ಶುಕ್ರವಾರ, ಸೆಪ್ಟೆಂಬರ್ 17, 2021
25 °C
ಸುಮಲತಾ ಜತೆಗೆ ಕಾಂಗ್ರೆಸ್‌ ಮುಖಂಡರ ಔತಣ

ಊಟ ಮಾಡಿದರೆ ತಪ್ಪೇನು: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು/ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಜತೆಗೆ ಕೆಲವು ಕಾಂಗ್ರೆಸ್‌ ನಾಯಕರು ಔತಣಕೂಟ ನಡೆಸಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ಊಟ ಮಾಡಿದರೆ ತಪ್ಪೇನು’ ಎಂದು ‍ಪ್ರಶ್ನಿಸಿದ್ದಾರೆ.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಭೆ ಮಾಡಿದರೆ ಅಂದಾಕ್ಷಣ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಕೊಟ್ಟಿದ್ದಾರೆ ಅಂತ ಅಲ್ಲ’ ಎಂದರು.

‘ಸಭೆ ಯಾಕೆ ಮಾಡಿದರು ಎಂಬುದು ಗೊತ್ತಿಲ್ಲ. ಅದರ ಬಗ್ಗೆ ಮಂಡ್ಯ ಮುಖಂಡರಲ್ಲಿ ವಿಚಾರಿಸುತ್ತೇನೆ. ಚಲುವರಾಯಸ್ವಾಮಿ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಅವರ ಜತೆಗೆ ಮಾತನಾಡುತ್ತೇನೆ. ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಿಲ್ಲ, ಸುಮ್ಮನೆ ಇದ್ದೇವು ಎಂದು ಹೇಳಿದ್ದರು. ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂಬ ಅಂತೆ‌ಕಂತೆ ಬಗ್ಗೆ ಮಾತನಾಡುವುದಿಲ್ಲ’ ಎಂದರು.

‘ಚಲುವರಾಯಸ್ವಾಮಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಇದರಿಂದ ಪಕ್ಷ ಹಾಗೂ ಸರ್ಕಾರಕ್ಕೆ ಯಾವುದೇ ಮುಜುಗರ ಇಲ್ಲ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ‘ಯಾವ ರೀತಿಯಲ್ಲಿ ವಿಚಾರಣೆ ಮಾಡಬೇಕು ಎಂಬುದನ್ನು ಆಮೇಲೆ ನೋಡೊಣ.‌ ಅವರು ಯಾವಾಗ ಸೇರಿದ್ದರು ಹಾಗೂ ಏಕೆ ಸೇರಿದ್ದರು ಎಂಬುದು ಗೊತ್ತಿಲ್ಲ. ಮೊದಲು ತಿಳಿದುಕೊಂಡು ಆಮೇಲೆ ಹೇಳುತ್ತೇನೆ’ ಎಂದರು. ‘ವಿಡಿಯೋ ವಿಚಾರ ದೊಡ್ಡ ವಿವಾದ ಅಲ್ಲ. ಅದರ ತನಿಖೆ ಮಾಡುವ ಅಗತ್ಯವಿಲ್ಲ. ಕುಳಿತು ಊಟ ಮಾಡಿದ್ದು ತನಿಖೆಗೆ ವಸ್ತು ಅಲ್ಲ. ಕೆಲವು ಕ್ಷೇತ್ರಗಳಲ್ಲಿ ಶೇ 100ಕ್ಕೆ 100ರಷ್ಟು ಮೈತ್ರಿ ಆಗಿಲ್ಲ. ಕೆಲವು ಕಡೆ ಇನ್ನು ಹೆಚ್ಚಿನ ಅನುಕೂಲ ಪಡೆಯಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ನಾವೇನು ಭಯೋತ್ಪಾದಕರೇ: ಚಲುವರಾಯಸ್ವಾಮಿ

‘ನಮ್ಮ ಹಿಂದೆ ಗುಪ್ತಚರ ಸಿಬ್ಬಂದಿಯನ್ನು ಬಿಡಲಾಗಿದೆ. ನಾವೇನೂ ಭಯೋತ್ಪಾದಕರೇ’ ಎಂದು ಕಾಂಗ್ರೆಸ್‌ ಮುಖಂಡ ಚಲುವರಾಯಸ್ವಾಮಿ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಲಾಗದ ಸ್ಥಿತಿ ಇತ್ತು.‌ ಹಾಗಾಗಿ ನಾವು ಪ್ರಚಾರ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಚುನಾವಣೆಯ ವೇಳೆ ಸುಮಲತಾ ಅವರಿಂದ ಅಂತರ ಕಾಯ್ದುಕೊಳ್ಳಲು ನಮ್ಮ‌ ನಾಯಕರು ಹೇಳಿದ್ದರು. ನಾವು ಯಾರ ಪರವೂ ಪ್ರಚಾರ ಮಾಡದೆ ದೂರ ಉಳಿದೆವು.‌ ಚುನಾವಣೆ ನಂತರ ಅಂತರ ಕಾಯ್ದುಕೊಳ್ಳುವುದು ಕಷ್ಟ’ ಎಂದು ಸಮಜಾಯಿಷಿ ನೀಡಿದರು.

‘ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿ ಕಣಕ್ಕೆ ಇಳಿಸುವ ಮುನ್ನ ಎಲ್ಲರ ಜೊತೆಗೂ ಚರ್ಚೆ ಮಾಡಿದ್ದರು. ತುಮಕೂರಿನಲ್ಲಿ ಎಚ್‌.ಡಿ.ದೇವೇಗೌಡರು ಸ್ಪರ್ಧಿಸುವ ಮುನ್ನ ಎಲ್ಲರ ಜೊತೆ ಮಾತನಾಡಿದ್ದರು. ಆದರೆ, ಮಂಡ್ಯದಲ್ಲಿ ಅಭ್ಯರ್ಥಿ ಹಾಕುವ ಮುನ್ನ ಯಾರ ಬಳಿಯೂ ಮಾತನಾಡಲಿಲ್ಲ. ನಮ್ಮನ್ನೂ ವೇದಿಕೆಗೆ ಕರೆದು ಅಭ್ಯರ್ಥಿ ಘೋಷಣೆ ಮಾಡಬೇಕಿತ್ತು. ಅದು ಬಿಟ್ಟು ಬೆನ್ನಿಗೆ ಚೂರಿ ಹಾಕಿದವರು ಎಂಬ ಹೇಳಿಕೆ ನೀಡಿದರು. ಇಷ್ಟೆಲ್ಲ ಹೇಳಿದ ಮೇಲೆ ನಾವು ಅವರ ಪರ ಪ್ರಚಾರ ಮಾಡಲು ಸಾಧ್ಯವೇ’ ಎಂದು ಅವರು ಕೇಳಿದರು.

‘ಮಂಡ್ಯದ ಫಲಿತಾಂಶವನ್ನು ಅಷ್ಟು ಸುಲಭವಾಗಿ ಅಂದಾಜು ಮಾಡಲು ಸಾಧ್ಯವಿಲ್ಲ. ಬಹಳ ಜನ ಅಧಿಕಾರಿಗಳ ಪತ್ನಿಯರು ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಎಷ್ಟೋ ಕಡೆ ಅಧಿಕಾರಿಗಳೇ ಹಣ ಹಂಚಲು ನಿಂತಿದ್ದರು. ಮುಖ್ಯಮಂತ್ರಿ ಅಧಿಕಾರ ಬಳಸಿಕೊಂಡು ಇದನ್ನೆಲ್ಲಾ ಮಾಡಿದ್ದಾರೆ.‌ ನೋಡಿಯೂ ಕೂಡಾ ನಾವು ಸುಮ್ಮನೆ ಇರಬೇಕಾದ ಪರಿಸ್ಥಿತಿ ಇತ್ತು.‌ ಚುನಾವಣೆ ಮುಗಿದ ನಂತರ ಸುಮಲತಾ ಜೊತೆ ಸಭೆ ಮಾಡಿದರೆ ತಪ್ಪೇನು’ ಎಂದು ಅವರು ಪ್ರಶ್ನಿಸಿದರು.

ಶಿಖಂಡಿ ರಾಜಕಾರಣ: ಶಾಸಕ ಸುರೇಶ್‌ಗೌಡ

‘ಕೆಲವರು ಹೆಂಗಸರನ್ನು ಮುಂದಿಟ್ಟುಕೊಂಡು ಶಿಖಂಡಿ ರಾಜಕಾರಣ ಮಾಡಿದ್ದಾರೆ. ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ವಿರುದ್ಧ ಕೆಲಸ ಮಾಡಿದ್ದಾರೆ’ ಎಂದು ನಾಗಮಂಗಲದಲ್ಲಿ ಶಾಸಕ ಸುರೇಶ್‌ಗೌಡ ವಾಗ್ದಾಳಿ ನಡೆಸಿದರು.

‘ಮೂಲ ಕಾಂಗ್ರೆಸ್ಸಿಗರು ಮೈತ್ರಿಧರ್ಮ ಪಾಲನೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ಗೆ ವಲಸೆ ಹೋದ ಮುಖಂಡರು ಆ ಪಕ್ಷದ ಸಿದ್ಧಾಂತ ಅರಿಯದೇ ಬ್ಲಾಕ್‌ಮೇಲ್‌ ರಾಜಕಾರಣ ಮಾಡಿದ್ದಾರೆ. ಇವರು ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮ ಮಾಡಿ ಬಿಜೆಪಿ ಹುಟ್ಟಿಗೆ ಕಾರಣಕರ್ತರಾಗುತ್ತಿದ್ದಾರೆ’ ಎಂದರು.

ಚಲುವರಾಯಸ್ವಾಮಿ– ಸುಮಲತಾ ಭೇಟಿ ವಿಡಿಯೊ ಕುರಿತು, ‘ಅವನ್ಯಾವ ದೊಡ್ಡ ವ್ಯಕ್ತಿ ಎಂದು ಆತನ ವಿರುದ್ಧ ಗೂಢಾಚಾರಿಕೆ ಮಾಡಲು ಹೋಗುತ್ತಾರೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು