ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರೈತರ ಕಂಗೆಡಿಸಿದ ಕಳಪೆ ಬೀಜ

500 ಕ್ವಿಂಟಲ್‌ ಸೋಯಾಅವರೆ ವಾಪಸ್
Last Updated 7 ಜೂನ್ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಮುಂಗಾರು ಹಂಗಾಮು ಆರಂಭದಲ್ಲೇ ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜಗಳ ಹಾವಳಿ ಕಾಣಿಸಿಕೊಂಡಿರುವುದು, ಆಶಾದಾಯಕ ಇಳುವರಿಯ ನಿರೀಕ್ಷೆಯಲ್ಲಿದ್ದ ರೈತರ ನಿದ್ದೆಗೆಡಿಸಿದೆ.

ಹಂಗಾಮಿನ ಪ್ರಮುಖ ಬೆಳೆಯಾದ ಸೋಯಾಅವರೆ ಬೀಜಗಳ ಗುಣಮಟ್ಟ ಸರಿ ಇಲ್ಲ ಎನ್ನುವ ಆರೋಪ ಕೇಳಿಬಂದಿದೆ. ಬೈಲಹೊಂಗಲ, ಹುಕ್ಕೇರಿ, ಬೆಳಗಾವಿ, ಚಿಕ್ಕೋಡಿ ತಾಲ್ಲೂಕುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಅವರೆ ಬೆಳೆಯಲಾಗುತ್ತದೆ. ಹಂಗಾಮಿನಲ್ಲಿ ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರ, ಪಿಕೆಪಿಎಸ್‌ಗಳ ಮೂಲಕ ರಿಯಾಯಿತಿ ದರದಲ್ಲಿ 38ಸಾವಿರ ಕ್ವಿಂಟಲ್‌ ಸೋಯಾಅವರೆ ಬೀಜ ವಿತರಿಸುವ ಗುರಿ ಇದೆ.

ಇದರಲ್ಲಿ ಶೇ 50ಕ್ಕಿಂತಲೂ ಹೆಚ್ಚಿನ ಪ್ರದೇಶಗಳಲ್ಲಿ ವಿತರಣೆ ನಡೆದಿದೆ. ಅಲ್ಲಲ್ಲಿ ಬಿತ್ತನೆ ಕಾರ್ಯವಾಗಿದೆ. ಆದರೆ, ಮೊಳಕೆ ಪ್ರಮಾಣ ಕಡಿಮೆ ಆಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಹುಕ್ಕೇರಿಯಲ್ಲಿ ರೈತರು ಕೃಷಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರಿಂದ ದೂರು ಬಂದಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಲಾಖೆ ನಿಗದಿಪಡಿಸಿದ ಕೇಂದ್ರಗಳಿಂದ ಖರೀದಿಸಿದ ಬೀಜಗಳಲ್ಲೇ ಲೋಪ ಕಂಡುಬಂದಿರುವುದು ಅಚ್ಚರಿ ಹಾಗೂ ಕೃಷಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೋದ ವರ್ಷ ನೆರೆ ಹಾಗೂ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದ್ದ ರೈತರು ಈ ವರ್ಷ ಕೋವಿಡ್–19 ಲಾಕ್‌ಡೌನ್‌ ಕಾರಣದಿಂದ ಉತ್ಪನ್ನಗಳು ಮಾರಾಟವಾಗದೆ ಅಥವಾ ಸರಿಯಾದ ಬೆಲೆ ಸಿಗದೆ ಕಂಗಾಲಾಗಿದ್ದರು. ಈಗ, ಕಳಪೆ ಬಿತ್ತನೆಬೀಜದಿಂದಾಗಿ ಮತ್ತೆ ಆರ್ಥಿಕ ಮುಗ್ಗಟ್ಟಿನ ಸುಳಿಗೆ ಸಿಲುಕುವ ಸಾಧ್ಯತೆ ಇದೆ.

ಸ್ಪಂದನೆ ಸಿಗದಿದ್ದಲ್ಲಿ:

‘ಬೈಲಹೊಂಗಲ ತಾಲೂಕಿನ ತಿಗಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೃಷಿ ಇಲಾಖೆಯಿಂದ ಖರೀದಿಸಿದ ವಿವಿಧ ಕಂಪನಿಗಳ ಸೋಯಾಅವರೆ ಬಿತ್ತನೆಬೀಜಗಳು ಕಳಪೆ ಆಗಿರುವುದು ಕಂಡುಬಂದಿದೆ. ತಿಗಡಿ ಪಿಕೆಪಿಎಸ್‌ನಿಂದ ವಿತರಣೆಯನ್ನು ತಡೆಹಿಡಿದಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸ್ಪಂದನೆ ಸಿಗದಿದ್ದಲ್ಲಿ ಪ್ರತಿಭಟಿಸಲಾಗುವುದು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ರೈತ ಸಂಘಟನೆ ಅಧ್ಯಕ್ಷ ಸಿದಗೌಡ ಮೋದಗಿ ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಂಟಿ ಕೃಷಿ ನಿರ್ದೇಶಕ ಜಿಲಾನಿ ಮೊಕಾಶಿ, ‘15–20 ಕಡೆಗಳ ರೈತರಿಂದ ದೂರುಗಳು ಬಂದಿದ್ದು, ಕ್ಷೇತ್ರಗಳಲ್ಲಿ ಪರಿಶೀಲಿಸುತ್ತಿದ್ದೇವೆ. ಬೀಜಗಳು ಕಳಪೆ ಎಂದು ಈಗಲೇ ಹೇಳಲಾಗುವುದಿಲ್ಲ. ಮಣ್ಣಿನಲ್ಲಿ ಸಮರ್ಪಕವಾಗಿ ತೇವಾಂಶವಿಲ್ಲದೆ (ಹದ) ಬಿತ್ತಿರುವುದು ಅಥವಾ ಬಿತ್ತಿದ ನಂತರ ನೀರುಣಿಸಿರುವುದರಿಂದ ಮೊಳಕೆ ಪ್ರಮಾಣ ಕಡಿಮೆ ಆಗಿರಬಹುದು. ಕಳೆದ ವರ್ಷ ನೆರೆ ಹಾಗೂ ಅತಿವೃಷ್ಟಿ ಉಂಟಾಗಿದ್ದ ಪರಿಣಾಮ ಈ ಹಂಗಾಮಿನಲ್ಲಿ ಸೋಯಾಅವರೆ ಗರಿಷ್ಠ ಮೊಳಕೆ ‍ಪ್ರಮಾಣವನ್ನು ಸರಾಸರಿ ಶೇ 65ರಷ್ಟು ನಿಗದಿಪಡಿಸಲಾಗಿದೆ. ಹೀಗಾಗಿ, ಎಕರೆಗೆ ಕಡ್ಡಾಯವಾಗಿ ದಟ್ಟವಾಗಿ (30 ಕೆ.ಜಿ.) ಬಿತ್ತಬೇಕು’ ಎಂದು ತಿಳಿಸಿದರು.

‘ಎಲ್ಲೆಲ್ಲಿ ತೊಂದರೆ ಕಾಣಿಸಿಕೊಂಡಿದೆಯೋ ಅಲ್ಲಿ ಸೋಯಾಅವರೆ ಬೀಜಗಳ ವಿತರಣೆಗೆ ತಡೆ ನೀಡಿದ್ದೇವೆ. ಸದ್ಯಕ್ಕೆ 500 ಕ್ವಿಂಟಲ್‌ ಬೀಜವನ್ನು ವಾಪಸ್ ಕಳುಹಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT