ಸೋಮವಾರ, ಮಾರ್ಚ್ 8, 2021
30 °C
ಮುಂಗಾರು– ಹಿಂಗಾರು ಮಳೆ ಕೊರತೆ; ಮೇವಿಗೆ ತತ್ವಾರ– ಗುಳೆ ಭೀತಿ

ಭೀಕರ ಬರ: ₹28,047 ಕೋಟಿ ನಷ್ಟ

ರಾಜೇಶ್‌ ರೈ ಚಟ್ಲ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದ ಹಿಂದೆಂದೂ ಕಂಡರಿಯದ ಬರ ಕರ್ನಾಟಕವನ್ನು ಆವರಿಸಿಕೊಂಡಿದೆ. ಕೈಕೊಟ್ಟ ಮಳೆ, ಕೈ ಸೇರದ ಬೆಳೆಯಿಂದಾಗಿ ಆರ್ಥಿಕ ನಷ್ಟದ ಮೊತ್ತ ₹ 28,047 ಕೋಟಿ ದಾಟಬಹುದು ಎಂದು ಅಂದಾಜಿಸಲಾಗಿದೆ.

176 ತಾಲ್ಲೂಕುಗಳಲ್ಲಿ ಮುಂಗಾರು ಅವಧಿಯಲ್ಲಿ 100, ಹಿಂಗಾರು ಅವಧಿಯಲ್ಲಿ 156 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಮುಂಗಾರು ಹಂಗಾಮಿನಲ್ಲಿ ಬರಕ್ಕೆ ತುತ್ತಾಗಿದ್ದ ತಾಲ್ಲೂಕುಗಳ ಪೈಕಿ ತುಮಕೂರು ಜಿಲ್ಲೆಯ ಗುಬ್ಬಿ, ಕುಣಿಗಲ್‌, ಮಂಡ್ಯದ ಮದ್ದೂರು, ಮಳವಳ್ಳಿ, ರಾಮನಗರ ಜಿಲ್ಲೆಯ ಚನ್ನಪಟ್ಟಣ ಮತ್ತು ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕುಗಳು ಹಿಂಗಾರು ಅವಧಿಯಲ್ಲಿ ಬರ ಪಟ್ಟಿಯಿಂದ ಹೊರಗುಳಿದಿವೆ.

ಬರಪೀಡಿತ ಎಂದು ಘೋಷಿಸಿದ ತಾಲ್ಲೂಕುಗಳಲ್ಲಿ ಆರು ತಿಂಗಳ ಕಾಲ ಪರಿಹಾರ ಕಾರ್ಯಗಳನ್ನು ಮುಂದುವರಿಸಲಾಗುತ್ತದೆ. ಹೀಗಾಗಿ, ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ಒಟ್ಟು 162 ತಾಲ್ಲೂಕುಗಳನ್ನು ಬರಪೀಡಿತ ಎಂದು ಪರಿಗಣಿಸಲಾಗಿದೆ.

ಬರದಿಂದ ಅನೇಕ ಕಡೆ ಕುಡಿಯುವ ನೀರಿಗೆ ಹಾಹಾಕಾರ ಪಡುವ ದಿನಗಳು ಎದುರಾಗಿವೆ. ಬೆಳೆ ಒಣಗಿದೆ. ಮೇವು ಸಿಗದೆ ಜಾನುವಾರುಗಳು ಕಸಾಯಿಖಾನೆ ಸೇರುವ ಸ್ಥಿತಿ ನಿರ್ಮಾಣವಾಗಿದೆ. ತುತ್ತಿನ ಚೀಲ ತುಂಬಿಸಿಕೊಳ್ಳಲು ಕುಟುಂಬಸಮೇತ ಜನ ಗಂಟು ಮೂಟೆ ಕಟ್ಟಿಕೊಂಡು ಗುಳೆ ಹೊರಡುವ ಅನಿವಾರ್ಯ ಬಂದೊದಗುತ್ತಿದೆ.

ಬರಪೀಡಿತ ತಾಲ್ಲೂಕುಗಳಿಗೆ ಈಗಾಗಲೇ ತಲಾ ₹ 1 ಕೋಟಿ ಬಿಡುಗಡೆ ಮಾಡಲಾಗಿದೆ. ಮತ್ತೆ ತಲಾ ₹ 1 ಕೋಟಿ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಬರ ತಂದೊಡ್ಡಬಹುದಾದ ಸಂಕಷ್ಟಗಳನ್ನು ಅಂದಾಜಿಸಿ ಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ, ಉದ್ಯೋಗ ಖಾತ್ರಿ (ನರೇಗಾ) ಯೋಜನೆಗೆ ಆದ್ಯತೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಬರಪೀಡಿತ ತಾಲ್ಲೂಕುಗಳಿಗೆ ಈಗಾಗಲೇ ತಲಾ ₹ 1 ಕೋಟಿ ಬಿಡುಗಡೆ ಮಾಡಲಾಗಿದೆ. ಮತ್ತೆ ತಲಾ ₹ 1 ಕೋಟಿ ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಬರ ತಂದೊಡ್ಡಬಹುದಾದ ಸಂಕಷ್ಟಗಳನ್ನು ಅಂದಾಜಿಸಿ ಕುಡಿಯುವ ನೀರು ಪೂರೈಕೆ, ಮೇವು ಲಭ್ಯತೆ, ಉದ್ಯೋಗ ಖಾತ್ರಿ (ನರೇಗಾ) ಯೋಜನೆಗೆ ಆದ್ಯತೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ನಾಲ್ಕು ಕಂದಾಯ ವಿಭಾಗಗಳ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿರುವ ಸಚಿವ ಸಂಪುಟ ಉಪ ಸಮಿತಿಯ ಬರ ಅಧ್ಯಯನ ತಂಡಗಳು, ಸರ್ಕಾರಕ್ಕೆ ಶೀಘ್ರದಲ್ಲೇ ತಮ್ಮ ವರದಿ ಸಲ್ಲಿಸಲಿವೆ. ಆದರೆ, ಈ ತಂಡಗಳು ತಮ್ಮ ಕೆಲಸವನ್ನು ‘ಶಾಸ್ತ್ರ’ವಾಗಿ ಮುಗಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.

ಸಂಪೂರ್ಣ ಕೈಕೊಟ್ಟ ಹಿಂಗಾರು: ಮುಂಗಾರು ಮಳೆಗೆ ಹೋಲಿಸಿದರೆ ಹಿಂಗಾರು ಸಂಪೂರ್ಣ ಕೈ ಕೊಟ್ಟಿದೆ. 188 ಮಿ.ಮೀ.ರಷ್ಟು ಬೀಳಬೇಕಿದ್ದ ಮಳೆ ಕೇವಲ 96 ಮಿ.ಮೀನಷ್ಟು ಸುರಿದಿದ್ದು, ಶೇ 49ರಷ್ಟು ಪ್ರದೇಶದಲ್ಲಿ ಕೊರತೆ ಕಾಣಿಸಿಕೊಂಡಿದೆ. ಈ ಅವಧಿಯಲ್ಲಿ ಶೇಕಡಾ 90ರಷ್ಟು ಬಿತ್ತನೆಯಾಗುವ ಉತ್ತರ ಒಳನಾಡಿನ 11 ಜಿಲ್ಲೆಗಳಲ್ಲಿ (ಬೀದರ್‌, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಯಾದಗಿರಿ, ಕೊಪ್ಪಳ, ರಾಯಚೂರು, ಗದಗ, ಧಾರವಾಡ ಮತ್ತು ಬಳ್ಳಾರಿ) ಶೇ 66ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ಕಡಲೆ, ಜೋಳ, ಗೋಧಿ, ಸೂರ್ಯಕಾಂತಿ ನೆಲಕಚ್ಚಿದೆ.

ಹೊಸ ಕೊಳವೆಬಾವಿ ಕೊರೆಸಲು ಮತ್ತು ಹಾಲಿ ಇರುವ ಕುಡಿಯುವ ನೀರಿನ ವ್ಯವಸ್ಥೆ ಪುನಶ್ಚೇತನಗೊಳಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ₹ 136 ಕೋಟಿ ಅನುದಾನ ಬಿಡುಗಡೆ ಮಾಡಿದೆ. ನಗರದ ಪ್ರದೇಶಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ರಾಜ್ಯದ ನಿಧಿಯಿಂದ ₹ 50 ಕೋಟಿ ಬಿಡುಗಡೆ ಮಾಡಲಾಗಿದೆ.

ಕೃಷ್ಣಾ ಮತ್ತು ಕಾವೇರಿ ಜಲಾಶಯಗಳಲ್ಲಿ ಕ್ರಮವಾಗಿ ಶೇ 38 ಮತ್ತು ಶೇ 44ರಷ್ಟು ನೀರು ಮಾತ್ರ ಬಳಕೆಗೆ ಯೋಗ್ಯವಾಗಿದೆ. ಸದ್ಯ ಗ್ರಾಮೀಣ ಭಾಗದಲ್ಲಿ 645 ಹಳ್ಳಿಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದೆ. ಇದಕ್ಕಾಗಿ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆಯಲಾಗಿದೆ. 247 ನಗರ ಸ್ಥಳೀಯ ಸಂಸ್ಥೆಗಳಲ್ಲಿ 437 ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಈವರೆಗೆ 14 ಮೇವು ಬ್ಯಾಂಕ್‌ಗಳನ್ನು (ವಿಜಯಪುರ–7, ಕೊಪ್ಪಳ–4, ಬೆಳಗಾವಿ–3) ಆರಂಭಿಸಲಾಗಿದೆ. ಕೊಪ್ಪಳದಲ್ಲಿ ಮಾತ್ರ ಐದು ಗೋಶಾಲೆ
ಗಳನ್ನು ತೆರೆಯಲಾಗಿದ್ದು, 500 ಗೋವುಗಳಿಗೆ ಆಶ್ರಯ ನೀಡಲಾಗಿದೆ.

ಪ್ರವಾಹಪೀಡಿತ 31 ತಾಲ್ಲೂಕುಗಳೂ ಬರಪೀಡಿತ: ಮುಂಗಾರು ಅವಧಿಯಲ್ಲಿ ಪ್ರವಾಹ ಪೀಡಿತ ತಾಲ್ಲೂಕು ಎಂದು ಗುರುತಿಸಿದ್ದ 45 ತಾಲ್ಲೂಕುಗಳಲ್ಲಿ 31 ಹಿಂಗಾರು ಅವಧಿಯಲ್ಲಿ ಬರಪೀಡಿತ ಪಟ್ಟಿಗೆ ಸೇರಿವೆ.

ಬರ ಮರೆತ ಜನಪ್ರತಿನಿಧಿಗಳು

ಸರ್ಕಾರ ಅಸ್ಥಿರಗೊಳಿಸುವ ಯತ್ನ, ಪರಸ್ಪರ ಆರೋಪ–ಪ್ರತ್ಯಾರೋಪಗಳ ರಾಜಕೀಯ ಗೊಂದಲಗಳಲ್ಲೇ ಮುಳುಗಿರುವ ಸಚಿವರು, ಶಾಸಕರು ತಮ್ಮ ಕ್ಷೇತ್ರಗಳ ಜನ ಬರದ ಬವಣೆಯಲ್ಲಿ ಬೇಯುತ್ತಿರುವುದನ್ನೇ ಮರೆತಿದ್ದಾರೆ.

ಸರ್ಕಾರ ಉಳಿಸಿಕೊಳ್ಳುವ ಹಂಗಿನಲ್ಲಿ ಸಿಕ್ಕಿಬಿದ್ದಿರುವ ಸಚಿವರು, ಬರ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳುವತ್ತ ಇನ್ನೂ ಮೈಕೊಡವಿ ನಿಂತಿಲ್ಲ.

ಅನೇಕ ಜಿಲ್ಲೆಗಳಲ್ಲಿ ಶಾಸಕರ ನೇತೃತ್ವದ ಕಾರ್ಯಪಡೆ, ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನೆ ಸಭೆಗಳು ನಡೆದೇ ಇಲ್ಲ. ರಾಜಕೀಯ ಅನಿಶ್ಚಿತತೆ ಕಾರಣಕ್ಕೆ ಶಾಸಕರು, ಸಚಿವರು ಪರಿಹಾರ ಕಾರ್ಯಗಳ ಕಡೆಗೆ ಗಮನಹರಿಸುತ್ತಿಲ್ಲ ಎಂಬ ಟೀಕೆ ಎಲ್ಲೆಡೆಗಳಿಂದ ವ್ಯಕ್ತವಾಗಿದೆ.

ರಾಜ್ಯದಲ್ಲಿ ಪ್ರಸಕ್ತ ವರ್ಷದ ನೆರೆ–ಬರ ಚಿತ್ರಣ (ನಷ್ಟ ₹ ಕೋಟಿಗಳಲ್ಲಿ)

ನೈಸರ್ಗಿಕ ವಿಪತ್ತು; ಘೋಷಿಸಿದ ತಾಲ್ಲೂಕು; ನಷ್ಟ; ಕೋರಿದ ನೆರವು; ಕೇಂದ್ರದ ನೆರವು

ನೆರೆ, ಭೂಕುಸಿತ; 45; 4,262; 720; 525.22

ಮುಂಗಾರು; 100; 16,662; 2,434; 949.49

ಹಿಂಗಾರು; 156; 11,385; 2,064.30; –

========================

ಪರಿಹಾರ ಕಾರ್ಯಕ್ಕೆ ಬಿಡುಗಡೆಯಾದ ಮೊತ್ತ

ವಿಷಯ; ಮೊತ್ತ (₹ ಕೋಟಿಗಳಲ್ಲಿ)

ಕೊಳವೆ ಬಾವಿ ಕೊರೆಯಲು; 136

ನಗರಗಳಲ್ಲಿ ನೀರು ಪೂರೈಕೆ; 50

ಮೇವು ಖರೀದಿ, ಮಿನಿಕಿಟ್‌ ವಿತರಣೆ; 30
=====================

 
ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಮೊತ್ತ (₹ ಕೋಟಿಗಳಲ್ಲಿ)

ಜಿಲ್ಲೆ; ಮೊತ್ತ

ಬೆಂಗಳೂರು ಗ್ರಾ.; 7.02

ಬೆಂಗಳೂರು ನಗರ; 5.44

ಬೆಳಗಾವಿ; 4.05

ಬಳ್ಳಾರಿ; 5.79

ಬೀದರ್‌; 12.71

ವಿಜಯಪುರ; 2.14

ಬಾಗಲಕೋಟೆ; 4.66

ಚಿಕ್ಕಬಳ್ಳಾಪುರ; 5.69

ಚಿಕ್ಕಮಗಳೂರು; 38.48

ಚಿತ್ರದುರ್ಗ; 7.69

ಚಾಮರಾಜನಗರ; 5.32

ದಕ್ಷಿಣಕನ್ನಡ; 63.09

ಧಾರವಾಡ; 6.73

ದಾವಣಗೆರೆ; 3.08

ಕಲಬುರ್ಗಿ; 9.51

ಗದಗ; 6.52

ಹಾಸನ; 42.22

ಹಾವೇರಿ; 6.77

ಕೊಡಗು; 95.16

ಕೋಲಾರ; 6.37

ಕೊಪ್ಪಳ; 3.84

ಮಂಡ್ಯ; 4.67

ಮೈಸೂರು; 18.07

ರಾಯಚೂರು; 10.98

ರಾಮನಗರ; 10.59

ಶಿವಮೊಗ್ಗ; 31.12

ತುಮಕೂರು; 4.64

ಉತ್ತರ ಕನ್ನಡ; 36.12

ಉಡುಪಿ; 30.52

ಯಾದಗಿರಿ; 6.81

ಒಟ್ಟು; 495.80

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು