ಉತ್ತರಕನ್ನಡ: ಆಮದು ಅಡಿಕೆ ನಿಯಂತ್ರಣಕ್ಕೆ ಬೇಕು ಬಿಗಿ ಕ್ರಮ

ಶುಕ್ರವಾರ, ಜೂಲೈ 19, 2019
29 °C
ಅಡಿಕೆಯ ಅಕ್ರಮ ನುಸುಳುವಿಕೆ ಇಂದು–ನಿನ್ನೆಯ ಸಮಸ್ಯೆಯಲ್ಲ

ಉತ್ತರಕನ್ನಡ: ಆಮದು ಅಡಿಕೆ ನಿಯಂತ್ರಣಕ್ಕೆ ಬೇಕು ಬಿಗಿ ಕ್ರಮ

Published:
Updated:
Prajavani

ಶಿರಸಿ: ತಲೆ ತಲಾಂತರಗಳಿಂದ ಅಡಿಕೆ ಬೆಳೆಯನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಬೆಳೆಗಾರರು ‘ಎಸ್‌ಎಎಫ್‌ಟಿಎ’ ಒಪ್ಪಂದ ಹಾಗೂ ಸಾರ್ಕ್ ಒಪ್ಪಂದದ ಹೊಡೆತಕ್ಕೆ ನಲುಗಿದ್ದಾರೆ. ಅಕ್ರಮವಾಗಿ ದೇಶಕ್ಕೆ ನುಸುಳುವ ಅಡಿಕೆಗೆ ನಿಯಂತ್ರಣ ಹೇರುವ ದಿಟ್ಟ ಕ್ರಮ ಕೇಂದ್ರ ಸರ್ಕಾರದಿಂದ ಆಗಬೇಕೆಂಬುದು ಅಡಿಕೆ ಬೆಳೆಗಾರರು, ಅಡಿಕೆ ವಹಿವಾಟು ಸಹಕಾರಿ ಸಂಸ್ಥೆಗಳ ಒಕ್ಕೊರಲ ಆಗ್ರಹವಾಗಿದೆ.

ಅಡಿಕೆಯ ಅಕ್ರಮ ನುಸುಳುವಿಕೆ ಇಂದು–ನಿನ್ನೆಯ ಸಮಸ್ಯೆಯಲ್ಲ. ಶಾಶ್ವತ ಪರಿಹಾರ ಕಾಣದ ಸಮಸ್ಯೆಯಿಂದಾಗಿ ಅಡಿಕೆ ಬೆಲೆಯಲ್ಲಿ ಆಗುವ ಹಾವು–ಏಣಿ ಆಟವೂ ಮುಂದುವರಿದಿದೆ. ಇದರಿಂದ ಬೇಸತ್ತಿರುವ ಬೆಳೆಗಾರರು, ಅದರಲ್ಲೂ ಸಣ್ಣ ಹಿಡುವಳಿದಾರರು, ತಮ್ಮ ಮಕ್ಕಳನ್ನು ಉದ್ಯೋಗಕ್ಕಾಗಿ ಮಹಾನಗರಗಳಿಗೆ ಕಳುಹಿಸುತ್ತಿದ್ದಾರೆ. ಪರಿಣಾಮವಾಗಿ ಅಡಿಕೆ ಬೆಳೆಯುವ ಪ್ರದೇಶದ ಹಳ್ಳಿಗಳು ಕಳೆದ ಒಂದೆರಡು ದಶಕಗಳಲ್ಲಿ ವೃದ್ಧಾಶ್ರಮಗಳಾಗಿವೆ.

ಎಸ್‌ಎಎಫ್‌ಟಿಎ (south Asian Free Trade Area) ಹಾಗೂ ಸಾರ್ಕ್‌ ಒಪ್ಪಂದಗಳ ಅಡಿಯಲ್ಲಿ ಅಕ್ರಮ ಅಡಿಕೆಯು ಅವ್ಯಾಹತವಾಗಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಿಂದ ಭಾರತಕ್ಕೆ ಬರುತ್ತದೆ. ಈ ಬಗ್ಗೆ ಅಡಿಕೆ ವಹಿವಾಟು ನಡೆಸುವ ಸಂಸ್ಥೆಗಳು ಅನೇಕ ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ. ಮನವಿ ಸಲ್ಲಿಸಿದ ಒಂದೆರಡು ತಿಂಗಳು ಗಡಿಯಲ್ಲಿ ಬಿಗಿ ಕ್ರಮವಾಗುತ್ತದೆ. ನಂತರ ಮತ್ತೆ ಸಮಸ್ಯೆ ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ ಶಿರಸಿ ತೋಟಗಾರ್ಸ್‌ ಕೋ ಆಪರೇಟಿವ್ ಸೇಲ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ.

ಒಪ್ಪಂದ ದುರ್ಬಳಕೆ ಮಾಡಿಕೊಳ್ಳುತ್ತಿರುವುದರ ಕುರಿತು ಕೇಂದ್ರ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ಸಚಿವಾಲಯವು ಅಕ್ರಮ ಆಮದಿಗೆ ತಡೆ ಹಾಕಬೇಕು. ಅಡಿಕೆ ಮತ್ತು ಕಾಳುಮೆಣಸನ್ನು ನೆಗೆಟಿವ್ ಲಿಸ್ಟ್‌ಗೆ ಸೇರ್ಪಡೆ ಮಾಡಬೇಕು ಎಂಬುದು ಅವರ ಆಗ್ರಹ.

ಈ ಬಾರಿ ಉತ್ತರ ಕನ್ನಡದಲ್ಲಿ ಅಡಿಕೆ ಬೆಳೆ ಕಡಿಮೆಯಿದೆ. ಈ ಕಾರಣಕ್ಕೆ ಬೆಲೆ ಏರಿಕೆಯಾಗಬಹುದೆಂಬ ನಿರೀಕ್ಷೆಯಿಲ್ಲ. 2005ರಿಂದ ಈಚೆಗೆ ಅಡಿಕೆ ಬೆಳೆಯುವ ಪ್ರದೇಶ ವ್ಯಾಪಕವಾಗಿ ಹೆಚ್ಚಿದೆ. 15 ವರ್ಷಗಳ ಹಿಂದೆ ದೇಶದಲ್ಲಿ ಅಡಿಕೆ ಉತ್ಪಾದನೆ 34 ಲಕ್ಷ ಕ್ವಿಂಟಲ್ ಇದ್ದರೆ, ಈಗ 90 ಲಕ್ಷ ಕ್ವಿಂಟಲ್ ಉತ್ಪಾದನೆಯಾಗುತ್ತಿದೆ. ಆಗ ಕೆಂಪಡಿಕೆ ಕ್ವಿಂಟಲ್‌ವೊಂದಕ್ಕೆ ₹ 7500 ಇದ್ದರೆ, ಈಗ ₹ 33ಸಾವಿರದಷ್ಟಿದೆ. ಉತ್ಪಾದನೆ ಹೆಚ್ಚಿದ್ದರೂ, ಪಾನ್ ಮಸಾಲಾ ಬೇಡಿಕೆ ಅಧಿಕವಾಗಿರುವ ಕಾರಣ ಅಡಿಕೆ ಬಳಕೆ ಕೂಡ ಹೆಚ್ಚಾಗುತ್ತಿದೆ. ಅಕ್ರಮ ಅಡಿಕೆ ಬರುವುದು ಬಂದಾದರೆ, ದೇಸೀಯ ಅಡಿಕೆಗೆ ಹೆಚ್ಚಿನ ದರ ಸಿಗುವ ಜೊತೆಗೆ, ಬೆಲೆ ಸ್ಥಿರತೆ ಬರುತ್ತದೆ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸೆಕ್ಷನ್ 80P(2)(ಡಿ)ಅಡಿಯಲ್ಲಿ ಸಹಕಾರಿ ಬ್ಯಾಂಕ್‌ಗಳಲ್ಲಿ ಇಡುವ ಠೇವಣಿ ಮೇಲಿನ ತೆರಿಗೆಗೆ ವಿನಾಯಿತಿ ಇತ್ತು. ಆದರೆ, ಆದಾಯ ತೆರಿಗೆ ಇಲಾಖೆ ಇದಕ್ಕೆ ತೆರಿಗೆ ವಿಧಿಸುತ್ತಿದೆ. ಸಹಕಾರಿ ಸಂಘಗಳಿಗೆ ವಿನಾಯಿತಿ ನೀಡುವ ಅಥವಾ ತೆರಿಗೆ ಪಾವತಿಸುವುದಿದ್ದಲ್ಲಿ ಅದರ ಬಗ್ಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದರು. ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಿ, ಗಮನಸೆಳೆಯಲಾಗಿದೆ ಎಂದರು.

‘ಪಾರಂಪರಿಕ ಅಡಿಕೆ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆಯೇ ಅಧಿಕವಾಗಿದೆ. ಇವರಿಗೆ ಬೆಳೆ ತೆಗೆಯಲು ಬಂಡವಾಳ ಹೆಚ್ಚು, ಆದಾಯ ಕಡಿಮೆಯಾಗುತ್ತಿದೆ. ಅಕ್ರಮ ಆಮದು ಅಡಿಕೆ ನಿಷೇಧಿಸಬೇಕು. ಸಾರ್ಕ್ ದೇಶಗಳಿಂದ ಬರುವ ಅಡಿಕೆಯ ಆಮದು ಸುಂಕವನ್ನು ಶೇ 160ರಿಂದ ಶೇ 200ಕ್ಕೆ ಹೆಚ್ಚಿಸಬೇಕು. ಕೆಂಪಡಿಕೆ ದರ ಕ್ವಿಂಟಾಲ್‌ವೊಂದಕ್ಕೆ ₹ 40ಸಾವಿರ, ಚಾಲಿ ಅಡಿಕೆ ₹ 30ಸಾವಿರ ಇದ್ದರೆ ಪಾರಂಪರಿಕ ಬೆಳೆಗಾರರಿಗೆ ರಕ್ಷಣೆ ಸಾಧ್ಯ’ ಎನ್ನುತ್ತಾರೆ ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್‌.ಎಂ.ಹೆಗಡೆ ಬಾಳೇಸರ.

ಪ್ರತಿ ವರ್ಷ ಕೃಷಿ ಭೂಮಿ ಅಡಿಕೆ ಬೆಳೆಯುವ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ಸಾಂಪ್ರದಾಯಿಕ ಬೆಳೆಯಿಲ್ಲದ ಕ್ಷೇತ್ರಗಳಲ್ಲೂ ಅಡಿಕೆ ತೋಟಗಳು ಮೇಲೇಳುತ್ತಿವೆ. ಇದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ನಿಯಮ ಜಾರಿಗೆ ತರಬೇಕು. ಅಡಿಕೆ ಮೇಲಿನ ಜಿಎಸ್‌ಟಿಯನ್ನು ಶೇ 5ರಿಂದ ಮೊದಲಿನ ವ್ಯಾಟ್‌ನಂತೆ ಶೇ 2ಕ್ಕೆ ಇಳಿಸಬೇಕು ಎಂದು ಅವರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !