ಜಾಹೀರಾತು ಫಲಕದ ಚೌಕಟ್ಟು ತೆರವು: ಡಿ.ಕೆ.ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲು

7
ನೋಟಿಸ್‌ಗೆ ಸ್ಪಂದಿಸದ ಸಚಿವ: ಬಿಬಿಎಂಪಿ ಅಧಿಕಾರಿಯಿಂದ ದೂರು

ಜಾಹೀರಾತು ಫಲಕದ ಚೌಕಟ್ಟು ತೆರವು: ಡಿ.ಕೆ.ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲು

Published:
Updated:

ಬೆಂಗಳೂರು: ಜಾಹೀರಾತು ಫಲಕ ಅಳವಡಿಕೆಗೆ ಬಳಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದ ಸಂಬಂಧ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ರಸ್ತೆಯ ಪಂತರಪಾಳ್ಯದ ಬಳಿ ಸಚಿವ ಶಿವಕುಮಾರ್‌ ಅವರಿಗೆ ಸೇರಿದ ಜಾಗದಲ್ಲಿರುವ ಲೋಹದ ಚೌಕಟ್ಟು ತೆರವುಗೊಳಿಸದ ಬಗ್ಗೆ ಆರ್‌.ಆರ್‌.ನಗರ ಉಪವಿಭಾಗ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್‌ ಅವರು ಪೊಲೀಸ್‌ ಠಾಣೆಗೆ ಸೆ. 24ರಂದು  ದೂರು ನೀಡಿದ್ದರು.

ಜಾಹೀರಾತು ಫಲಕಗಳಿಂದಾಗಿ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಹೈಕೋರ್ಟ್‌ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಬಳಿಕ ನಗರದಲ್ಲಿ ಅನಧಿಕೃತವಾಗಿ ಜಾಹೀರಾತು ಫಲಕಗಳನ್ನು ಅಳವಡಿಸುವುದನ್ನು ಪಾಲಿಕೆ ನಿಷೇಧಿಸಿತ್ತು. ಬಿಬಿಎಂಪಿ ಆಯುಕ್ತರು ಎಲ್ಲ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್‌ಗಳನ್ನು ತೆರವುಗೊಳಿಸುವಂತೆ ಆಗಸ್ಟ್‌ 12ರಂದು ಸಾರ್ವಜನಿಕ ಪ್ರಕಟಣೆ ನೀಡಿದ್ದರು. ಇದರ ಬೆನ್ನಲ್ಲೇ ಪಾಲಿಕೆ ಅಧಿಕಾರಿಗಳು ಜಾಹೀರಾತು ಫಲಕ, ಹೋರ್ಡಿಂಗ್‌ ಹಾಗೂ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದರು.

ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ ಬಳಿಕವೂ ಕೆಲವೆಡೆ ಲೋಹದ ಚೌಕಟ್ಟುಗಳು ಹಾಗೆಯೇ ಉಳಿದಿದ್ದವು. ಇವುಗಳನ್ನು ಆಯಾ ಜಾಗದ ಮಾಲೀಕರೇ ಆಗಸ್ಟ್‌ 30ರ ಒಳಗೆ ತೆಗೆಯಿಸಬೇಕು ಎಂದು ಆಯುಕ್ತರು ಆಗಸ್ಟ್‌ 13 ರಂದು ಹಾಗೂ 15ರಂದು ಸಾರ್ವಜನಿಕ ಪ್ರಕಟಣೆ ನೀಡಿದ್ದರು. ಈ ಗಡುವು ಮುಗಿದ ಬಳಿಕವೂ ಕೆಲವರು ಲೋಹದ ಚೌಕಟ್ಟು ತೆಗೆಸಿರಲಿಲ್ಲ. ಮತ್ತೊಮ್ಮೆ ಕಾಲಾವಕಾಶ ನೀಡಿದ್ದ ಪಾಲಿಕೆ, ಸೆ. 6ರ ಒಳಗೆ ತೆರವುಗೊಳಿಸುವಂತೆ ಸೂಚಿಸಿತ್ತು.

‘ಜಾಗದ (ಸ್ವತ್ತು ಸಂಖ್ಯೆ 219/20 ಎ/23) ಮಾಲೀಕರಾದ ಶಿವಕುಮಾರ್‌ ಅವರಿಗೆ ನೋಟಿಸ್‌ ನೀಡಿದ ಬಳಿಕವೂ ಜಾಹೀರಾತು ಫಲಕ ಅಳವಡಿಸಿದ್ದ ಲೋಹದ ಚೌಕಟ್ಟು ತೆರವುಗೊಳಿಸದೆ ನಗರದ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಎಆರ್‌ಒ ಮುತ್ತುರಾಜ್‌ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !