ಶನಿವಾರ, ಏಪ್ರಿಲ್ 1, 2023
25 °C

ಮೂಲದ ತುಲನೆಯಲ್ಲಿ ಮಂಕು ಹಿಡಿದ ‘99’

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ನಾವು ನೋಡಿದ ಚಿತ್ರ

ಚಿತ್ರ: 99 (ಕನ್ನಡ)
ನಿರ್ಮಾಣ: ರಾಮು
ನಿರ್ದೇಶನ: ಪ್ರೀತಮ್‌ ಗುಬ್ಬಿ
ತಾರಾಗಣ: ಗಣೇಶ್, ಭಾವನಾ ಮೆನನ್, ಸಮೀಕ್ಷಾ, ಹೇಮಂತ್, ರವಿಶಂಕರ್

ದಶಕಕ್ಕೊಂದಾದರೂ ರೊಮ್ಯಾಂಟಿಕ್ ಸಿನಿಮಾ ಇನ್ನಿಲ್ಲದಂತೆ ಭಾರತೀಯ ಚಿತ್ರರಂಗದಲ್ಲಿ ಜನಪ್ರಿಯವಾಗುತ್ತದೆ. ಹೋದವರ್ಷ ತಮಿಳಿನಲ್ಲಿ ತೆರೆಕಂಡ ‘96’ ಅಂಥದ್ದೇ ಸಿನಿಮಾ. ಎರಡು ದಶಕಗಳ ಹಿಂದೆ ಯಾವ್ಯಾವುದೋ ಪರಿಸ್ಥಿತಿಯಿಂದ ಬೇರೆಯಾದ ಎರಡು ಪುಟ್ಟ ಹೃದಯಗಳು ಬದಲಾದ ಕಾಲಘಟ್ಟದಲ್ಲಿ ಮತ್ತೆ ಮುಖಾಮುಖಿಯಾಗಿ, ನೆನಪಿನ ಅಲೆ ಎಬ್ಬಿಸಿಕೊಂಡು ‘ವಿರಹದಲ್ಲಿ ಪ್ರೀತಿ ಜಾಸ್ತಿ’ ಎಂಬ ಕವಿವಾಣಿಯನ್ನು ನೆನಪಿಸುವಂತೆ ಕಾಡಿದ್ದ ಸಿನಿಮಾ ಅದು. ಅದೇ ಸಿನಿಮಾವನ್ನು ಪ್ರೀತಂ ಗುಬ್ಬಿ ‘99’ ಆಗಿಸಿದ್ದಾರೆ.

ರೀಮೇಕ್‌ ಸಿನಿಮಾ ನೋಡಿದಾಗ ಸಹಜವಾಗಿಯೇ ಮೂಲ ಚಿತ್ರದೊಟ್ಟಿಗೆ ಮನಸ್ಸು ತುಲನೆಗೆ ಇಳಿಯುತ್ತದೆ. ವಿಜಯ್‌ ಸೇತುಪತಿ–ತ್ರಿಷಾ, ಗೌರಿ–ಆದಿತ್ಯಾ ಜೋಡಿಗಳ ಎರಡು ಹಂತಗಳ ಹದವರಿತ ಪ್ರೇಮಾಭಿನಯ ತಮಿಳು ಸಿನಿಮಾದ ಜೀವಾಳ. ಮೇಲಾಗಿ ಸಂಗೀತ ಇಡೀ ಚಿತ್ರದ ಆತ್ಮದಲ್ಲೊಂದು ನಾದದಲೆ ಎಬ್ಬಿಸಿತ್ತು. ಕನ್ನಡದಲ್ಲಿ ಗಣೇಶ್, ಭಾವನಾ ಇಬ್ಬರೂ ಅಭಿನಯಕ್ಕೆ ನ್ಯಾಯ ಸಲ್ಲಿಸಿದ್ದಾರಾದರೂ, ಆತ್ಮದಲ್ಲಿ ಆ ನಾದದಲೆ ಇಲ್ಲವಾಗಿದೆ. ಮೂಲ ಸಿನಿಮಾದ ಅವಧಿಗೆ ಹೋಲಿಸಿದರೆ ಕನ್ನಡದ್ದು ಅರ್ಧ ಗಂಟೆಯಷ್ಟು ಕಡಿಮೆ. ಭಾವುಕತೆಯ ಹೆಣಿಗೆಗೆ ಕಾಣ್ಕೆ ನೀಡಿದ್ದ ಅಲ್ಲಿನ ಅನೇಕ ಸಣ್ಣ–ಪುಟ್ಟ ವಿವರಗಳು ಇಲ್ಲಿ ಮಾಯವಾಗಿರಲಿಕ್ಕೆ ಅದೂ ಕಾರಣ.

ತಮಿಳು ಚಿತ್ರದಲ್ಲಿ ಸಹನೀಯ ಸಾವಧಾನವಿದೆ. ಭಾವಗೀತಾತ್ಮಕವಾದ ಹಾಡುಗಳಿವೆ ಹಾಗೂ ಆ ಹಾಡುಗಳನ್ನು ತುಳುಕಿಸುವ ನಾಯಕಿಯು ತನ್ನ ಕಣ್ಣಭಾಷೆ, ಕಕ್ಕುಲತೆಗಳೊಂದಿಗೆ ಒಪ್ಪಿತ ಮೆಲೋಡ್ರಾಮಾಗಳ ಸಮೇತ ಎದೆಯೊಳಗೆ ಇಳಿದುಬಿಡುತ್ತಾಳೆ. ಇದರಲ್ಲಿ ಅರ್ಜುನ್ ಜನ್ಯ ಮಟ್ಟು ಹಾಕಿರುವ ಹಾಡುಗಳು ಸ್ವತಂತ್ರವಾಗಿ ಹೃದ್ಯವಾಗಿ ಇವೆಯಾದರೂ, ಒಟ್ಟಂದದಲ್ಲಿ ಸಂಗೀತ ಸಿನಿಮಾದ ಪಾತ್ರವಾಗಿಲ್ಲ. ನಾಯಕಿಯ ವಸ್ತ್ರ, ಆಕೆಯ ನಿಲುವು, ಕದಲಿಕೆಗಳು ಎಲ್ಲವನ್ನೂ ನಿರ್ದೇಶಕರು ಅನಾಮತ್ತಾಗಿ ಎತ್ತುಕೊಂಡು ಬಂದಿರುವುದು ತಂತಾನೇ ಅವರಿಗೆ ಮಿತಿಯೊಂದನ್ನು ಹೇರಿಬಿಟ್ಟಿದೆ. ನಾಯಕನಿಗೆ ಅಂಟಿಸಿರುವ ಗಡ್ಡದಲ್ಲೂ ಅಸಹಜತೆಯ ನೆರಳು.

ತಮ್ಮತನದ ಅಭಿನಯ ಸಾಮರ್ಥ್ಯವನ್ನು ಗಣೇಶ್ ಇಲ್ಲಿ ಹತ್ತಿಕ್ಕಿದ್ದಾರೆ. ಅವರ ತಲೆಯನ್ನು ವಿಜಯ್ ಸೇತುಪತಿ ನಟನೆಯ ಮಾದರಿ ಕೊರೆದಿರುವುದಕ್ಕೆ ಕುರುಹುಗಳು ಸಿಕ್ಕರೂ, ಅನುಕರಿಸಲು ಹೋಗಿಲ್ಲವೆನ್ನುವುದು ಹೆಗ್ಗಳಿಕೆ. ಭಾವನಾ ನಯನಾಭಿನಯಕ್ಕೆ ಮಾತಿನ ಗಟ್ಟಿತನ ಬೇಕಿತ್ತೆನ್ನಿಸುತ್ತದೆ. ಪ್ರೌಢ ಹಾಗೂ ತಾರುಣ್ಯದ ರಾಮ್–ಜಾನು ಜೋಡಿಯಾಗಿ ಹೇಮಂತ್–ಸಮೀಕ್ಷಾ ಮೂಲ ಸಿನಿಮಾದ ತುಲನೆಯಲ್ಲಿ ವಿಪರೀತ ಕೆಳಗೆ ಉಳಿದುಬಿಡುತ್ತಾರೆ. ನಿರ್ದೇಶಕರು ಆ ಸೂಕ್ಷ್ಮವನ್ನು ಹಿಡಿಯುವಲ್ಲಿ ದಯನೀಯವಾಗಿ ಸೋತಿದ್ದಾರೆ.

ಸಂತೋಷ್‌ ರೈ ಪಾತಾಜೆ ಸಿನಿಮಾಟೊಗ್ರಾಫಿಯಲ್ಲಿ ಸೃಜನಶೀಲತೆಯ ಪಸೆ ಉಳಿಸಿದ್ದಾರೆ. ‘96’ ಸಿನಿಮಾ ಶುರುವಾಗುವುದು ದಟ್ಟ ದೃಶ್ಯಕಾವ್ಯಗಳ ಹಾಡಿನೊಂದಿಗೆ. ‘99’ನಲ್ಲಿ ಅಂಥ ಹಾಡೊಂದನ್ನು ಮೂಡಿಸಲು ಆಗದೇ ಇರುವುದು ಕೂಡ ಮಿತಿಯ ಮುನ್ನುಡಿಯಂತೆ ಭಾಸವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು