ಬುಧವಾರ, ಡಿಸೆಂಬರ್ 2, 2020
17 °C

ಪವಿತ್ರ ಆರ್ಥಿಕತೆ ಸೂಚನೆ ಪಾಲಿಸಿದ್ದರೆ ತಪ್ಪುತ್ತಿತ್ತು ಸಂಕಷ್ಟ: ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪವಿತ್ರ ಆರ್ಥಿಕ ವ್ಯವಸ್ಥೆ ಅನುಷ್ಠಾನಕ್ಕೆ ಆಗ್ರಹಿಸಿ ನಾವು ಸರ್ಕಾರಕ್ಕೆ ನೀಡಿದ್ದ ಸೂಚನೆಗಳನ್ನು ಪಾಲಿಸಿದ್ದರೆ, ಈಗ ಲಾಕ್‌ಡೌನ್‌ ಸಂದರ್ಭದಲ್ಲಿ ಲಕ್ಷಾಂತರ ಬಡವರು ಸಂಕಷ್ಟಕ್ಕೆ ಈಡಾಗುವುದು ತಪ್ಪುತ್ತಿತ್ತು’ ಎಂದು ರಂಗಕರ್ಮಿ ಪ್ರಸನ್ನ ಹೇಳಿದ್ದಾರೆ. 

ಪವಿತ್ರ ಆರ್ಥಿಕತೆಗೆ ಆಗ್ರಹಿಸಿ ಗ್ರಾಮ ಸೇವಾ ಸಂಘದ ವತಿಯಿಂದ ಸತ್ಯಾಗ್ರಹ ತೀವ್ರಗೊಳಿಸಿರುವ ಅವರು, ಶುಕ್ರವಾರದಿಂದ ಉಪವಾಸ ಆರಂಭಿಸಿದ್ದಾರೆ. ಸಂಘದ ಕಾರ್ಯಕರ್ತರು ಮತ್ತು ನಾಗರಿಕರು ಬಂದು– ಹೋಗುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅವರು ಅಜ್ಞಾತ ಸ್ಥಳದಲ್ಲಿ ಉಪವಾಸ ಮಾಡುತ್ತಿದ್ದಾರೆ. 

ಪವಿತ್ರ ಆರ್ಥಿಕತೆಯ ಮಹತ್ವ ಕುರಿತು ಪ್ರಧಾನಿ ನರೇಂದ್ರ ಮೋದಿಯವರಿಗೆ ಅವರು ಪತ್ರ ಬರೆದಿದ್ದಾರೆ. 

‘ದೇಶದಲ್ಲಿನ ರಾಕ್ಷಸ ಆರ್ಥಿಕತೆ ಕುಸಿದು ಬಿದ್ದಿದೆ. ಬೀಳುವ ಮೊದಲು, ಪ್ರಕೃತಿ ಮತ್ತು ಮಾನವ ಎಂಬ ಎರಡೂ ತತ್ವಗಳನ್ನು ಕುಲಗೆಡಿಸಿಹೋಗಿದೆ. ಹಸಿವಿನಿಂದ ಮನುಷ್ಯರು ಹುಳುಗಳಂತೆ ಹರಿದಾಡುತ್ತಿದ್ದಾರೆ. ಆದರೂ ನಾವು ಪಾಠ ಕಲಿತಂತಿಲ್ಲ. ಮಾತ್ರವಲ್ಲ, ಆಮ್ಲಜನಕ ನೀಡಿ ರಾಕ್ಷಸ ಆರ್ಥಿಕತೆಯನ್ನು ಬದುಕಿಸಬೇಕು ಎಂಬ ಮಾತುಗಳು ಈಗಾಗಲೇ ಕೇಳಿಬರುತ್ತಿವೆ. ಅಂತಹ ಮೂರ್ಖತನಕ್ಕೆ ಬಲಿಯಾಗದಿರೋಣ, ಪವಿತ್ರ ಆರ್ಥಿಕತೆಯನ್ನು ಗೆಲ್ಲಿಸೋಣ' ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಮಹಾನಗರ ಹಾಗೂ ಮಹಾನ್ ಕಾರ್ಖಾನೆಗಳನ್ನು ನಿರ್ಮಿಸುತ್ತಾ ಹೋದರೆ ರಾಕ್ಷಸ ರಾಜ್ಯವಾಗುತ್ತದೆ. ನೀವು ನಿಜಕ್ಕೂ ರಾಮರಾಜ್ಯ ನಿರ್ಮಿಸಲು ಪ್ರಯತ್ನಿಸಿದರೆ ಸಂತೋಷ. ಒಂದೊಮ್ಮೆ ಪ್ರಯತ್ನವನ್ನೇ ಮಾಡದೆ ಹೋದರೆ ಉಪವಾಸ ವ್ರತದ ಮೂಲಕ ಪವಿತ್ರ ಬಡವರ ಪರವಾಗಿ ಪ್ರಾಣ ತೆರುತ್ತೇನೆ’ ಎಂದೂ ಅವರು ಹೇಳಿದ್ದಾರೆ. 

‘ಕೇಂದ್ರ ಸಚಿವ ಸದಾನಂದಗೌಡರು ಕಳೆದ ವರ್ಷ ನಡೆದ ಒಂದು ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಉಪವಾಸವನ್ನು ಕೈಬಿಡುವಂತೆ ಮನವಿ ಮಾಡಿದರು. ಕೇಂದ್ರದ ಜೊತೆಗೆ ಮಾತುಕತೆಗೆ ಅನುವು ಮಾಡಿಕೊಟ್ಟಿದ್ದರಿಂದ, ಮಾತುಕತೆ ನಡೆಸಲಾಗಿತ್ತು. ಆದರೆ, ಮಾತುಕತೆಯ ಸಂದರ್ಭದಲ್ಲಿ ನೀಡಿದ್ದ ಸೂಚನೆಗಳನ್ನು ಕಾರ್ಯಗತಗೊಳಿಸಲಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಬದನವಾಳು ಸತ್ಯಾಗ್ರಹ

2015ರ ಏಪ್ರಿಲ್‌ನಲ್ಲಿ ದೇಶದ ಹಲವು ಸಂಘಟನೆಗಳು ‘ಬದನವಾಳು ಸತ್ಯಾಗ್ರಹ’ ಎಂಬ ಕಾರ್ಯಕ್ರಮದಡಿಯಲ್ಲಿ ಸುಸ್ಥಿರ ಬದುಕಿನ ಅನಿವಾರ್ಯತೆಗೆ ಆಗ್ರಹಿಸಿ ಸತ್ಯಾಗ್ರಹ ನಡೆಸಿದ್ದರು. ಯಂತ್ರಗಳ ಅಲ್ಪಪ್ರಮಾಣದ ಬಳಕೆ ಶೇ 40 ಮೀರಬಾರದು ಮತ್ತು ಯಾವುದೇ ಉತ್ಪಾದನಾ ವ್ಯವಸ್ಥೆಯಲ್ಲಿ ಶೇ 60ರಷ್ಟು ಮಾನವಶ್ರಮದ ಬಳಕೆ ಇರಲೇಬೇಕು ಎಂದು ಒತ್ತಾಯಿಸಿ ಈ ಸತ್ಯಾಗ್ರಹ ಮಾಡಲಾಗಿತ್ತು. ಕಳೆದ ಶುಕ್ರವಾರ ಒಂದು ದಿನದ ರಾಷ್ಟ್ರೀಯ ಉಪವಾಸ ಸತ್ಯಾಗ್ರಹ ಮಾಡಲು ಗ್ರಾಮಸೇವಾ ಸಂಘ ಕರೆ ನೀಡಿತ್ತು. ದೇಶದ ವಿವಿಧ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಉಪವಾಸ ಮಾಡಿ, ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು