ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಯಲು ಸಿದ್ಧ, ಕಾರು ಹತ್ತಿಸಿ ಎಂದ ರೈತರು

ಸಾಲಮನ್ನಾ ಭರವಸೆ ಈಡೇರಿಸದ ಮುಖ್ಯಮಂತ್ರಿ * ಸಚಿವರ ಕಾರಿಗೆ ಮುತ್ತಿಗೆ
Last Updated 19 ನವೆಂಬರ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ‘ಬ್ಯಾಂಕ್‌ನವರ ಕಿರುಕುಳ ಸಾಕಾಗಿದೆ. ನಮ್ಮ ಮೇಲೆಯೇ ಕಾರು ಹತ್ತಿಸಿಕೊಂಡು ಹೋಗಿ. ಇಲ್ಲಿಯೇ ಸಾಯಲು ಸಿದ್ಧರಾಗಿಯೇ ಬಂದಿದ್ದೇವೆ’ ಎಂದು ಏರುಧ್ವನಿಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಅವರನ್ನು ತರಾಟೆಗೆ ತೆಗೆದುಕೊಂಡ ರೈತರು, ಅವರ ಕಾರಿಗೆ ಮುತ್ತಿಗೆ ಹಾಕಿದರು.

ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ರೈತ ಮಹಿಳೆ ಬಗೆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರ ಹೇಳಿಕೆ ಹಾಗೂ ನಾಲ್ಕೂವರೆ ತಿಂಗಳಾದರೂ ರೈತರ ಸಾಲಮನ್ನಾ ಮಾಡದಿರುವುದನ್ನು ಖಂಡಿಸಿ ರೈತರು, ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು.

ಹಸಿರು ಶಾಲುಗಳನ್ನು ಬೀಸುತ್ತ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ರೈತರು, ‘ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಎಚ್‌.ಡಿ.ಕುಮಾರಸ್ವಾಮಿ, 15 ದಿನದೊಳಗೆ ಸಾಲಮನ್ನಾ ಮಾಡುವ ಭರವಸೆ ನೀಡಿದ್ದರು. ನಾಲ್ಕೂವರೆ ತಿಂಗಳಾದರೂ ಸಾಲಮನ್ನಾ ಮಾಡಿಲ್ಲ. ಕೊಟ್ಟ ಮಾತು ತಪ್ಪಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಗಂಟೆಯೊಳಗೆ ಇಲ್ಲಿಗೆ ಬರಬೇಕು’ ಎಂದು ರೈತರು ಪಟ್ಟು ಹಿಡಿದಿದ್ದರು. ಮುಖ್ಯಮಂತ್ರಿ ಪರವಾಗಿ ಸಚಿವ ಬಂಡೆಪ್ಪ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಮನವಿ ಸ್ವೀಕರಿಸಿ ವಾಪಸ್‌ ವಿಧಾನಸೌಧಕ್ಕೆ ಹೊರಟಿದ್ದಾಗಲೇ ರೈತರು, ಅವರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು.

ಪೊಲೀಸರ ಮನವೊಲಿಕೆಗೂ ಸ್ಪಂದಿಸದ ರೈತರು, ಕಾರು ಎದುರೇ ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು, ರೈತರನ್ನೆಲ್ಲ ಚದುರಿಸಿ ಕಾರಿಗೆ ದಾರಿ ಮಾಡಿಕೊಟ್ಟರು. ಕಾರಿನ ಹಿಂದೆಯೇ ಓಡಿದ ಕೆಲ ರೈತರು, ಮಣ್ಣು ತೂರಿ ಸಚಿವರಿಗೆ ಶಾಪ ಹಾಕಿದರು.

‘ಚುನಾವಣೆ ಬಂದಾಗ ಮತ ಕೇಳಲು ಮನೆಗೆ ಬಂದಿದ್ದ ಈ ಸಚಿವ, ಈಗ ನಮ್ಮ ಮೇಲೆಯೇ ಪೊಲೀಸರನ್ನು ಬಿಟ್ಟಿದ್ದಾನೆ. ಮುಂದಿನ ಚುನಾವಣೆಗೆ ಮತ ಕೇಳಲು ಬರಲಿ, ಅವಾಗ ನೋಡಿಕೊಳ್ಳುತ್ತೇವೆ. ರೈತರ ಕಷ್ಟಕ್ಕೆ ಸ್ಪಂದಿಸದ ಈ ಸಚಿವರ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರಿಯಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನಸೌಧ ಮುತ್ತಿಗೆ ವಿಫಲ: ರಾಜ್ಯದ ಎಲ್ಲ ಜಿಲ್ಲೆಗಳಿಂದ ನಗರಕ್ಕೆ ಬಂದಿದ್ದ ರೈತರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮೆಜೆಸ್ಟಿಕ್‌ನಿಂದ ಶೇಷಾದ್ರಿ ರಸ್ತೆ ಮೂಲಕ ಹೊರಟಿದ್ದರು.ಸ್ವಾತಂತ್ರ್ಯ ಉದ್ಯಾನದ ಎದುರೇ ಅವರನ್ನು ಪೊಲೀಸರು ತಡೆದರು. ಉದ್ಯಾನದ ಅಕ್ಕ–ಪಕ್ಕದ ರಸ್ತೆಯಲ್ಲೇ ಕುಳಿತುಕೊಂಡು ರೈತರು ಪ್ರತಿಭಟನೆ ಆರಂಭಿಸಿದರು.

‘ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲೀ ಪಾಟೀಲ್, ರಾಜ್ಯ ಘಟಕದ ಅಧ್ಯಕ್ಷ ಕೆ.ಟಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜೈರಾಮ್ಪ್ರತಿಭಟನೆಯಲ್ಲಿ ಇದ್ದರು.

ರಾಜ್ಯದ ರೈತ ಮಹಿಳೆಯರಿಗೆಲ್ಲ ಅವಮಾನ

‘ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅವರು ಒಬ್ಬ ರೈತ ಮಹಿಳೆಗೆ ಅವಮಾನ ಮಾಡಿಲ್ಲ, ರಾಜ್ಯದ ಎಲ್ಲ ರೈತ ಮಹಿಳೆಯರಿಗೂ ಅವಮಾನ ಮಾಡಿದ್ದಾರೆ’ ಎಂದು ಚಾಮರಸ ಮಾಲೀ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರಮುಖ ಬೇಡಿಕೆಗಳು

* ಕಬ್ಬಿನ ಬಾಕಿ ಹಣವನ್ನು ರೈತರಿಗೆ ಕೊಡಿಸಬೇಕು. ಕಬ್ಬಿನ ದರವನ್ನು ಟನ್‌ಗೆ ₹3,500 ನಿಗದಿ ಮಾಡಬೇಕು

* ಕಬ್ಬು ಬೆಳೆಗಾರರ ವಿರುದ್ಧ ಹೂಡಿರುವ ಪ್ರಕರಣಗಳನ್ನು ಹಿಂಪಡೆಯಬೇಕು

* ಬ್ಯಾಂಕ್‌ನವರ ಕಿರುಕುಳ ತಡೆಯಬೇಕು

* ಬರಗಾಲಪೀಡಿತ ಪ್ರದೇಶದ ಕೃಷಿಕರ ಕುಟುಂಬಕ್ಕೆ ₹10 ಸಾವಿರ ಮಾಸಿಕ ಜೀವನ ಭತ್ಯೆ ನೀಡಬೇಕು. ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಘೋಷಿಸಬೇಕು

* ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನಗಳನ್ನು ಕೊಳ್ಳಲು ಖರೀದಿ ಕೇಂದ್ರ ತೆರೆಯಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT