ಭಾನುವಾರ, ಮಾರ್ಚ್ 29, 2020
19 °C
ಕಲಾವಿದ ವ್ಯಾನ್ ಇಂಗನ್ ಆಸ್ತಿ ಕಬಳಿಕೆ ಪ್ರಕರಣ

ಮೈಸೂರು: ₹118 ಕೋಟಿ ಆಸ್ತಿ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೈಸೂರು ಮಹಾರಾಜರ ಆಸ್ಥಾನದಲ್ಲಿದ್ದ ಪ್ರಾಣಿ ಕಲಾಕೃತಿಗಳ ಕಲಾವಿದ, ಬ್ರಿಟಿಷ್‌ ಪ್ರಜೆ ಎಡ್ವಿನ್‌ ಜೋಬರ್ಟ್‌ ವ್ಯಾನ್‌ ಇಂಗನ್‌ ಅವರ ಆಸ್ತಿ ಕಬಳಿಸಿದ ಆರೋಪಕ್ಕೆ ಒಳಗಾದ ಕುದುರೆ ತರಬೇತುದಾರ ಮೈಕೆಲ್‌ ಫ್ಲಾಯ್ಡ್‌ ಈಶ್ವರ್‌ ಅವರ ₹ 118 ಕೋಟಿ ಮೌ‌ಲ್ಯದ ಆಸ್ತಿಯನ್ನು ಜಾರಿ ನಿರ್ದೇ ಶನಾಲಯ (ಇ.ಡಿ) ಜಪ್ತಿ ಮಾಡಿದೆ.

ಮೈಸೂರು ನಜರ್‌ಬಾದ್‌ ಮೊಹಲ್ಲಾದ ಹೈದರ್‌ ಆಲಿ ರಸ್ತೆಯ (ಅಬ್ಬಾ ರಸ್ತೆ) ‘ಬಿಸಲ್‌ ಮುಂಟಿ’ ಬಂಗಲೆ, ಕೇರಳದ ವಯನಾಡ್‌ನ ಕಾಫಿ ತೋಟ (220.16 ಎಕರೆ ವಿಸ್ತೀರ್ಣ), ಸತ್ತ ಪ್ರಾಣಿಗಳ ಚರ್ಮದಿಂದ ತಯಾರಿಸಿದ 70 ವಿವಿಧ ಪ್ರಾಣಿಗಳ ಕಲಾಕೃತಿಗಳು ಮತ್ತು ರೋಸ್‌ ವುಡ್‌ ಪೀಠೋಪಕರಣಗಳನ್ನು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿ ಇ.ಡಿ ಜಪ್ತಿ ಮಾಡಿದೆ.  

ಮೈಕೆಲ್‌ ಮತ್ತಿತರರ ವಿರುದ್ಧ ಮೈಸೂರಿನ ಮೂರನೇ ಸಿಜೆಎಂ ನ್ಯಾಯಾ ಲಯದಲ್ಲಿ ಸಿಐಡಿ ಅಪರಾಧ ತನಿಖಾ ವಿಭಾಗದ ಪೊಲೀಸರು ಐಪಿಸಿ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಸಲ್ಲಿಸಿದ್ದ ದೋಷಾರೋಪ ಪಟ್ಟಿ ಆಧರಿಸಿ ಇ.ಡಿ ತನಿಖೆ ನಡೆಸಿದೆ. ನಜರ್‌ಬಾದ್‌ ಪೊಲೀಸ್‌ ಠಾಣೆಯಲ್ಲಿ ವ್ಯಾನ್‌ ಇಂಗನ್‌ ಸಲ್ಲಿಸಿದ್ದ ದೂರು ಆಧರಿಸಿ ಸಿಐಡಿ ತನಿಖೆ ನಡೆಸಿತ್ತು. ಈ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್‌ ಸಿಐಡಿಗೆ ಆದೇಶಿಸಿತ್ತು.

ವ್ಯಾನ್‌ ಇಂಗನ್‌ ಸ್ವಾತಂತ್ರ್ಯಪೂರ್ವದಲ್ಲೇ ಭಾರತಕ್ಕೆ ಬಂದು ಮೈಸೂರಿನಲ್ಲಿ ನೆಲೆಸಿದ್ದರು. ಇವರಿಗೆ ಈಶ್ವರ್‌ ಅವರ ಪರಿಚಯ ಆಗಿತ್ತು. ಅವರಿಗೆ ತಾನು ದತ್ತು ಪುತ್ರ ಎಂದು ಹೇಳಿ ಈಶ್ವರ್‌ ನಕಲಿ ದಾಖಲೆ ಸೃಷ್ಟಿಸಿದ್ದರು. ನಕಲಿ ಮರಣ ಪ್ರಮಾಣ ಪತ್ರ ಪಡೆದು ಎಲ್ಲ ಆಸ್ತಿ ತಮ್ಮ ಹೆಸರಿಗೆ ವರ್ಗಾಯಿಸಿ
ದ್ದರು ಎಂದು ಸಿಐಡಿ ತನಿಖೆ ಬಯಲು ಮಾಡಿತ್ತು. ಇಂಗನ್‌ ಅವರಿಗೆ ಮೈಸೂರು ಮಹಾರಾಜರು ಬೆಲೆ ಬಾಳುವ ಆಸ್ತಿ ಉಡುಗೊರೆ ನೀಡಿದ್ದರು. ಆರೋಪಿ ಅವರ ಆಸ್ತಿ ಕಬಳಿಸಿ ವಂಚಿಸಿದ್ದಾರೆ ಎಂದೂ ಸಿಐಡಿ ಹೇಳಿತ್ತು.

ವ್ಯಾನ್ ಇಂಗನ್‌ ಅವರಿಗೆ ಈಶ್ವರ್‌ ವಿಶ್ವಾಸ ದ್ರೋಹ ಎಸಗಿ, ಅಕ್ರಮ ಹಣಕಾಸು ವರ್ಗಾವಣೆ ನಡೆಸಿದ್ದಾರೆ ಎಂದು ಇ.ಡಿ ಆರೋಪಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು