ಸೋಮವಾರ, ಆಗಸ್ಟ್ 26, 2019
20 °C

ಮಹಾರಾಷ್ಟ್ರದಲ್ಲಿ ಮಳೆ| ರಾಜ್ಯದ ನದಿಗಳಲ್ಲಿ ಪ್ರವಾಹ ಸ್ಥಿತಿ; ಅಪಾಯದಲ್ಲಿ 76ಗ್ರಾಮ

Published:
Updated:

ಬೆಳಗಾವಿ: ನೆರೆಯ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಹಾಗೂ ಅಲ್ಲಿನ ಜಲಾಶಯಗಳಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಕೃಷ್ಣಾ ಸೇರಿದಂತೆ ವಿವಿಧ ನದಿಗಳ ಪಾತ್ರದಲ್ಲಿರುವ ಚಿಕ್ಕೋಡಿ ವಿಭಾಗದ 76 ಗ್ರಾಮಗಳ ಜನರಿಗೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ.

ಚಿಕ್ಕೋಡಿ ಉಪ ವಿಭಾಗದ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲ್ಲೂಕಿನಲ್ಲಿ ಕೃಷ್ಣಾ, ದೂಧ್‌ಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳು ಅಪಾಯದ ಮಟ್ಟದ ಮೀರಿ ಹರಿಯುತ್ತಿವೆ. ಈ ನದಿಗಳ ತೀರದಲ್ಲಿರುವ 37 ಗ್ರಾಮಗಳು ತೀವ್ರವಾಗಿ ಬಾಧಿತಗೊಳ್ಳಲಿದ್ದು, ಅದೇ ರೀತಿ ಒಟ್ಟಾರೆ 39 ಗ್ರಾಮಗಳು ಭಾಗಶಃ ಬಾಧಿತಗೊಳ್ಳಲಿವೆ.

ತುರ್ತು ಸಂದರ್ಭದಲ್ಲಿ ನದಿ ತೀರದ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಹಾಗೂ ಪರಿಹಾರ (ಗಂಜಿ) ಕೇಂದ್ರಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ನದಿ ತೀರದ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಸಾಧ್ಯವಾದಷ್ಟು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಮುಳುಗಡೆಗೊಂಡಿರುವ ಸೇತುವೆಗಳನ್ನು ದಾಟುವ ಸಾಹಸಕ್ಕೆ ಮುಂದಾಗಬಾರದು. ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವಿ ಕರಲಿಂಗಣ್ಣವರ ಮನವಿ ಮಾಡಿಕೊಂಡಿದ್ದಾರೆ.

ತೀವ್ರ ಬಾಧಿತಗೊಳ್ಳುವ ಗ್ರಾಮಗಳು

ಚಿಕ್ಕೋಡಿ ತಾಲ್ಲೂಕು- ಕಲ್ಲೋಳ, ಯಡೂರ, ಇಂಗಳಿ, ಚಂದೂರ, ಮಾಂಜರಿ, ಬಾರವಾಡ ಹಾಗೂ ಹುನ್ನರಗಿ. ರಾಯಬಾಗ ತಾಲ್ಲೂಕು-ಹಳೇ ದಿಗ್ಗೇವಾಡಿ, ಗುಂಡವಾಡ, ಶಿರಗೂರ, ಖೇಮಲಾಪುರ, ಸಿದ್ದಾಪುರ. ಅಥಣಿ ತಾಲ್ಲೂಕು-ಮೊಳವಾಡ, ಕುಸನಾಳ, ಕೃಷ್ಣಾ ಕಿತ್ತೂರ, ಬಣಜವಾಡ, ತೀರ್ಥ, ನದಿಇಂಗಳಗಾಂವ, ದರೂರ, ಕವಟಕೊಪ್ಪ, ಶೇಗುಣಶಿ, ಹುಲಬಾಳಿ, ಅವರಖೋಡ, ನಾಗನೂರ ಪಿ.ಕೆ., ಸತ್ತಿ, ಮಹಿಷವಾಡಗಿ, ಜನವಾಡ, ಸವದಿ ದರ್ಗಾ, ಶಿರಹಟ್ಟಿ, ಕಾತ್ರಾಳ, ಝುಂಜರವಾಡ, ನಂದೇಶ್ವರ, ಸಪ್ತಸಾಗರ, ಮಂಗಾವತಿ, ಜುಗೂಳ, ಶಹಾಪುರ.

ಕೊಯ್ನಾ ಸುತ್ತಮುತ್ತ ಲಘು ಭೂಕಂಪ

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಕೊಯ್ನಾ ಜಲಾಶಯದ ಸುತ್ತಮುತ್ತ ಗುರುವಾರ ರಾತ್ರಿ ಲಘು ಭೂಕಂಪ ಸಂಭವಿಸಿರುವುದು ಗಡಿ ಪ್ರದೇಶಗಳ ಜನರಲ್ಲಿ ಆತಂಕ ಸೃಷ್ಟಿಸಿದೆ.

ಕೊಯ್ನಾ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ ಹೆಚ್ಚಿನ ನೀರು ಹರಿದುಬಂದಿದೆ. ಶೇ 80ರಷ್ಟು ಜಲಾಶಯ ಭರ್ತಿ ಆಗಿದೆ. ಇದೇ ಸಮಯದಲ್ಲಿ ಭೂಕಂಪ ಸಂಭವಿಸಿದ್ದರಿಂದ ಜಲಾಶಯದಿಂದ 3,000 ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿದೆ.

ಕೊಯ್ನಾ ಅಲ್ಲದೇ, ದಕ್ಷಿಣ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಮುಂದುವರಿದ ಪರಿಣಾಮವಾಗಿ ಕೃಷ್ಣಾ ನದಿಗೆ 1,96,007 ಕ್ಯುಸೆಕ್‌ ನೀರು ಸೇರ್ಪಡೆಯಾಗುತ್ತಿದೆ.

ಕೊಡಗಿನಲ್ಲಿ ಸಾಧಾರಣ ಮಳೆ

ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ನಾಪೋಕ್ಲು, ಸುಂಟಿಕೊಪ್ಪ, ಸಿದ್ದಾಪುರ ಹಾಗೂ ಮಡಿಕೇರಿ ಸುತ್ತಮುತ್ತ ಶುಕ್ರವಾರ ಸಾಧಾರಣ ಮಳೆ ಸುರಿದಿದೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಾದ್ಯಂತ ಸಾಧಾರಣ ಮಳೆಯಾಗಿದ್ದು, ಹಾನುಬಾಳು, ಹೆತ್ತೂರು, ಯಸಳೂರು ಹಾಗೂ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 35 ಮಿ.ಮೀ, ಬೆಳಗೋಡು ಹೋಬಳಿಯಲ್ಲಿ 20 ಮಿ.ಮೀ ಮಳೆಯಾಗಿದೆ.


ಶಕ್ತಿನಗರದ ಸಮೀಪದ ಕಾಡ್ಲೂರು ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ

ಕೃಷ್ಣಾ ಪ್ರವಾಹ: ಸೇತುವೆ, ದೇಗುಲ ಮುಳುಗಡೆ

ಶಕ್ತಿನಗರ/ಲಿಂಗಸುಗೂರು (ರಾಯಚೂರು ಜಿಲ್ಲೆ): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ನಾರಾಯಣಪುರ ಅಣೆಕಟ್ಟಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲಾಗುತ್ತಿದ್ದು ಗುರ್ಜಾಪುರ ಬ್ಯಾರೇಜ್ ಕಂ ಬ್ರಿಡ್ಜ್ (ಸೇತುವೆ) ಮುಳುಗಡೆ ಆಗುವ ಭೀತಿ ಎದುರಾಗಿದೆ. ಇನ್ನೂ ಒಂದೂವರೆ ಅಡಿ ನೀರು ಬಂದಲ್ಲಿ, ಸೇತುವೆ ಮುಳುಗಡೆಯಾಗಲಿದೆ. ಸಮೀಪದ ಕಾಡ್ಲೂರು ಗ್ರಾಮದ ಶ್ರೀ ಉಪೇಂದ್ರತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನ ಜಲಾವೃತವಾಗಿದೆ.

ನಾರಾಯಣಪುರ ಅಣೆಕಟ್ಟೆ ಕ್ರೆಸ್ಟ್‌ಗೇಟ್‌ಗಳಿಂದ ಹೆಚ್ಚುವರಿ 2.15 ಲಕ್ಷ ಕ್ಯುಸೆಕ್‌ ನೀರನ್ನು ಹರಿ ಬಿಡಲಾಗಿದ್ದು ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ.

‘ರಾಯಚೂರು ಜಿಲ್ಲೆಯ ಗಡಿ ಪ್ರದೇಶದಲ್ಲಿ ಪ್ರವಾಹ ಹೆಚ್ಚಿರುವ ಕಾರಣ ಜನರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ಲಿಂಗಸುಗೂರು, ದೇವದುರ್ಗ,ರಾಯಚೂರು ತಾಲ್ಲೂಕುಗಳ ಬಹುತೇಕ ನದಿ ಪಾತ್ರದ ಗ್ರಾಮಗಳು ಹಾಗೂ ನಡುಗಡ್ಡೆ ಪ್ರದೇಶಗಳಲ್ಲಿ ಜನರಿಗೆ ಸಮಸ್ಯೆ ಉಂಟಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಸಿ.ಬಿ. ವೇದಮೂರ್ತಿ ತಿಳಿಸಿದರು.

‘ನಡುಗಡ್ಡೆಗಳಲ್ಲಿ ಇರುವ ಜನರಿಗೆ ಅಗತ್ಯ ಪಡಿತರ ಮತ್ತು ಆರೋಗ್ಯ ಸಂಬಂಧಿ ವಸ್ತುಗಳ ಪೂರೈಕೆಗೆ ಜಿಲ್ಲಾ ಆಡಳಿತ ಕ್ರಮ ಕೈಗೊಂಡಿದೆ. ನದಿ ಪಾತ್ರದಲ್ಲಿ ತೆಪ್ಪ ಬಳಸಿ ನದಿ ದಾಟುವಂತಹ ಕಾರ್ಯಕ್ಕೆ ಕಡಿವಾಣ ಹಾಕಲಾಗಿದೆ. ಲಿಂಗಸುಗೂರು ತಾಲ್ಲೂಕು ತವದಗಡ್ಡಿ ಪ್ರದೇಶದ ಸಂತ್ರಸ್ತರು ಸುರಕ್ಷಿತವಾಗಿ ಶೀಲಹಳ್ಳಿಗೆ ಬಂದಿದ್ದಾರೆ‌‌’ ಎಂದರು. 

ಯಾದಗಿರಿ: ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗೆ ಹೊಂದಿಕೊಂಡು ಹೆಚ್ಚಿನ ಪ್ರಮಾಣದ ನೀರು ನದಿಗೆ ಹರಿದು ಬರುತ್ತಿರುವ ಕಾರಣ ಶುಕ್ರವಾರ ಮಧ್ಯಾಹ್ನ 3ರಿಂದ ಶಹಾಪುರ-ದೇವದುರ್ಗ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ. 

Post Comments (+)