ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘19 ಮಾಲ್‌ಗಳಲ್ಲಿ ಸುರಕ್ಷತಾ ಕ್ರಮಗಳಿಲ್ಲ’

Last Updated 2 ಸೆಪ್ಟೆಂಬರ್ 2018, 20:18 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿರುವ 19 ಶಾಪಿಂಗ್‌ ಮಾಲ್‌ಗಳಲ್ಲಿ, ಬೆಂಕಿ ಅವಘಡ ತಡೆಗೆ ಯಾವುದೇ ಸುರಕ್ಷತಾ ಕ್ರಮಗಳಿಲ್ಲ. ಮುಂದಿನ ಮೂರು ದಿನಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಆ ಮಾಲ್‌ಗಳಿಗೆ ನೋಟಿಸ್‌ ನೀಡಲಾಗಿದೆ’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಎಡಿಜಿಪಿ ಸುನೀಲ್ ಅಗರವಾಲ್‌ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಂಕಿ ಅವಘಡ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆಈ ಹಿಂದೆಯೇ ಮಾಲ್‌ಗಳ ಆಡಳಿತ ಮಂಡಳಿಗಳಿಗೆ ಸೂಚನೆ ನೀಡಲಾಗಿತ್ತು. ಆ ಬಗ್ಗೆ ಪರಿಶೀಲನೆಗೆಂದು 50 ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ 44 ಶಾಪಿಂಗ್ ಮಾಲ್‌ಗಳಲ್ಲಿ ಶನಿವಾರ ಹಾಗೂ ಭಾನುವಾರ ಕಾರ್ಯಾಚರಣೆ ನಡೆಸಲಾಯಿತು’ ಎಂದರು.

‘ರಾಷ್ಟ್ರೀಯ ಕಟ್ಟಡ ನೀತಿ (ಎನ್‌ಬಿಸಿ) ಪ್ರಕಾರ,ಕಟ್ಟಡ ನಿರ್ಮಾಣದ ವೇಳೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, 19 ಮಾಲ್‌ಗಳಲ್ಲಿ ಅಂಥ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆಕಸ್ಮಾತ್ ಬೆಂಕಿ ಅವಘಡ ಸಂಭವಿಸಿದರೆ, ಆ ಮಾಲ್‌ಗಳಲ್ಲಿ ಅಪಾಯದ ಪ್ರಮಾಣ ಹೆಚ್ಚು’ ಎಂದು ಅವರು ಹೇಳಿದರು.

‘ನೋಟಿಸ್ ತಲುಪಿದ ಬಳಿಕವೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದರೆ, ಮಾಲ್‌ಗಳ ವಿದ್ಯುತ್ ಹಾಗೂ ನೀರಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರಿಗೆ ಪತ್ರ ಬರೆಯಲಾಗುವುದು’ ಎಂದರು.

ಕ್ರಿಮಿನಲ್ ಮೊಕದ್ದಮೆ: ಇಲಾಖೆಯು ಜಾರಿಗೊಳಿಸಿರುವ ನಿಯಮಗಳನ್ನು ಕಟ್ಟಡಗಳ ಮಾಲೀಕರು ಪದೇ ಪದೇ ಉಲ್ಲಂಘಿಸುತ್ತಿದ್ದಾರೆ. ನೋಟಿಸ್‌ ನೀಡಿದರೂ ಸ್ಪಂದಿಸುತ್ತಿಲ್ಲ. ಅಂಥ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಚಿಂತನ ನಡೆಸಲಾಗುತ್ತಿದೆ’ ಎಂದು ಸುನೀಲ್ ತಿಳಿಸಿದರು.

**

ನೋಟಿಸ್ ನೀಡಲಾದ ಮಾಲ್‌ಗಳು

ಬೆಂಗಳೂರು: ಜಾಲಹಳ್ಳಿಯ ರಾಕ್‌ಲೈನ್ ಮಾಲ್, ಯಶವಂತಪುರದ ವೈಷ್ಣವಿ, ಹುಳಿಮಾವಿನ ವಿಗಾ ಸಿಟಿ, ರಾಯಲ್ ಮೀನಾಕ್ಷಿ, ರಾಜಾಜಿನಗರದ ಗೋಲ್ಡನ್ ಹೈಟ್ಸ್‌, ಜಿ.ಟಿ.ಮಾಲ್, ಸರ್ಜಾಪುರದ ಮೋರ್, ಬೆಂಗಳೂರು ಸೆಂಟ್ರಲ್ ಮಾಲ್, ಬ್ರ್ಯಾಂಡ್ ಫ್ಯಾಕ್ಟರಿ, ಕನಕಪುರ ರಸ್ತೆಯ ರಿಲಯನ್ಸ್, ಹಲಸೂರಿನ ಲಿಂಡೊ ಮಾಲ್, ಮೆಜೆಸ್ಟಿಕ್‌ನ ಪೋತಿಸ್, ಥಣಿಸಂದ್ರದ ಎಲಿಮೆಂಟ್, ವೈಟ್‌ಫೀಲ್ಡ್‌ನ ಇರೋಬಿಟ್, ಎಲೆಕ್ಟ್ರಾನಿಕ್ ಸಿಟಿಯ ಡಿ–ಮಾರ್ಟ್‌, ಮೈಸೂರು ರಸ್ತೆಯ ಇಟಿಎ ಮಾಲ್

ಕಲಬುರ್ಗಿ: ಏಷಿಯನ್ ಮಾಲ್‌, ಸಿಟಿ ಸೆಂಟರ್ ಮಾಲ್

ಬೆಳಗಾವಿ: ನ್ಯೂಕ್ಲಿಯರ್ಸ್‌ ಮಾಲ್

**

ಎನ್‌ಬಿಸಿ ಪ್ರಮುಖ ನಿಯಮಗಳು

*ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು

* ಕಟ್ಟಡ ಸುತ್ತ ಅಗ್ನಿನಂದಕ ವಾಹನ ಓಡಾಡುವಷ್ಟು ಜಾಗ ಬಿಡಬೇಕು

* ಚಾವಣಿ–ನೆಲ ಅಂತಸ್ತಿನಲ್ಲಿ ನೀರಿನ ಟ್ಯಾಂಕ್ ಇಡಬೇಕು

* ನೆಲ ಅಂತಸ್ತನ್ನು ವಾಹನ ನಿಲುಗಡೆಗೆ ಮಾತ್ರ ಬಳಸಬೇಕು

* ಕಡ್ಡಾಯವಾಗಿ ಒಬ್ಬ ಅಗ್ನಿ ಸುರಕ್ಷತಾ ಅಧಿಕಾರಿ ಇರಬೇಕು

* ನೀರು ಕೊಳವೆ, ಎಲೆಕ್ಟ್ರಿಕ್ ಅಲಾರಂ ಸೇರಿ ಅಗ್ನಿ ನಂದಕ ಸಲಕರಣೆಗಳು ಕಡ್ಡಾಯ

* ಕನಿಷ್ಠ 2 ಕಡೆ ಮೆಟ್ಟಿಲು, ತುರ್ತು ಸಂದರ್ಭದಲ್ಲಿ ಬಳಸಲು ಲಿಫ್ಟ್ ಇರಬೇಕು

* ಅಗ್ನಿ ಸುರಕ್ಷತೆ ಬಗ್ಗೆ ಸಿಬ್ಬಂದಿಗೆ ಆಗಾಗ ಪ್ರಾತ್ಯಕ್ಷಿಕೆ ನೀಡಬೇಕು

* ನಿರ್ಗಮನ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತೆ ಇರಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT