ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರೇ ಗಟ್ಟಿ: ತ್ರಿಶಂಕು ಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ

ಒಳನೋಟ
Last Updated 12 ಜನವರಿ 2019, 20:16 IST
ಅಕ್ಷರ ಗಾತ್ರ

ಬೆಳಗಾವಿ: ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ನಿಯಮಗಳ ಪ್ರಕಾರ ಪ್ರತಿ ಎಂಜಿನಿಯರಿಂಗ್ ಕಾಲೇಜು ಎನ್‌ಬಿಎ (ನ್ಯಾಷನಲ್ ಬೋರ್ಡ್ ಆಫ್ ಅಕ್ರಡಿಟೇಷನ್) ಮಾನ್ಯತೆ ಕಡ್ಡಾಯ. ಆದರೆ ರಾಜ್ಯದ ಯಾವುದೇ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಕೂಡ ಎನ್‌ಬಿಎ ಮಾನ್ಯತೆ ಪಡೆದಿಲ್ಲ.

ಕಟ್ಟಡ, ಪ್ರಯೋಗಾಲಯ, ಬೋಧಕ ಸಿಬ್ಬಂದಿ ಕೊರತೆ ಸರ್ಕಾರಿ ಕಾಲೇಜುಗಳನ್ನು ಬಾಧಿಸುತ್ತಿದೆ. ಬೋಧಕ ಸಿಬ್ಬಂದಿ ವಿಷಯದಲ್ಲಿ ಈ ಕಾಲೇಜುಗಳು ತೀವ್ರ ಹಿನ್ನಡೆ ಅನುಭವಿಸುತ್ತಿವೆ. ಕಾಯಂ ಸಿಬ್ಬಂದಿ ಇರುವುದು ಶೇಕಡಾ 20 ರಿಂದ ಶೇಕಡಾ 30 ರಷ್ಟು ಮಾತ್ರ. ಗುತ್ತಿಗೆ ಮತ್ತು ಅತಿಥಿ ಉಪನ್ಯಾಸಕ ಸಿಬ್ಬಂದಿಯೇ ಗಟ್ಟಿ ಅನ್ನುವಂಥ ಸ್ಥಿತಿಯಿದೆ.

ಪ್ರತಿ ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲು ಎಐಸಿಟಿಇ ತಜ್ಞರ ಸಮಿತಿ ಪ್ರತಿ ಕಾಲೇಜಿಗೆ ಭೇಟಿ ನೀಡಿ ಅಲ್ಲಿರುವ ಕೋರ್ಸ್ ಗಳು, ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ, ಬೋಧಕರ ಸಂಖ್ಯೆ, ಪ್ರಯೋಗಾಲಯ ಸಹಿತ ಇರುವ ಸೌಲಭ್ಯಗಳನ್ನು ಪರಿಶೀಲಿಸಿ ಅಂತಿಮವಾಗಿ ಮುಂದಿನ ವರ್ಷದ ಸೀಟುಗಳ ಸಂಖ್ಯೆ ನಿಗದಿಗೊಳಿಸುತ್ತದೆ. ಕೆಲ ದಿನಗಳ ಹಿಂದೆ ಸರಕಾರಿ ಕಾಲೇಜುಗಳಿಗೆ ಭೇಟಿ ನೀಡಿದ್ದ ಎಐಸಿಟಿಇ ಸದಸ್ಯ ತಂಡ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ಸರ್ಕಾರಿ ಕಾಲೇಜುಗಳ ಪರಿಸ್ಥಿತಿ ಗಮನಿಸಿ ವರದಿ ನೀಡಿತ್ತು. ಇತ್ತೀಚೆಗೆ ನಡೆದ ಎಐಸಿಟಿಇ ಕಮಿಟಿ ಸಭೆಯಲ್ಲಿ ಕಠಿಣ ನಿರ್ಧಾರ ಕೈಗೊಂಡು ಮುಂದಿನ ಶೈಕ್ಷಣಿಕ ವರ್ಷದಿಂದ ಸೀಟುಗಳ ಕಡಿತಕ್ಕೆ ಸೂಚನೆ ನೀಡಿ ಪತ್ರ ಬರೆದಿದೆ.

ಈ ರೀತಿ ಸೀಟುಗಳ ಕಡಿತಕ್ಕೆ ಸೂಚನೆ ಪಡೆದ ಕಾಲೇಜುಗಳ ಪಟ್ಟಿಯಲ್ಲಿ ಶತಮಾನೋತ್ಸವ ಆಚರಿಸಿಕೊಂಡಿರುವ ಯುವಿಸಿಇ ಕೂಡ ಸೇರಿದೆ. ಪ್ರಯೋಗಾಲಯ, ಬೋಧಕ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಯುವಿಸಿಇ ಕಾಲೇಜು ಕಟ್ಟಡ ಇದೀಗ ನವೀಕರಣಗೊಳ್ಳುತ್ತಿದೆ. ಇದನ್ನು ಗಮನಿಸಿದ ಎಐಸಿಟಿಇ ಶೇಕಡಾ 10 ಸೀಟು ಕಡಿತಕ್ಕೆ ಪತ್ರ ಬರೆದಿದೆ ಎಂದು ಗೊತ್ತಾಗಿದೆ.

ಉಳಿದ 10 ಕಾಲೇಜುಗಳ ಪೈಕಿ ಒಂದು ಕಾಲೇಜಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಪ್ರವೇಶವನ್ನೇ ಮಾಡಕೂಡದು ಎಂದಿದ್ದರೆ, ಒಂದು ಕಾಲೇಜಿಗೆ ಶೇಕಡಾ 50ರಷ್ಟು ಸೀಟು ಕಡಿತಕ್ಕೆ, ಮತ್ತೊಂದಕ್ಕೆ ಶೇಕಡಾ 25 ಸೀಟು ಕಡಿತಕ್ಕೆ ಸೂಚಿಸಿದೆ. ಮೂರು ಕಾಲೇಜಿಗೆ ಮತ್ತೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲಿಸಲಿ ಎಂದು ಶಿಫಾರಸು ಮಾಡಲಾಗಿದೆ. ಒಂದು ಕಾಲೇಜಿಗೆ ಸಿಬ್ಬಂದಿ ನೇಮಕ ದಾಖಲೆ ಒದಗಿಸುವಂತೆ ಸೂಚಿಸಿದ್ದರೆ, ಮೂರು ಕಾಲೇಜುಗಳಿಗೆ ಸೌಲಭ್ಯಗಳನ್ನು ಸರಿಪಡಿಸಿಕೊಳ್ಳಬೇಕು ಎಂಬ ಎಚ್ಚರಿಕೆ ಸಹಿತ ಪ್ರವೇಶಕ್ಕೆ ಅನುಮತಿಸಲಾಗಿದೆ. ಎಐಸಿಟಿಯುದ ಈ ಕಠಿಣ ನಿರ್ಧಾರಗಳ ಪುನರ್ ಪರಿಶೀಲನೆಗೆ ಮನವಿ ಮಾಡಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ ಅದಕ್ಕೆ ಪೂರಕವಾಗಿ ಆನ್ ಲೈನ್ ಮೂಲಕ ಅಗತ್ಯ ದಾಖಲೆಗಳನ್ನು, ಮಂಡಳಿ ಕೇಳುವ ವಿವರಗಳನ್ನು ಒದಗಿಸ
ಬೇಕಾಗುತ್ತದೆ.

ಹೊಸ ಕಾಲೇಜಿಗೆ ಅನುಮತಿ: ಇರುವ ಹನ್ನೊಂದು ಕಾಲೇಜುಗಳು ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವಾಗ ಸರ್ಕಾರ ಅದನ್ನು ಸರಿಪಡಿಸುವುದನ್ನು ಬಿಟ್ಟು ಹೊಸ ಕಾಲೇಜು ಸ್ಥಾಪನೆಗೆ ಮುಂದಾಗಿರುವುದು ಹುಬ್ಬೇರುವಂತೆ ಮಾಡಿದೆ. ಹಾಸನ ನಗರದ ಎಂಜಿನಿಯರಿಂಗ್ ಕಾಲೇಜಿಗೆ ಇನ್ನೂ ಸೌಲಭ್ಯಗಳ ಅಗತ್ಯವಿದೆ. ನಾನಾ ಕೊರತೆಗಳ ಕಾರಣಕ್ಕೇ ಶೇಕಡಾ 10 ಸೀಟು ಕಡಿತಕ್ಕೆ ಶಿಫಾರಸು ಮಾಡಲಾಗಿದೆ.

ಇಂಥ ಸನ್ನಿವೇಶದಲ್ಲಿ ಹಾಸನದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ಮೊಸಳೆ ಹೊಸಹಳ್ಳಿಯಲ್ಲಿ ಹೊಸ ಎಂಜಿನಿಯರಿಂಗ್ ಕಾಲೇಜು ಆರಂಭಿಸಲು ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ. ಹಿಂದಿನ ಸರಕಾರದ ಅವಧಿಯಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜರಾಯರೆಡ್ಡಿ ಅವರ ಕ್ಷೇತ್ರದಲ್ಲೂ ಹೊಸ ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಅನುಮತಿ ನೀಡಲಾಗಿದೆ.

**

ಅಭಿವೃದ್ಧಿಗೆ ಕ್ರಮ

‘ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸೌಲಭ್ಯಗಳ ಕೊರತೆ ಇರುವುದು ಗಮನದಲ್ಲಿದೆ. ಕುಲಪತಿ, ಪ್ರಾಂಶುಪಾಲರ ಸಭೆ ಕರೆದು ಚರ್ಚಿಸುತ್ತೇನೆ. ಬೋಧಕರ ನೇಮಕಕ್ಕೂ ಆದ್ಯತೆ ನೀಡಲಾಗುವುದು. ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡುವಂತೆ ಮುಖ್ಯಮಂತ್ರಿಯನ್ನು ಕೋರುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಪ್ರತಿಕ್ರಿಯಿಸಿದರು.

**

ಸುಧಾರಿಸಲು ಮುಂದಾಗಬೇಕು

‘ಸರ್ಕಾರಿ ಕಾಲೇಜುಗಳ ದುಸ್ಥಿತಿಗೆ ಕಾರಣಗಳೇನು ಎನ್ನುವುದಕ್ಕಿಂತ, ಮುಂದೇನು ಮಾಡಬೇಕು ಎನ್ನುವುದನ್ನು ಸರ್ಕಾರ ಚಿಂತಿಸಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ, ಬೋಧಕ– ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಬಹಳ ಅವಶ್ಯವಾಗಿರುವ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು; ಎಐಸಿಟಿಇ ಮಾನದಂಡಗಳ ಪ್ರಕಾರ ಕನಿಷ್ಠ ಸೌಲಭ್ಯಗಳನ್ನಾದರೂ ಒದಗಿಸಬೇಕು. ಬಳಿಕ, ಹಂತ– ಹಂತವಾಗಿ ಸುಧಾರಿಸುತ್ತಾ ಹೋಗಬೇಕು. ಇದೆಲ್ಲವೂ ಸರ್ಕಾರಕ್ಕೂ ಗೊತ್ತಿದೆ; ಕಾಲೇಜುಗಳಿಗೂ ಗೊತ್ತಿದೆ’ ಎಂದು ವಿಟಿಯು ವಿಶ್ರಾಂತ ಕುಲಪತಿ ಪ್ರೊ.ಎಚ್‌.ಪಿ. ಖಿಂಚ ಹೇಳಿದರು.

**

ನಿರ್ಲಕ್ಷ್ಯವೇ ಕಾರಣ...

‘ಖಾಸಗಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ಇರುವುದನ್ನು ಗಮನಿಸಿ, ಬಡ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್‌ ಶಿಕ್ಷಣ ದೊರೆಯಲೆಂದು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಆರಂಭಿಸಿರುವುದು ಸರಿಯಾಗಿದೆ. ಆದರೆ, ಕೇವಲ ಆರಂಭಿಸಿ, ಕೊಂಚ ಸೌಲಭ್ಯ ಒದಗಿಸುವುದರಿಂದ ಪ್ರಯೋಜನ ಆಗುವುದಿಲ್ಲ. ಅವುಗಳನ್ನು ಉತ್ಕೃಷ್ಟ ಕೇಂದ್ರಗಳನ್ನಾಗಿಸಬೇಕು. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ತಲಾ ₹200ರಿಂದ ₹ 300 ಕೋಟಿಯನ್ನಾದರೂ ಕೊಡಬೇಕು. ಪ್ರತಿ ಕಾಲೇಜಿಗೂ ಸಲಹಾ ಮಂಡಳಿ ರಚಿಸಿ, ಅದರ ಶಿಫಾರಸುಗಳನ್ನು ಆಧರಿಸಿ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಎಂಜಿನಿಯರಿಂಗ್ ಕಾಲೇಜುಗಳಿಗೆಂದೇ ನಿರ್ದಿಷ್ಟ ಬಜೆಟ್‌ ನಿಗದಿಪಡಿಸಬೇಕು’ ಎಂದು ವಿಟಿಯು ವಿಶ್ರಾಂತ ಕುಲಪತಿ ಪ್ರೊ.ಕೆ. ಬಾಲವೀರರೆಡ್ಡಿ ಸಲಹೆ ನೀಡಿದರು.

**

ಸರಕಾರಿ ಕಾಲೇಜುಗಳ ಕಾಯಕಲ್ಪಕ್ಕೆ ಏನು ಮಾಡಬೇಕು ?

* ಹಳೇ ಕಾಲೇಜುಗಳು ಸುಸ್ಥಿತಿಗೆ ಬರುವತನಕ ಹೊಸ ಕಾಲೇಜಿಗೆ ಅನುಮತಿ ನೀಡಬಾರದು

* ಕಾಲಮಿತಿಯಲ್ಲಿ ಖಾಲಿ ಬೋಧಕ, ಬೋಧಕೇತರ ಹುದ್ದೆಗಳ ಭರ್ತಿಗೆ ಕ್ರಮ ಜರುಗಿಸಬೇಕು

* ಪ್ರತಿ ಕಾಲೇಜಿನ ಅಗತ್ಯಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ರೂಪಿಸಿ ಅನುದಾನ ನೀಡಬೇಕು

* ಕಟ್ಟಡ ಸಹಿತ ಮೂಲ ಸೌಲಭ್ಯಗಳಿಗೆ ಬಜೆಟ್ ನಲ್ಲಿ ಅನುದಾನ ಒದಗಿಸಬೇಕು

* ಗ್ರಂಥಾಲಯ ಮತ್ತು ಪ್ರಯೋಗಾಲಯ ಸ್ಥಾಪನೆಗೆ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು

* ಶತಮಾನದಷ್ಟು ಹಳೆಯದಾದ ಯುವಿಸಿಇಯನ್ನು ಮಾದರಿ ಸಂಸ್ಥೆಯಾಗಿ ರೂಪಿಸಲು ವಿಶೇಷ ಅನುದಾನ ನೀಡಬೇಕು

* ಕ್ಯಾಂಪಸ್ ಆಯ್ಕೆಗೆ ಪೂರಕವಾಗಿ ಪ್ಲೆಸ್ ಮೆಂಟ್ ಸೆಲ್ ಗಳನ್ನು ತೆರೆಯಬೇಕು

* ತಜ್ಞರ ಸಮಿತಿ ನಿಯಮಿತವಾಗಿ ಕಾಲೇಜುಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಪರಾಮರ್ಶಿಸಬೇಕು

**

‘ಖಾಸಗಿ ಕಾಲೇಜುಗಳೂ ಹಿಂಗೇ ಇದ್ದವು’

ಬೆಳಗಾವಿ: ‘ರಾಜ್ಯದಲ್ಲಿರುವ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲೂ ಆರಂಭದಲ್ಲಿ ಸೌಲಭ್ಯಗಳಿರಲಿಲ್ಲ. ನಮ್ಮ ಕಾಲೇಜುಗಳಿಗಿಂತಲೂ ಕಡೆಯಾಗಿದ್ದವು. ನಂತರ ಸುಧಾರಿಸುತ್ತಾ ಬಂದಿವೆ. ಸರ್ಕಾರಿ ಕಾಲೇಜುಗಳಲ್ಲೂ ಹೀಗೆಯೇ ಆಗುತ್ತದೆ’ ಎಂದು ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ಎಚ್.ಯು. ತಳವಾರ ಸಮರ್ಥಿಸಿಕೊಂಡರು.

‘ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ವಾರ್ಷಿಕ ಕೇವಲ ₹ 18,090 ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ–1ರವರಿಗೆ ವಿದ್ಯಾರ್ಥಿ ವೇತನ ಕೊಡುವುದರಿಂದ ಉಚಿತವಾಗಿಯೇ ಶಿಕ್ಷಣ ನೀಡಿದಂತೆ ಆಗುತ್ತದೆ. ಖಾಸಗಿ ಕಾಲೇಜುಗಳಲ್ಲಿ ಶುಲ್ಕ ದುಬಾರಿ ಇರುವುದಿಲ್ಲವೇ? ನಾವು ಬಹಳಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ದಿಢೀರನೆ ಎಲ್ಲವನ್ನೂ ಮಾಡಲಾಗುವುದಿಲ್ಲ’‍ ಎಂದು ಪ್ರತಿಕ್ರಿಯೆ ನೀಡಿದರು.

‘ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರಯೋಗಾಲಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಅನುದಾನ ಒದಗಿಸುವಂತೆ ಕೋರಿ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿರುವ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿದ ನಂತರ ಹೊಸ ಕಾಲೇಜುಗಳ ಆರಂಭಕ್ಕೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದಕ್ಕೆ ಆದ್ಯತೆ ನೀಡಿದ್ದೇವೆ. ಟಾಪ್‌ –10ನಲ್ಲಿ ಸ್ಥಾನ ಪಡೆಯಬೇಕು ಎನ್ನುವ ಗುರಿಯನ್ನೂ ಹೊಂದಿದ್ದೇವೆ’ ಎಂದು ತಿಳಿಸಿದರು.

‘ಎಂಜಿನಿಯರಿಂಗ್‌ ಕಾಲೇಜುಗಳ ಮೇಲಿನ ನಿಯಂತ್ರಣ, ಪರೀಕ್ಷೆ, ಸ್ವಾಯತ್ತ ಸ್ಥಾನಮಾನ ನೀಡುವುದು ಎಲ್ಲವನ್ನೂ ವಿಟಿಯು ನಿರ್ವಹಿಸುತ್ತಿದೆ. ಹೀಗಾಗಿ, ಎಲ್ಲ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳನ್ನೂ ವಿಟಿಯು ವ್ಯಾಪ್ತಿಗೆ ಹಸ್ತಾಂತರಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ. ಆದಾಯ ತೆರಿಗೆ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಹಣ ವಿಶ್ವವಿದ್ಯಾಲಯಕ್ಕೆ ಬಂದ ನಂತರ ಇದು ಅನುಷ್ಠಾನಕ್ಕೆ ಬರಬಹುದು’ ಎಂದು ಹೇಳಿದರು.

‘ಮುಂದಿನ ಶೈಕ್ಷಣಿಕ ಸಾಲಿನಿಂದ ಸೀಟುಗಳನ್ನು ಕಡಿತ ಮಾಡುವುದಾಗಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಎಚ್ಚರಿಕೆ ಕೊಟ್ಟಿದೆ. ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಪ್ರಾಂಶುಪಾಲರಿಗೆ ತಾಕೀತು ಮಾಡಲಾಗಿದೆ. ಸೀಟುಗಳನ್ನು ಕಡಿತಗೊಳಿಸಿದರೆ, ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಹಾಗೊಂದು ವೇಳೆ ಪರಿಷತ್ತು ಪಟ್ಟು ಹಿಡಿದಲ್ಲಿ ಕಾನೂನು ಹೋರಾಟ ನಡೆಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT