ಶುಕ್ರವಾರ, ಮಾರ್ಚ್ 5, 2021
21 °C
₹628 ಕೋಟಿ ವೆಚ್ಚ, 517 ಕಿ.ಮೀ ನಿರ್ಮಾಣ: ಸಚಿವ ಮಾಧುಸ್ವಾಮಿ

ಆನೆ ದಾಳಿ ತಡೆಗೆ ರೈಲ್ವೆ ಕಂಬಿಗಳ ಬೇಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಂತಿ ಬೇಲಿ ದಾಟುವ ಪ್ರಯತ್ನದಲ್ಲಿರುವ ಆನೆ –ಸಂಗ್ರಹ ಚಿತ್ರ

ಬೆಂಗಳೂರು: ಆನೆಗಳು ಕಾಡಿನಿಂದ ನಾಡಿಗೆ ಬರುವುದನ್ನು ತಡೆಯಲು ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮುಂದಿನ ಮೂರು ವರ್ಷಗಳಲ್ಲಿ ₹ 628 ಕೋಟಿ ವೆಚ್ಚದಲ್ಲಿ 517 ಕಿ.ಮೀ ಉದ್ದದ ತಡೆಗೋಡೆ ನಿರ್ಮಿಸ‌ಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ನಂತರ ಮಾಹಿತಿ ನೀಡಿದ ಕಾನೂನು ಹಾಗೂ ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ‘ಅರಣ್ಯದ ಅಂಚಿನಲ್ಲಿ ಕಂದಕ ನಿರ್ಮಾಣ ಸೇರಿದಂತೆ ವಿವಿಧ ರೀತಿಯ ಪ್ರಯತ್ನ ಮಾಡಿದ್ದರೂ ಕಾಡುಪ್ರಾಣಿಗಳು ನಾಡಿಗೆ ಬರುವುದನ್ನು ತಡೆಯಲು ಸಾಧ್ಯವಾಗಿಲ್ಲ. ಮಾನವ–ಪ್ರಾಣಿ ಸಂಘರ್ಷ ಹೆಚ್ಚುತ್ತಲೇ ಇದೆ. ಆನೆಗಳ ಹಾವಳಿಯಂತೂ ನಿಂತಿಲ್ಲ. ಹಾಗಾಗಿ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.

‘ಈ ವರ್ಷ 118 ಕಿ.ಮೀ ನಿರ್ಮಿಸಲು ₹100 ಕೋಟಿ ಬಿಡುಗಡೆಗೆ ಸಭೆ ಒಪ್ಪಿಗೆ ನೀಡಿದೆ. ನಾಗರಹೊಳೆ, ಬಂಡೀಪುರ, ಮಲೆಮಹದೇಶ್ವರ ಬೆಟ್ಟ, ಮಡಿಕೇರಿ, ಹಾಸನ, ರಾಮನಗರ, ಬನ್ನೇರುಘಟ್ಟ ಭಾಗದಲ್ಲಿ ಈ ತಡೆಗೋಡೆ ನಿರ್ಮಿಸಲಾಗುತ್ತದೆ’ ಎಂದರು.

ಕೆರೆ ತುಂಬಿಸಲು ₹504 ಕೋಟಿ: ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನಲ್ಲಿ 239 ಕೆರೆಗಳಿಗೆ ನೀರು ತುಂಬಿಸಲು ಒಟ್ಟು ₹504 ಕೋಟಿ ಬಿಡುಗಡೆ ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ವರದಾ ನದಿಯಿಂದ ನೀರು ತಂದು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳಿಗೆ ತುಂಬಿಸಲು ಯೋಜನೆ ರೂಪಿಸಲಾಗಿದೆ.

ನೀರಾವರಿ: ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವ ₹108 ಕೋಟಿ ಮೊತ್ತದ ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಗಿದೆ.

ಎಣ್ಣೆಹೊಳೆಯಿಂದ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೂ ಕುಡಿಯುವ ನೀರು ಒದಗಿಸಲಾಗುತ್ತದೆ.

ನೆರೆ ಪರಿಹಾರ; ಪೂರಕ ಬಜೆಟ್: ಇದೇ 10ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಪೂರಕ ಬಜೆಟ್ ಮಂಡಿಸಲು ಸರ್ಕಾರ ನಿರ್ಧರಿಸಿದೆ.

‘ತುರ್ತಾಗಿ ನೆರೆ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕಿದ್ದು, ಅದಕ್ಕಾಗಿ ಪೂರಕ ಬಜೆಟ್ ಮಂಡಿಸಲಾಗುವುದು. ಈಗಾಗಲೇ ಮಾಡಿರುವ ವೆಚ್ಚಕ್ಕೂ ಒಪ್ಪಿಗೆ ಪಡೆಯಬೇಕಾಗಿದೆ’ ಎಂದು ಸಚಿವ ಸಂಪುಟ ಸಭೆಯ ನಂತರ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕೆಲ ಯೋಜನೆಗಳಲ್ಲಿ ಉಳಿದಿದ್ದ ಹಾಗೂ ಹಣ ಬಿಡುಗಡೆಯಾಗಿದ್ದರೂ ತಕ್ಷಣಕ್ಕೆ ಬಳಸದ ಹಣವನ್ನು ಪ್ರವಾಹ ಸಂತ್ರಸ್ತರ ಪರಿಹಾರ ಕಾರ್ಯಕ್ಕೆ ವರ್ಗಾಯಿಸಲಾಗಿದೆ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಹಣವನ್ನು ವರ್ಗಾಯಿಸಿದ್ದರೂ, ಇತರೆಡೆ ಅದೇ ಸಮುದಾಯದವರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಗತ್ಯ ಇರುವ ಯೋಜನೆಗಳಿಗೆ ಮುಂದಿನ ದಿನಗಳಲ್ಲಿ ಈಗ ಪಡೆದುಕೊಂಡಿರುವಷ್ಟೇ ಹಣವನ್ನು ಮತ್ತೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಚಿವ ಸಂಪುಟ ಕೈಗೊಂಡ ನಿರ್ಧಾರ

*ರಕ್ತನಿಧಿ ಕೇಂದ್ರ ಹಾಗೂ ರಕ್ತ ಶೇಖರಣಾ ಘಟಕಗಳ ಉಪಕರಣ ಖರೀದಿಗೆ ₹12 ಕೋಟಿ ನೀಡಲು ಒಪ್ಪಿಗೆ.

*ಮಕ್ಕಳ ಆರೋಗ್ಯ ಕಾರ್ಯಕ್ರಮದಲ್ಲಿ ಶಿಶು ಮರಣ ಕಡಿಮೆ ಮಾಡುವ ಕಾರ್ಯಕ್ರಮಗಳಿಗೆ ಔಷಧಿ, ಉಪಕರಣ, ಸಲಕರಣೆ ಖರೀದಿಗೆ ₹16.96 ಕೋಟಿ ಬಿಡುಗಡೆ.‌

*ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಹಾಗೂ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ಹುಣಸಗಿ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ನಿರ್ಧಾರ.

*ರಾಯಬಾಗ ತಾಲ್ಲೂಕು ಜಲಾಲ್‌ಪುರ ಬಳಿ ಕೃಷ್ಣ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣಕ್ಕೆ ₹27.92 ಕೋಟಿ ಬಿಡುಗಡೆ.

*ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗೆ ₹55.42 ಕೋಟಿ ನೀಡಲು ಒಪ್ಪಿಗೆ.

*ಜಮಖಂಡಿ ಆಸ್ಪತ್ರೆ ಮೇಲುದರ್ಜೆಗೆ ಏರಿಸಲು ನಿರ್ಧಾರ.

*ಮಹಾತ್ಮಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಸನ್ನಡತೆ ಆಧಾರದ ಮೇಲೆ 20 ಕೈದಿಗಳ ಬಿಡುಗಡೆ.

ವಸತಿ ಶಾಲೆ ಮಕ್ಕಳಿಗೆ ನೋಟ್ ಬುಕ್

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ 824 ವಸತಿ ಶಾಲೆ ಮಕ್ಕಳಿಗೆ ನೋಟ್ ಬುಕ್, ಇತರ ಸ್ಟೇಷನರಿ ವಿತರಣೆಗೆ ಹೆಚ್ಚುವರಿಯಾಗಿ ₹26 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

ಈಗಾಗಲೇ ಈ ಸೌಲಭ್ಯ ಒದಗಿಸಲಾಗಿದ್ದು, ಹಣ ಕೊರತೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಈ ಸಾಮಗ್ರಿಗಳನ್ನು ಎಂಎಸ್‌ಐಎಲ್‌ನಿಂದಲೇ ಖರೀದಿಸಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು