ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಳ

ಉಕ್ಕಿ ಹರಿದಿ ತುಪರಿ ಹಳ್ಳ; ಧಾರವಾಡ ಸಂಪರ್ಕಿಸುವ ರಸ್ತೆ ಬಂದ್
Last Updated 8 ಸೆಪ್ಟೆಂಬರ್ 2019, 11:41 IST
ಅಕ್ಷರ ಗಾತ್ರ

ಬೆಳಗಾವಿ: ನೆರೆಯ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಅಲ್ಲಿನ ವಿವಿಧ ಜಲಾಶಯಗಳ ಮೂಲಕ ಕೃಷ್ಣಾ ಮತ್ತು ದೂಧ್‌ಗಂಗಾ ನದಿಗಳ ಮೂಲಕ ಭಾನುವಾರ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿಗೆ 1.80 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿದೆ. ಇದರಿಂದಾಗಿ, ಕೃಷ್ಣಾ ತೀರದಲ್ಲಿ ಪ್ರವಾಹದ ಭೀತಿ ಜಾಸ್ತಿಯಾಗಿದೆ.

ಮಹಾರಾಷ್ಟ್ರದ ಕೊಯ್ನಾ, ವಾರಣಾ, ಧೂಮ್‌, ಕನೇರ್ ಜಲಾಶಯಗಳಿಂದ 93,262 ಕ್ಯುಸೆಕ್‌, ರಾಧಾನಗರಿ ಮತ್ತಿತರ ಜಲಾಶಯಗಳಿಂದ 17ಸಾವಿರ, ಕಾಳಮ್ಮವಾಡಿ, ಪಾಟಗಾಂವ್‌ ಡ್ಯಾಂಗಳಿಂದ 15ಸಾವಿರ ಕ್ಯುಸೆಕ್‌ ನೀರು ಕೃಷ್ಣಾ ನದಿ ಸೇರುತ್ತಿದೆ. ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕಿನಲ್ಲಿ ಕೃಷ್ಣಾ, ದೂಧ್‌ಗಂಗಾ ಹಾಗೂ ವೇದಗಂಗಾ ನದಿಗಳಿಗೆ ಕಟ್ಟಿರುವ 6 ಸೇತುವೆಗಳು, ರಾಯಬಾಗ ತಾಲ್ಲೂಕಿನ ಕುಡಚಿ ಸೇತುವೆ ಮುಳುಗಡೆ ಸ್ಥಿತಿಯಲ್ಲಿಯೇ ಇವೆ. ದೂಧ್‌ಗಂಗಾ ಮತ್ತು ವೇದಗಂಗಾ ನದಿಗಳ ಒಳಹರಿವಿನಲ್ಲಿ ಏರಿಕೆ ದಾಖಲಾಗುತ್ತಿದೆ. ನದಿ ದಂಡೆಯ ಜನರು, ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ಚಿಕ್ಕೋಡಿ ಪರಿಸರದಲ್ಲೂ ಆಗಾಗ ಮಳೆಯಾಯಿತು.

ಮಲಪ್ರಭಾ (ನವಿಲುತೀರ್ಥ) ಜಲಾಶಯದಿಂದ 21,089 ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದಾಗಿ ರಾಮದುರ್ಗದ ಕಿಲಬನೂರು ಹಾಗೂ ನೇಕಾರಪೇಟೆ, ತಾಲ್ಲೂಕಿನ ಸುನ್ನಾಳ ಗ್ರಾಮ ಭಾಗಶಃ ಜಲಾವೃತವಾಗಿದೆ. ಚನ್ನಮ್ಮನ ಕಿತ್ತೂರು ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ಸವದತ್ತಿ ತಾಲ್ಲೂಕಿನ ಇನಾಮಹೊಂಗಲದ ಸಮೀಪದ ತುಪರಿ ಹಳ್ಳ ಉಕ್ಕಿ ಹರಿಯುತ್ತಿದ್ದು, ಧಾರವಾಡ ಸಂಪರ್ಕಿಸುವ ರಸ್ತೆ ಬಂದ್ ಆಗಿದೆ.

ಖಾನಾಪುರ ತಾಲ್ಲೂಕಿನ ಕಣಕುಂಬಿಯಲ್ಲಿ 22.9 ಸೆಂ.ಮೀ, ಲೋಂಡಾದಲ್ಲಿ 12 ಸೆಂ.ಮೀ. ಮತ್ತು ಜಾಂಬೋಟಿಯಲ್ಲಿ 11.1 ಸೆಂ.ಮೀ. ಮಳೆ ದಾಖಲಾಗಿದೆ. ಮಲಪ್ರಭಾ ನದಿ ಮೂಲಕ ಹರಿಯುವ ನೀರು ನವಿಲುತೀರ್ಥ ಜಲಾಶಯ ತಲುಪಲಿದೆ. ಹೀಗಾಗಿ, ಸೋಮವಾರ ಜಲಾಶಯದ ಹೊರಹರಿವು ಹೆಚ್ಚುವ ಸಾಧ್ಯತೆ ಇದೆ. ಕಣಕುಂಬಿಯಿಂದ ಎಂ.ಕೆ. ಹುಬ್ಬಳ್ಳಿವರೆಗಿನ 8 ಸೇತುವೆಗಳು ಜಲಾವೃತಗೊಂಡಿವೆ.

ಬೆಳಗಾವಿ, ಗೋಕಾಕ ನಗರದಲ್ಲಿ ಆಗಾಗ ಮಳೆ ಸುರಿಯಿತು. ಘಟಪ್ರಭಾ ಜಲಾಶಯದಿಂದ 25,930 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಇದರಿಂದಾಗಿ, ಗೋಕಾಕ ಹೊರವಲಯದ ಲೋಳಸೂರ ಸೇತುವೆ ಮತ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT