ಗುರುವಾರ , ಫೆಬ್ರವರಿ 25, 2021
29 °C

ನಕಲಿ ನೋಟು ಚಲಾವಣೆ; ಆರೋಪಿಗೆ ಜಾಮೀನು ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಾಕಿಸ್ತಾನದಿಂದ ಭಾರತದೊಳಕ್ಕೆ ₹ 2 ಸಾವಿರ ಮುಖಬೆಲೆಯ ನಕಲಿ ನೋಟುಗಳನ್ನು ಸಾಗಿಸಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಚಲಾವಣೆ ಮಾಡುತ್ತಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಪ್ರಮುಖ ಆರೋಪಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿದೆ.

ಈ ಕುರಿತಂತೆ 73 ವರ್ಷದ ಅರೋಪಿ ಮೊಹಮದ್‌ ಸಜ್ಜದ್‌ ಅಲಿ ಅಲಿಯಾಸ್‌ ಚಾಚಾ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ತಿರಸ್ಕರಿಸಿದೆ.

‘ಈ ಪ್ರಕರಣ ಅತ್ಯಂತ ಗಂಭೀರ ಸ್ವರೂಪದ್ದು, ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಇದರ ತನಿಖೆ ನಡೆಸುತ್ತಿದೆ. ಹೀಗಾಗಿ ಆರೋಪಿ ತಾನು ಗಂಭೀರ ಸ್ವರೂಪದ ಅಂಗವೈಕಲ್ಯದಿಂದ ಬಳಲುತ್ತಿದ್ದೇನೆ. ಆದ್ದರಿಂದ ಜಾಮೀನು ನೀಡಬೇಕು ಎಂಬ ಅಂಶವನ್ನು ಪರಿಗಣಿಸಲು ಆಗದು’ ಎಂದು ನ್ಯಾಯಪೀಠ ಅಭಿಪ್ರಾಯ
ಪಟ್ಟಿದೆ.

ವಿಚಾರಣೆ ವೇಳೆ ಎನ್ಐಎ ಪರ ವಕೀಲ ಪಿ.ಪ್ರಸನ್ನಕುಮಾರ್ ಅವರು, ‘ದೇಶದಲ್ಲಿನ ನಕಲಿ ನೋಟುಗಳ ಚಲಾವಣೆ ಪತ್ತೆಗೆ ಎನ್‌ಐಎ ಮುಂಬೈ ವಿಭಾಗ  ನಡೆಸಿದೆ. ಈ ತನಿಖೆಯ ವೇಳೆ ಆರೋಪಿಯನ್ನು ಬೆಂಗಳೂರಿನಲ್ಲಿ 2018ರ ಆಗಸ್ಟ್‌ 8ರಂದು ಬಂಧಿಸಲಾಗಿದೆ. ಆತನಿಂದ ₹ 2 ಸಾವಿರ ಮುಖಬೆಲೆಯ ₹ 4 ಲಕ್ಷ ಮೊತ್ತದ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

‘ಈತ 2013ರಿಂದ 2018ರ ಅವಧಿಯಲ್ಲಿ ಬೆಂಗಳೂರಿಗೆ 12ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದಾನೆ ಮತ್ತು ದೇಶದಾದ್ಯಂತ ಹರಡಿರುವ ನಕಲಿ ನೋಟುಗಳ ಚಲಾವಣೆಯ ತಂಡದ ಪ್ರಮುಖ ಸದಸ್ಯನಾಗಿದ್ದಾನೆ. ಆರೋಪಿಗಳ ಜಾಲವು ಪರಸ್ಪರ ನಡೆಸಿರುವ ಮೊಬೈಲ್‌ ಫೋನುಗಳ ಸಂಭಾಷಣೆ, ನಕಲಿ ನೋಟುಗಳನ್ನು ಅಸಲಿ ನೋಟುಗಳಿಗೆ ಬದಲಾಯಿಸಿ ಮೊತ್ತವನ್ನು ಬ್ಯಾಂಕ್‌ ಖಾತೆಗಳಿಗೆ ಭರ್ತಿ ಮಾಡಿದ ದಾಖಲೆಗಳು ತನಿಖಾಧಿಕಾರಿ ಬಳಿ ಇವೆ. ಇದು ದೇಶದ ಅರ್ಥ ವ್ಯವಸ್ಥೆಗೆ ಧಕ್ಕೆ ತರುವ ಕೃತ್ಯವಾಗಿದ್ದು ಜಾಮೀನು ನೀಡಬಾರದು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಈ ಮೊದಲು ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಜಾಮೀನು ತಿರಸ್ಕರಿಸಿದ್ದ ಆದೇಶವನ್ನು ಎತ್ತಿ ಹಿಡಿದಿದೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 120 ಬಿ ಮತ್ತು 489 ಬಿ ಹಾಗೂ 489ಸಿ ಅನುಸಾರ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು, ಬೆಳಗಾವಿ, ವಿಜಯಪುರದಲ್ಲಿ ಹರಡಿರುವ ಜಾಲ...

‘ಪಾಕಿಸ್ತಾನದಲ್ಲಿ ನಕಲಿ ನೋಟುಗಳ ಮುದ್ರಣ ಮಾಡಲಾಗುತ್ತದೆ. ಅವುಗಳನ್ನು ಬಾಂಗ್ಲಾಕ್ಕೆ ರವಾನಿಸಿ ಅಲ್ಲಿಂದ ಪಶ್ಚಿಮ ಬಂಗಾಲದ ಮಾಲ್ಡಾ ಮತ್ತು ಫರಕ್ಕಾ ಮೂಲಕ ಭಾರತದೊಳಕ್ಕೆ ತಂದು ದೇಶದ ವಿವಿಧೆಡೆ ಸರಬರಾಜು ಮಾಡಲಾಗುತ್ತಿದೆ’ ಎಂಬುದು ಎನ್‌ಐಎ ಆರೋಪ.

‘ರಾಜ್ಯದಲ್ಲಿ ಬೆಂಗಳೂರು, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನಕಲಿ ನೋಟುಗಳ ಚಲಾವಣೆಯ ವ್ಯವಸ್ಥಿತ ಜಾಲವಿದೆ. ಸಜ್ಜದ್‌ ಈತನಕ ರಾಜ್ಯದಲ್ಲಿ ಅಂದಾಜು ₹ 22 ಲಕ್ಷ ಮೊತ್ತದ ನಕಲಿ ನೋಟುಗಳನ್ನು ಚಲಾವಣೆ ಮಾಡಿರುವ ಆರೋಪವಿದೆ’ ಎನ್ನುತ್ತಾರೆ ವಕೀಲ ಪಿ.ಪ್ರಸನ್ನಕುಮಾರ್.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.