ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾ ಜೆಡಿಎಸ್‌ನ ಹೊರೆ ಹೊತ್ತ ಮಹಿಳೆಗೆ ಮದುವೆ ಆಗೈತಾ?: ರೇವಣ್ಣ ಕಾಲೆಳೆದ ನೆಟ್ಟಿಗರು

ಸುಮಲತಾ ವಿರುದ್ಧದ ಹೇಳಿಕೆಗೆ ಗರಂ
Last Updated 9 ಮಾರ್ಚ್ 2019, 10:38 IST
ಅಕ್ಷರ ಗಾತ್ರ

ಬೆಂಗಳೂರು:‘ಗಂಡ ಸತ್ತು ಇನ್ನೂ ಒಂದೆರಡು ತಿಂಗಳಾಗಿಲ್ಲ. ಸುಮಲತಾ ಅವರಿಗೆ ರಾಜಕೀಯ ಯಾಕೆ ಬೇಕಿತ್ತು’ ಎಂದು ಹೇಳಿಕೆ ನೀಡಿದ್ದ ಸಚಿವ ರೇವಣ್ಣ ವಿರುದ್ಧ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಹಾಯ್ದಿದ್ದಾರೆ.

ತಮ್ಮ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು, ‘ಹಿಂದೂ ಸಂಸ್ಕೃತಿಯ ಪ್ರಕಾರ ಗಂಡ ಸತ್ತವರು ಕೆಲವು ದಿನಗಳವರೆಗೆ ಮನೆಯಿಂದ ಹೊರಗೆ ಬರಬಾರದು ಎಂಬ ನಿಯಮವಿದೆ. ಹಾಗಾಗಿ ಆ ರೀತಿಯ ಹೇಳಿಕೆ ನೀಡಿದ್ದೆ’ ಎಂದು ಸಮರ್ಥಿಸಿಕೊಂಡಿದ್ದರು. ಮಾತ್ರವಲ್ಲದೆ, ‘ನನ್ನ ಹೇಳಿಕೆಗೆ ತಪ್ಪು ಅರ್ಥ ಕಲ್ಪಿಸಬಾರದು.ಆ ಹೇಳಿಕೆ ನೀಡಿದ್ದಕ್ಕೆ ನಾನು ಕ್ಷಮೆ‌ ಕೇಳಲ್ಲ. ಕ್ಷಮೆ ಕೇಳೋಕೆ‌ ಹುಚ್ಚು ಹಿಡಿದಿದೆಯೇ’ ಎಂದೂ ಪ್ರಶ್ನಿಸಿದ್ದರು.

ಈ ಸುದ್ದಿಗಳು ಪ್ರಕಟವಾಗುತ್ತಿದ್ದಂತೆರೇವಣ್ಣ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಪೋಸ್ಟ್‌ಗಳು ಹರಿದಾಡುತ್ತಿವೆ.

‘ಸುಮಲತಾ ಅವರು ಮಂಡ್ಯದಲ್ಲಿ ಇನ್ನೂ ನಾಮಪತ್ರ ಸಲ್ಲಿಕೆ ಮಾಡಿಲ್ಲ. ಆಗಲೇ ದೇವೇಗೌಡರ ಮಕ್ಕಳು ವಿಲ ವಿಲ ಒದ್ದಾಡುತ್ತಿದ್ದಾರೆ. ಒಂದು ಹೆಣ್ಣಿಗೆ ಹೆದರಿದ ಕುಟುಂಬ’ ಎಂದು ಸಿಂಗೋನ ಹಳ್ಳಿ ಉಮೇಶ್‌ ಗೌಡ ಎನ್ನುವವರು ವ್ಯಂಗ್ಯವಾಡಿದ್ದಾರೆ.

ಪ್ರೀತಿ ನಾಗರಾಜ್‌ ಅವರು, ‘ಸಾ ಜೆಡಿಎಸ್‌ನ ಹೊರೆ ಹೊತ್ತ ಮಹಿಳೆಗೆ ಮದುವೆ ಆಗೈತಾ?’. ‘ಗಂಡ ಸತ್ತು ಎಷ್ಟ್‌ ದಿನ ಆದ್ಮೇಲೆ ಎಲೆಕ್ಷನ್ನಿಗೆ ನಿಂತ್ಕೊಬೋದು ಸೊಮೇ?’ ಎಂದು ಕಿಚಾಯಿಸಿದ್ದಾರೆ. ಇನ್ನೂ ಕೆಲವರು ‘ಸೀತಾರಾಮ ಕಲ್ಯಾಣ ಸಿನಿಮಾ ಮಕಾಡೆ ಮಲಗಿ ತಿಂಗಳೂ ಆಗಿಲ್ಲ. ಈಗಲೇ ರಾಜಕೀಯ ಬೇಕಿತ್ತಾ’ ಎಂದು ರೇವಣ್ಣ ಭಾಷೆಯಲ್ಲೇ ತಿರುಗೇಟು ನೀಡಿದ್ದಾರೆ.

ಜಯಂತಿ ಪಾಟೀಲ್‌ ಎನ್ನುವವರು, ‘ಅನಾಗರೀಕತೆ ಅಂದ್ರೆ ಇದು!! ಸುಮಲತಾ ಅವರೂ ಸೇರಿದಂತೆ ಇದನ್ನು ಎಲ್ರೂ ಖಂಡಿಸಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಅಧಿಕಾರ, ದುಡ್ಡು, ಗೆಲುವಿನ ಮದ ಹೀಗೆಲ್ಲಾ ಮಾತನಾಡಿಸುತ್ತದೆ. ಒಂದು ಹೆಜ್ಜೆ ಹೊರಗಿಡಲು ಮುಹೂರ್ತ ನೋಡುವ, ದೇವರ ಪೂಜೆ ಹೋಮ ಹವನ ಎನ್ನುವ ಈ ಮನುಷ್ಯನಿಗೆ ಒಂಚೂರೂ ಸಂಸ್ಕಾರ ಇಲ್ಲದಿರುವುದು ಖೇದಕರ. ಚುನಾವಣಾ ಸಮಯದಲ್ಲಿ ಜನರೇ ಸಂಸ್ಕಾರ ಕಲಿಸಬೇಕು. ಬರೀ 37 ಸೀಟಿಗೆ ಹೀಗೆಲ್ಲಾ ಆಡೋ ಇವರಿಗೆ ಪೂರ್ಣ ಅಧಿಕಾರ ಸಿಕ್ಕರೆ ಕರ್ನಾಟಕವನ್ನು ದೇವರೇ ಕಾಪಾಡಬೇಕು. ಸಕ್ಕರೆ ನಾಡಿನ ಅಕ್ಕರೆಯ ಜನರೇ, ಚೆಂಡು ಈಗ ನಿಮ್ಮ ಅಂಗಳದಲ್ಲಿದೆ. ಸಂಸ್ಕಾರವಂತರು ಬೇಕಾ, ಸಂಸ್ಕಾರಹೀನರು ಬೇಕಾ?’ ಎಂದು ಹರಿಶ್‌ ಮೇಗಳಮನೆ ಎನ್ನುವವರು ಅಭಿಪ್ರಾಯ ಪಟ್ಟಿದ್ದಾರೆ.

‘ಮಹಿಳಾ ದಿನಾಚರಣೆಯಂದು ನೀವು ನೀಡಿದ ಹೇಳಿಕೆಗೆ ನನ್ನ ಧಿಕ್ಕಾರವಿರಲಿ. ನಿಮ್ಮ ಹೇಳಿಕೆಗಳೇಸುಮಲತಾ ಅವರ ಗೆಲುವಿನ ಅಂತರವನ್ನು ಹೆಚ್ಚಿಸುತ್ತವೆ.ಅವರ(ಸುಮಲತಾ) ಗೆಲುವು ನಿಶ್ಚಿತ ಎಂದು ತಿಳಿದು, ಮಾನಸಿಕವಾಗಿ ಕುಗ್ಗಿಸಲು ಆಡುವ ನಿಮ್ಮ ಮಾತುಗಳು ಅವರನ್ನು ಇನ್ನಷ್ಟು ಗಟ್ಟಿಯಾಗಿಸುತ್ತವೆ’ ಎಂದು ಮಂಜು ಮದ್ದೂರ್‌ ಎನ್ನುವವರು ತಿರುಗೇಟು ನೀಡಿದ್ದಾರೆ.

‘ಇಲ್ಲಿಂದಲೇ ನಿಮ್ಮ(ಜೆಡಿಎಸ್‌) ಪತನ ಶುರುವಾಗಿದೆ’, ‘ಹಳೇ ಮೈಸೂರು ಭಾಗ ನಿಮ್ಮ ಆಸ್ತಿಯೇನಲ್ಲ’, ‘ಹಣ–ಅಧಿಕಾರದ ಮದ ಹೆಚ್ಚು ದಿನ ಉಳಿಯುವುದಿಲ್ಲ’, ‘ಹೆಂಡತಿ ಜೀವಂತವಾಗಿ ಇದ್ದಾಗಲೇ ಇನ್ನೊಂದು ಮದುವೆ ಆಗುವಂತೆ ಹಿಂದೂ ಸಂಸ್ಕೃತಿಯಲ್ಲಿ ಹೇಳಿದೆಯೇ?’, ‘ಶಾಸಕರ ಮಕ್ಕಳು ಶಾಸಕರೇ. ಮಂತ್ರಿಗಳ ಮಕ್ಕಳು ಮಂತ್ರಿಗಳೇ. ಕಾರ್ಯಕರ್ತರ ಮಕ್ಕಳು ಮಾತ್ರ ಕಾರ್ಯಕರ್ತರೇ’, ‘ಕಾರ್ಯಕರ್ತರಿಗೆ ಸಿನಿಮಾ ಟಿಕೆಟ್‌, ಕುಟುಂಬದವರಿಗೆ ಎಲೆಕ್ಷನ್‌ ಟಿಕೆಟ್‌. ಇದು ಜೆಡಿಎಸ್‌ ಭಾಗ್ಯ’.

ಜೆಡಿಎಸ್‌ ಹಾಗೂ ದೇವೇಗೌಡರ ಕುಟುಂಬದವರನ್ನು ಟೀಕಿಸುವ ಇಂತಹ ನೂರಾರು ಕಾಮೆಂಟ್‌ಗಳು ಹರಿದಾಡುತ್ತಿವೆ.

ಕ್ಷಮೆಯಾಚನೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಸಚಿವ ಎಚ್‌.ಡಿ.ರೇವಣ್ಣ ಹೇಳಿಕೆ ಸಂಕುಚಿತ ಮನಸ್ಸಿನಿಂದ ಹಾಗೂ ದ್ವೇಷದಿಂದ ಕೂಡಿದೆ. ಅವರು ಜನರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.

‘ಸಿನಿಮಾ ಟಿಕೆಟ್‌ ಮಾತ್ರ ಜನರಿಗೆ. ಸಂಸದ, ಶಾಸಕ, ವಿಧಾನ ಪರಿಷತ್‌ ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನ ತಮ್ಮ ಕುಟುಂಬಕ್ಕೆ ಮೀಸಲು’ ಎಂಬ ಸಿದ್ಧಾಂತವನ್ನು ಎಚ್.ಡಿ.ದೇವೇಗೌಡ ಕುಟುಂಬ ಹೊಂದಿದೆ. ಸುಮಲತಾ ಬೆಳೆಯಬಾರದು ಎಂದು ಈ ಹೇಳಿಕೆ ನೀಡಿದ್ದಾರೆ’ ಎಂದಿದ್ದಾರೆ.

ಗೌಡರು ರೇವಣ್ಣ ಕಿವಿ ಹಿಂಡಲಿ:ಎಲ್ಲರೂ ತಲೆ ತಗ್ಗಿಸುವಂತೆರೇವಣ್ಣ ಮಾತನಾಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್ ಹೇಳಿದ್ದಾರೆ.

ಅಂಬರೀಷ್‌ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ. ರೇವಣ್ಣಗೆ ಇದ್ದಾರೋ ಇಲ್ಲವೋ ಗೊತ್ತಿಲ್ಲ. ದೇವೇಗೌಡರು ತಮ್ಮ ಪುತ್ರ ರೇವಣ್ಣ ಅವರ ಕಿವಿ ಹಿಂಡಿ ಬುದ್ಧಿ ಹೇಳಲಿ ಎಂದು ಸಲಹೆ ನೀಡಿದ್ದಾರೆ.

‘ಗೌಡರು ರೇವಣ್ಣ ಕಿವಿ ಹಿಂಡಲಿ’:ಸುರೇಶ್‌ ಕುಮಾರ್

ಬೆಂಗಳೂರು: ರೇವಣ್ಣ ಆಡಿರುವ ಮಾತುಗಳು ಅವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ. ಎಲ್ಲರೂ ತಲೆ ತಗ್ಗಿಸುವಂತೆ ಮಾತನಾಡಿದ್ದಾರೆ ಎಂದು ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್ ಹೇಳಿದ್ದಾರೆ.

ಅಂಬರೀಷ್‌ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ. ರೇವಣ್ಣಗೆ ಇದ್ದಾರೋ ಇಲ್ಲವೋ ಗೊತ್ತಿಲ್ಲ. ದೇವೇಗೌಡರು ತಮ್ಮ ಪುತ್ರ ರೇವಣ್ಣ ಅವರ ಕಿವಿ ಹಿಂಡಿ ಬುದ್ಧಿ ಹೇಳಲಿ ಎಂದು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT