ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯದಲ್ಲಿ ಅಕ್ರಮ ಹಣ ಸಾಗಣೆ: ಆಯೋಗದ ಹದ್ದಿನ ಕಣ್ಣು

ಬಸ್ಸು, ರೈಲು, ಅಂಬುಲೆನ್ಸ್‌ಗಳ ಮೇಲೆ ವಿಶೇಷ ನಿಗಾ
Last Updated 7 ಏಪ್ರಿಲ್ 2019, 19:27 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಜಿದ್ದಾಜಿದ್ದಿ ಕ್ಷೇತ್ರವಾಗಿ ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಕ್ರಮ ಹಣ ಸಾಗಣೆ ಮತ್ತು ವಿತರಣೆಯ ಮೇಲೆ ಇನ್ನಷ್ಟು ಕಟ್ಟುನಿಟ್ಟಿನ ಕಣ್ಗಾವಲು ಇಡಲು ಚುನಾವಣಾ ಆಯೋಗ ಕ್ರಮ ತೆಗೆದುಕೊಂಡಿದೆ.

ಜಿಲ್ಲೆಯ ಜನ ಪ್ರತಿನಿಧಿಗಳು ಅಕ್ರಮವಾಗಿ ಹಣ ಸಾಗಿಸುತ್ತಾರೆಯೇ ಎಂಬ ಬಗ್ಗೆ ಸಚಿವರು, ಶಾಸಕರು ಮತ್ತು ಅವರ ಬೆಂಬಲಿಗರ ಮೇಲೆ ನಿಗಾ ಇಡಲಾಗುವುದು. ಅಲ್ಲದೆ, ಜಿಲ್ಲೆಯಲ್ಲಿ ಸಂಚರಿಸುವ ಬಸ್ಸುಗಳು, ಇತರ ವಾಹನಗಳು ಮತ್ತು ರೈಲಿನಲ್ಲಿ ಹಣ ಸಾಗಿಸುವ ಸಂಬಂಧ ಕಟ್ಟೆಚ್ಚರ ಇಡಲಾಗುವುದು ಎಂದು ಚುನಾವಣಾ ಆಯೋಗ ಮೂಲಗಳು ತಿಳಿಸಿವೆ.

ಸಣ್ಣ ನೀರಾವರಿ ಸಚಿವ ಸಿ.ಪುಟ್ಟರಾಜು ಮತ್ತು ಕಾಂಗ್ರೆಸ್‌ ನಾಯಕ ಜಿ.ಮಾದೇಗೌಡ ಅವರ ಮಧ್ಯೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಖಾಸಗಿ ವಾಹಿನಿಗಳಲ್ಲಿ ಪ್ರಸಾರ ಆದ ಹಿನ್ನೆಲೆಯಲ್ಲಿ ಅಯೋಗ ಎಚ್ಚೆತ್ತಿದೆ. ಸಂಭಾಷಣೆ ನಿಜವೋ ಅಲ್ಲವೋ ಗೊತ್ತಿಲ್ಲ. ಆದರೆ, ಆಯೋಗ ಶಂಕಿತ ವ್ಯಕ್ತಗಳ ಮೇಲೆ ಹೆಚ್ಚಿನ ನಿಗಾ ಇಡಲಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.

ಜೆಡಿಎಸ್‌ ಪಕ್ಷ ಮಂಡ್ಯ ಕ್ಷೇತ್ರದ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದೆ. ಸ್ವತಃ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಇಲ್ಲಿ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರು ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಆಯೋಗಕ್ಕೂ ದೂರು ಸಲ್ಲಿಸಿದ್ದಾರೆ. ಆದ್ದರಿಂದ ಆಯೋಗ ಈ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ಹೇಳಿದರು.

ಹಣಕ್ಕೆ ದಾಖಲೆ ಇರಬೇಕು: ಯಾರೇ ದೊಡ್ಡ ಮೊತ್ತದ ಹಣವನ್ನು ತೆಗೆದುಕೊಂಡು ಹೋಗಬೇಕಾದರೂ ಅದಕ್ಕೆ ಪೂರಕ ದಾಖಲೆ ಹೊಂದಿರಬೇಕು. ದಾಖಲೆ ಇಲ್ಲದೆ ದೊಡ್ಡ ಹಣವನ್ನು ಸಾಗಿಸುವುದು ಅಕ್ರಮ ಎನಿಸುತ್ತದೆ. ಲಕ್ಷಗಟ್ಟಲೆ ಅಥವಾ ಕೋಟಿಗಟ್ಟಲೆ ಸಾಗಿಸುವಾಗ ಸಿಕ್ಕಿಬಿದ್ದರೆ ‘ಮನಿಲಾಂಡರಿಂಗ್‌ ಕಾಯ್ದೆ’ಯಡಿ ಮೊಕದ್ದಮೆ ಹೂಡಲಾಗುತ್ತದೆ. ಇದರಿಂದ ಹಣ ಸಾಗಿಸಿದ ವ್ಯಕ್ತಿ ತೊಂದರೆಗೆ ಸಿಲುಕುವುದು ಖಚಿತ ಎಂದು ಅಧಿಕಾರಿ ತಿಳಿಸಿದರು.

ಮಂಡ್ಯ ಅಲ್ಲದೆ, ಹಾಸನ, ತುಮಕೂರು, ಬಳ್ಳಾರಿ, ಕೋಲಾರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಮೇಲೂ ವಿಶೇಷ ನಿಗಾ ಇರಿಸಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ₹ 62.43 ಕೋಟಿ ವಶ

ಲೋಕಸಭಾ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ ₹62.43 ಕೋಟಿ ಮೌಲ್ಯದ ನಗದರು, ಮದ್ಯ, ಮಾದಕ ವಸ್ತು ಮತ್ತು ಇತರ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಈವರೆಗೆ ₹13,55,5,722 ನಗದು, ₹ 39,10,857.54 ಮೌಲ್ಯದ 7310.811 ಲೀಟರ್ ಮದ್ಯ, ₹ 6,16,000 ಮೌಲ್ಯದ 131.81 ಕೆಜಿ ಮಾದಕ ವಸ್ತು ಹಾಗೂ ₹ 2,10,41,654 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ.

ಆದಾಯ ತೆರಿಗೆ ಇಲಾಖೆ ₹12.01 ಕೋಟಿ ನಗದು, ₹1.47 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದೆ.

ಮಂಡ್ಯದಲ್ಲಿ ₹10 ಕೋಟಿ ವಶ

ಮಂಡ್ಯ ಜಿಲ್ಲೆಯಲ್ಲಿ ಈವರೆಗೆ ₹ 10 ಕೋಟಿ ನಗದು ಮತ್ತು ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ನಗದು ಮತ್ತು ಇತರ ವಸ್ತುಗಳನ್ನು ಸಾಗಿಸುವ, ಸಂಗ್ರಹಿಸಿಟ್ಟಿರುವ ಮಾಹಿತಿಯನ್ನು ಸಾರ್ವಜನಿಕರು ಆಯೋಗಕ್ಕೆ ನೀಡಿದರೆ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್‌ ನಾಯಕ ಜಿ.ಮಾದೇಗೌಡ ಮತ್ತು ಸಚಿವ ಪುಟ್ಟರಾಜು ಅವರ ಮಧ್ಯೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಡೆದಿರುವ ದೂರವಾಣಿ ಸಂಭಾಷಣೆ ಬಗ್ಗೆ ಯಾವುದೇ ದೂರು ಬಂದಿಲ್ಲ ಎಂದೂ ಸಂಜೀವ್‌ ಕುಮಾರ್ ಸ್ಪಷ್ಟಪಡಿಸಿದರು.

ನಾಮಪತ್ರ ಹಿಂಪಡೆಯಲು ಇಂದು ಕೊನೆ ದಿನ

ಎರಡನೇ ಹಂತದಲ್ಲಿ ಮತದಾನ ನಡೆಯುವ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗುಲಬರ್ಗಾ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ನಾಮಪತ್ರ ಹಿಂತೆಗೆಯಲು ಸೋಮವಾರ ಕಡೇ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT