ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಇಲಾಖೆಯ ಎಲ್ಲ ಸೇವೆ ಆನ್‌ಲೈನ್‌ಗೆ

ಮೇ 1 ರಿಂದಲೇ ಜಾರಿ l ಕಾಗದ ರಹಿತವಾಗಲಿದೆ ಸಾರ್ವಜನಿಕ ಶಿಕ್ಷಣ ಇಲಾಖೆ
Last Updated 24 ಏಪ್ರಿಲ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಸಂಪೂರ್ಣ ಡಿಜಿಟಲೀಕರಣ ಆಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಇಲಾಖೆ ಕಾಗದ ಮುಕ್ತವಾಗಲಿದ್ದು,ಪ್ರತಿಯೊಂದು ಸೇವೆಯೂ ಇನ್ನು ಮುಂದೆ ಆನ್‌ಲೈನ್‌ನಲ್ಲೇ ಲಭ್ಯವಾಗಲಿದೆ.

ಇಲಾಖೆಯ ಗ್ರೂಪ್‌ ‘ಎ’ ಮತ್ತು ‘ಬಿ‘ ದರ್ಜೆಯ ಅಧಿಕಾರಿಗಳು ಹಾಗೂ ಬೋಧಕ ಮತ್ತು ಬೋಧಕೇತರ ವೃಂದದ ನೌಕರರ ಸೇವಾ ಸೌಲಭ್ಯಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸುವ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಮೇ 1ರಿಂದ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.

‘ಇಲಾಖೆ ದೊಡ್ಡದಾಗಿ ಬೆಳೆದಿದ್ದು, ಸಿಬ್ಬಂದಿ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಲಿ ವ್ಯವಸ್ಥೆಯಲ್ಲಿ ಎಲ್ಲ ರೀತಿಯ ಸೇವೆಗಳನ್ನು ತ್ವರಿತಗತಿಯಲ್ಲಿ ನೀಡಲು ಸಾಧ್ಯವಾಗುತ್ತಿಲ್ಲ. ವಿವಿಧ ಹಂತಗಳಲ್ಲಿ ನಿಯಂತ್ರಣಾಧಿಕಾರಿಗಳ ಮೂಲಕ ಇಲಾಖಾ ಮುಖ್ಯಸ್ಥರಿಗೆ ಹಾಗೂ ಕೆಲವು ಸೌಲಭ್ಯಗಳನ್ನು ಪಡೆಯಲು ಸರ್ಕಾರಕ್ಕೆ ಮನವಿ ಸಲ್ಲಿಸಿ, ಅನುಮತಿ ಪಡೆಯಬೇಕಾಗಿದೆ. ಕಾರ್ಯಭಾರದ ಕಾರಣಗಳಿಂದ ಅನುಮತಿ ನೀಡುವುದು ವಿಳಂಬವಾಗುತ್ತಿದೆ. ಇದರಿಂದ ಅಧಿಕಾರಿಗಳಿಗೆ ಆಡಳಿತ ಮತ್ತು ಕಚೇರಿ ಸಿಬ್ಬಂದಿ ವರ್ಗದವರಿಗೆ ದೈನಂದಿನ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಎಲ್ಲ ಸೌಲಭ್ಯಗಳನ್ನೂ ಆನ್‌ಲೈನ್‌ ಮೂಲಕ ನೀಡಲು ಅಗತ್ಯವಿರುವ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ಮಿತವ್ಯಯ ಸಾಧಿಸಲು ಅನುಕೂಲವಾಗಲಿದೆ ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳ ಪ್ರವಾಸ ದಿನಚರಿ ನಿರ್ವಹಣೆ: ಶಾಲೆಗಳು, ಶಿಕ್ಷಕರ ತರಬೇತಿ ಕೇಂದ್ರಗಳು ಮತ್ತು ಪ್ರಮುಖ ಕಾರ್ಯಕ್ರಮಗಳ ಮೇಲುಸ್ತುವಾರಿಗಾಗಿ ಅಧಿಕಾರಿಗಳು ಪ್ರವಾಸ ಕೈಗೊಳ್ಳಬೇಕಾಗಿದೆ. ಪ್ರತಿ ತಿಂಗಳ 28ನೇ ತಾರೀಕಿನ ಒಳಗೆ ಪ್ರವಾಸ ಪಟ್ಟಿ ತಯಾರಿಸಿ ಅನುಮೋದನೆ ಪಡೆದುಕೊಳ್ಳಬೇಕು. ಅಲ್ಲದೆ, ಪ್ರವಾಸ ದಿನಚರಿಯನ್ನು ದಾಖಲೆಗಳೊಂದಿಗೆ ನಿಯಂತ್ರಣಾಧಿಕಾರಿಗಳಿಗೆ ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ನೀಡಬೇಕು. ಈ ಸಂಬಂಧ ಪ್ರಕ್ರಿಯೆಗಳನ್ನು ಸರಳೀಕರಿಸಲು ಹಾಗೂ ತ್ವರಿತಗೊಳಿಸಲು ಆನ್‌ಲೈನ್‌ ಮೂಲಕವೇ ವ್ಯವಹರಿಸಬೇಕು.

ಕೆಸಿಎಸ್‌ಆರ್‌ ನಿಯಮದಂತೆ 10 ವರ್ಷಗಳ ಕಾಲ ಮಿತಿ ವೇತನ ಬಡ್ತಿ, 15 ವರ್ಷ ಸ್ವಯಂಚಾಲಿತ ವೇತನ ಬಡ್ತಿ, 20, 25, 30 ವರ್ಷಗಳ ಹೆಚ್ಚುವರಿ ವೇತನ ಬಡ್ತಿ ಹಾಗೂ ಸ್ಥಗಿತ ವೇತನ ಬಡ್ತಿ, ಹೆಚ್ಚುವರಿ ವೇತನ ಬಡ್ತಿ, ವಿಶೇಷ ವೇತನ ಬಡ್ತಿ, ಅಂಗವಿಕಲ ಬಡ್ತಿ ವಿಚಾರಗಳನ್ನು ಆನ್‌ಲೈನ್‌ ಮೂಲಕವೇ ಇತ್ಯರ್ಥಪಡಿಸಲಾಗುವುದು.

ಆನ್‌ಲೈನ್‌ನಲ್ಲಿ ಯಾವ ಸೇವೆ ಲಭ್ಯ

ವಿವಿಧ ರಜಾ ಸೌಲಭ್ಯಗಳು, ಪಾಸ್‌ಪೋರ್ಟ್‌ ಪಡೆಯಲು ಮತ್ತು ವಿದೇಶ ಪ್ರವಾಸಕ್ಕೆ ನಿರಾಕ್ಷೇಪಣಾ ಪತ್ರ, ಶಿಸ್ತು ಪ್ರಕರಣಗಳು ಮತ್ತು ದೂರುಗಳಸಲ್ಲಿಕೆ. ಪ್ರಭಾರ ಭತ್ಯೆ, ಅಧಿಕಾರಿಗಳ ಪ್ರವಾಸ ದಿನಚರಿ ನಿರ್ವಹಣೆ, ಅರ್ಹತಾದಾಯಕ ಸೇವೆ ಸೇರ್ಪಡೆಗೆ ಅನುಮೋದನೆ. ಕಾಲಮಿತಿ ವೇತನಬಡ್ತಿ, ಸ್ವಯಂ ಚಾಲಿತ ವೇತನ ಬಡ್ತಿ, ಹೆಚ್ಚುವರಿ ಬಡ್ತಿ, ಸ್ಥಗಿತ ವೇತನ ಬಡ್ತಿ, ಚರಾಸ್ತಿ ಮತ್ತು ಸ್ಥಿರಾಸ್ತಿ ಖರೀದಿಗೆ ಅನುಮತಿ. ಉನ್ನತ ವ್ಯಾಸಂಗಕ್ಕೆ ಮಂಜೂರಾತಿ ಸೇರಿ ಎಲ್ಲ ಸೇವೆ ಮತ್ತು ವ್ಯವಹಾರಗಳನ್ನೂ ಆನ್‌ಲೈನ್‌ ಮೂಲಕವೇ ನಡೆಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT