರು. ಇಲ್ಲೂ ಸಹ ಆಸ್ಟ್ರೇಲಿಯಾ ರೀತಿ ಟಾಯ್ಲೆಟ್ ಪೇಪರ್, ಸ್ಯಾನಿಟೈಸರ್, ಹ್ಯಾಂಡ್‌ವಾಷ್, ಸೋಂಕು ನಿವಾರಕಗಳ ಕೊರತೆಯಾಗಿತ್ತು. ಇದನ್ನು ಮನಗಂಡ ಮಾರ್ಕೆಟ್‌ಗಳು ಕುಟುಂಬಕ್ಕೆ ಅಗತ್ಯವಿರುವಷ್ಟೇ ಸಾಮಗ್ರಿ ಖರೀದಿಸುವ ನಿಯಮ ಜಾರಿಗೆ ತಂದವು’ ಎಂದ ಅವರು ಆಗಿನ ಸಂಕಷ್ಟಗಳನ್ನು ಬಿಚ್ಚಿಟ್ಟರು.

‘ಆರಂಭದಲ್ಲಂತೂ ವೈದ್ಯಕೀಯ ಸಿಬ್ಬಂದಿಗೇ ಮಾಸ್ಕ್ ಸಿಗುತ್ತಿರಲಿಲ್ಲ. ತಾತ್ಕಾಲಿಕವಾಗಿ ಅವರೇ ಮಾಸ್ಕ್ ಸಿದ್ಧಪಡಿಸಿಕೊಂಡಿದ್ದರು. ಸೋಂಕು ನಿವಾರಕ ಬಳಸಿಕೊಂಡು ಎನ್ 95 ಮಾಸ್ಕ್ ಪುನರ್ ಬಳಕೆ ಮಾಡುವಂತೆ ಸರ್ಕಾರವೇ ಹೇಳಿತ್ತು. ಕೊರೊನಾ ವೈರಸ್ ಸೋಂಕಿನ ಲಕ್ಷಣಗಳು ಕಂಡರೆ ಮನೆಯಲ್ಲೇ ಪ್ರತ್ಯೇಕವಾಗಿರುವಂತೆ ಡಾಕ್ಟರ್ ಸೂಚಿಸುತ್ತಾರೆ. ಟೆಲಿಮೆಡಿಸಿನ್ ಹೇಳುತ್ತಾರೆ. ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಪರೀಕ್ಷಾ ಕಿಟ್‌ಗಳು, ಆಸ್ಪತ್ರೆಗಳಲ್ಲಿ ಹಾಸಿಗೆ ಕೊರತೆ ಎದುರಾಗಿರುವುದನ್ನು ಮಾಧ್ಯಮ ಬಿತ್ತರಿಸುತ್ತಿದೆ’.

‘ಸೋಂಕು ಹರಡುವುದನ್ನು ನಿಯಂತ್ರಿಸಲು ನ್ಯೂಜೆರ್ಸಿಯಲ್ಲಿ ‘ಡ್ರೈವ್ ಥ್ರೂ ಟೆಸ್ಟ್’ ಸೆಂಟರ್ ಪ್ರಾರಂಭಿಸಿದ್ದಾರೆ. ಕಿಲೋ ಮೀಟರ್ ದೂರದವರೆಗೆ ಕಾರು ನಿಲ್ಲುತ್ತವೆ. ನ್ಯೂಯಾರ್ಕ್‌ನಲ್ಲಿ ನೌಕಾನೆಲೆ ಹಡಗೊಂದನ್ನು ಆಸ್ಪತ್ರೆಯಾಗಿ ಪರಿವರ್ತಿಸುವ ಸುದ್ದಿ ಬಿತ್ತರವಾಗುತ್ತಿದೆ’ ಎಂದು ಅವರು ಅಲ್ಲಿನ ಸ್ಥಿತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT