ಮಂಗಳವಾರ, ಸೆಪ್ಟೆಂಬರ್ 22, 2020
21 °C
ಮಾಜಿ ಮೇಯರ್‌ ವೆಂಕಟೇಶ ಮೂರ್ತಿಯವರಿಂದ ಅಕ್ರಮ: ಆರೋಪ

ಸಿಎ ನಿವೇಶನದಲ್ಲಿ ಮಾಜಿ ಮೇಯರ್‌ ವೆಂಕಟೇಶಮೂರ್ತಿ ವಾಣಿಜ್ಯ ಮಳಿಗೆ ನಿರ್ಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಾಗರಿಕ ಸೌಲಭ್ಯ (ಸಿಎ) ಅಥವಾ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾಗಿರುವ ನಿವೇಶನಗಳಲ್ಲಿ ಮಾಜಿ ಮೇಯರ್‌ ಆಗಿರುವ ಕಾಂಗ್ರೆಸ್‌ ಮುಖಂಡ ಡಿ.ವೆಂಕಟೇಶಮೂರ್ತಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 

ಪದ್ಮನಾಭನಗರದ 18ನೇ ಮುಖ್ಯರಸ್ತೆಯಲ್ಲಿರುವ (ರಾಯಲ್‌ ಮಾರ್ಟ್‌ ಮುಂಭಾಗ) ಸಿಎ ನಿವೇಶನ ಸಂಖ್ಯೆ 8ರಲ್ಲಿ ವೆಂಕಟೇಶ ಮೂರ್ತಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಆದರೆ, ಈ ನಿವೇಶನ ಚಿಕ್ಕಮಕ್ಕಳ ಆಸ್ಪತ್ರೆಗೆ ಮೀಸಲಾಗಿದೆ. ಈ ನಿವೇಶನದಲ್ಲಿ ಇದ್ದ ಕಟ್ಟಡದ ಮುಂದೆ ಮೊದಲು ಚಿಕ್ಕಮಕ್ಕಳ ಆಸ್ಪತ್ರೆ ಎಂಬ ಫಲಕವಿತ್ತು. ಈಗ ಆ ಫಲಕ ಕಿತ್ತು ಹಾಕಲಾಗಿದೆ. ಒಂದು ತಿಂಗಳಿಂದ ವಾಣಿಜ್ಯ ಮಳಿಗೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಬಿಡಿಎ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. 

‘ಐದಾರು ಮಳಿಗೆಗಳನ್ನು ನಿರ್ಮಿಸಿ, ಅದನ್ನು ಬಾಡಿಗೆಗೆ ನೀಡುವ ಮೂಲಕ ಲಾಭ ಮಾಡಿಕೊಳ್ಳುವುದು ವೆಂಕಟೇಶ ಮೂರ್ತಿ ಅವರ ಉದ್ದೇಶ’ ಎಂದೂ ಸ್ಥಳೀಯರೊಬ್ಬರು ದೂರಿದರು.

ಶೇ 30ರಷ್ಟು ಮಾತ್ರ ವಾಣಿಜ್ಯ ಬಳಕೆ 

‘ಸಿಎ–8 ನಿವೇಶನ ಮಕ್ಕಳ ಆಸ್ಪತ್ರೆಗೆ ಮಂಜೂರಾಗಿರುವುದು ನಿಜ. ಅಲ್ಲಿ ಮಕ್ಕಳ ಆಸ್ಪತ್ರೆಯನ್ನೇ ನಿರ್ಮಿಸಲಾಗುತ್ತಿದೆ. ಆದರೆ, ಈ ಜಾಗದಲ್ಲಿ ಶೇ 30ರಷ್ಟು ಭಾಗವನ್ನು ಮಾತ್ರ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದೇವೆ’ ಎಂದು ವೆಂಕಟೇಶಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನಾನು ಮೇಯರ್‌ ಆಗಿದ್ದವನು. ಅಲ್ಲದೆ, ಈ ಭಾಗದ ಪಾಲಿಕೆ ಸದಸ್ಯನಾಗಿದ್ದವನು. ಜನರ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಇಲ್ಲಿ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದು ಮಳಿಗೆಯಲ್ಲಿ ಚಿಕ್ಕಮಕ್ಕಳ ಕ್ಲಿನಿಕ್‌, ಮತ್ತೊಂದರಲ್ಲಿ ಔಷಧ ಮಳಿಗೆ ಮಾಡಲಾಗುತ್ತದೆ. ಇದನ್ನು ನಡೆಸಲು ಆದಾಯ ಬರಲಿ ಎಂಬ ಕಾರಣಕ್ಕೆ ಜ್ಯೂಸ್–ತರಕಾರಿ ಹಾಗೂ ಸಿದ್ಧ ಆಹಾರ ಮಳಿಗೆ ನಿರ್ಮಿಸಲಾಗುತ್ತಿದೆ’ ಎಂದು ಪ್ರತಿಪಾದಿಸಿದರು.

‘ನನ್ನ ಸೊಸೆ ವೈದ್ಯೆಯಾಗಿದ್ದು, ಅವರೇ ಕ್ಲಿನಿಕ್‌ ನಡೆಸುತ್ತಾರೆ’ ಎಂದೂ ಅವರು ತಿಳಿಸಿದರು. 

‘ಈ ನಿವೇಶನದಲ್ಲಿದ್ದ ಚಿಕ್ಕಮಕ್ಕಳ ಆಸ್ಪತ್ರೆ ಕಟ್ಟಡ ಶಿಥಿಲಗೊಂಡಿದ್ದರಿಂದ ಅದನ್ನು ದುರಸ್ತಿಗೊಳಿಸಲು ನ್ಯಾಯಾಲಯ ಅನುಮತಿ ನೀಡಿದೆ. ಹೀಗಾಗಿ, ಅದರ ದುರಸ್ತಿ ಕಾರ್ಯದೊಂದಿಗೆ ಹೊಸ ಮಳಿಗೆಗಳ ನಿರ್ಮಾಣ ಕಾರ್ಯವೂ ನಡೆಯುತ್ತಿದೆ’ ಎಂದು ಅವರು ಹೇಳಿದರು.

‘ಮುಂದಿನ ಚುನಾವಣೆಯಲ್ಲಿ ಪದ್ಮನಾಭನಗರ ಕ್ಷೇತ್ರದಲ್ಲಿ ನಾನು ಕಾಂಗ್ರೆಸ್‌ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಟಿಕೆಟ್‌ ತಪ್ಪಿಸಲು ನನ್ನ ವಿರುದ್ಧ ಇಂತಹ ಆರೋಪಗಳನ್ನು ಕೆಲವರು ಮಾಡುತ್ತಿದ್ದಾರೆ’ ಎಂದು ಹೇಳಿದರು.

ಸಿಎ–8 ನಿವೇಶನದಲ್ಲಿ ಕ್ಲಿನಿಕ್‌ ಮತ್ತು ಮಳಿಗೆ ನಿರ್ಮಿಸಲು ಅನುಮತಿ ಕೋರಿ ಬಿಬಿಎಂಪಿ ಆಯುಕ್ತರು ಮತ್ತು ಬಿಡಿಎಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಇನ್ನೂ ಅನುಮತಿ ಸಿಕ್ಕಿಲ್ಲ. 
- ಡಿ.ವೆಂಕಟೇಶ ಮೂರ್ತಿ, ಮಾಜಿ ಮೇಯರ್‌

ಪದ್ಮನಾಭನಗರದ ಸಿಎ ನಿವೇಶನಗಳ ಕಡತ ತರಿಸಿಕೊಂಡು ಪರಿಶೀಲಿಸುತ್ತಿದ್ದೇನೆ. ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

-ವಾಸಂತಿ ಅಮರ್‌, ಬಿಡಿಎ ಕಾರ್ಯದರ್ಶಿ

 

ಮನೆಯೂ ಸಿಎ ನಿವೇಶನದಲ್ಲಿ?

ಪದ್ಮನಾಭನಗರದಲ್ಲಿ 18ನೇ ಮುಖ್ಯರಸ್ತೆಯ 14ನೇ ಕ್ರಾಸ್‌ನಲ್ಲಿರುವ ವೆಂಕಟೇಶಮೂರ್ತಿಯವರ ನಿವಾಸವನ್ನು ಕೂಡ ಸಿಎ ನಿವೇಶನದಲ್ಲಿ ನಿರ್ಮಿಸಲಾಗಿದೆ ಎಂಬ ಆರೋಪವಿದೆ. ಆದರೆ, ಅದನ್ನು ಅವರು ನಿರಾಕರಿಸಿದ್ದಾರೆ.

‘ನಮ್ಮ ಮನೆ ಇರುವುದು ಸಿಎ ನಿವೇಶನದಲ್ಲಿ ಎಂದು ಕೆಲವರು ಕೇಸ್‌ ಹಾಕಿದ್ದರು. ಇದರಿಂದ ಬಿಡಿಎ ಅಧಿಕಾರಿಗಳು ಪ್ರಶ್ನಿಸುತ್ತಿದ್ದ ಕಾರಣಕ್ಕೆ ನಾನೇ ನ್ಯಾಯಾಲಯದ ಮೊರೆ ಹೋಗಿದ್ದೆ. ತೀರ್ಪು ನನ್ನ ಪರ ಬಂದಿದೆ’ ಎಂದು ಅವರು ಹೇಳಿದರು. 

‘ವಿಠ್ಠಲ ಸೊಸೈಟಿಯಿಂದ ಈ ನಿವೇಶನವನ್ನು ಖರೀದಿಸಿದ್ದೇನೆ’ ಎಂದು ಅವರು ಸ್ಪಷ್ಟಪಡಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು