ಭಾನುವಾರ, ಮೇ 22, 2022
21 °C
ಆರೋಗ್ಯ ಸಚಿವರಿಗೂ ಬ್ಲ್ಯಾಕ್‌ಮೇಲ್

‘ಫೋಕಸ್‌’ ಎಂ.ಡಿ ಹೇಮಂತ್‌ಕುಮಾರ್ ಸಿಸಿಬಿ ಕಸ್ಟಡಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ಅವರಿಗೆ ಬ್ಲ್ಯಾಕ್‌ಮೇಲ್‌ ಮಾಡಿದ್ದ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವ ‘ಫೋಕಸ್‌’ ಸುದ್ದಿವಾಹಿನಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್‌ಕುಮಾರ್ ಕಮ್ಮಾರ, ಆರೋಗ್ಯ ಸಚಿವ ಶಿವಾನಂದ ಪಾಟೀಲರಿಗೂ ಬ್ಲ್ಯಾಕ್‌ಮೇಲ್ ಮಾಡಿದ್ದ ಸಂಗತಿ ಗೊತ್ತಾಗಿದೆ.

‘ಸಚಿವರು ಹಾಗೂ ಅವರ ಆಪ್ತ ಸಹಾಯಕರು, ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗಾವಣೆಗೆ ಲಂಚ ಪಡೆಯುತ್ತಿದ್ದಾರೆಂದು ಬಿಂಬಿಸುವ ರೀತಿಯಲ್ಲಿ ಹೇಮಂತ್‌ಕುಮಾರ್ ಆಡಿಯೊ ಸೃಷ್ಟಿಸಿದ್ದರು. ಅದನ್ನು ಆಪ್ತ ಸಹಾಯಕರಿಗೆ ಕಳುಹಿಸಿ ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ಸಚಿವರ ಆಪ್ತರೇ ನಮಗೆ ತಿಳಿಸಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಹೇಳಿದರು.

‘ಹೇಮಂತ್ ಬಂಧನದ ಸುದ್ದಿ ತಿಳಿದು ಸೋಮವಾರ ಕಚೇರಿಗೆ ಬಂದಿದ್ದ ಸಚಿವರ ಆಪ್ತರು, ಬ್ಲ್ಯಾಕ್‌ಮೇಲ್ ಬಗ್ಗೆ ಮಾಹಿತಿ ನೀಡಿದ್ದಾರೆ. ಯಶವಂತಪುರ ಠಾಣೆಗೆ ದೂರು ನೀಡುವಂತೆ ಹೇಳಿ ಕಳುಹಿಸಲಾಗಿದೆ. ಅಲ್ಲಿ ಎಫ್‌ಐಆರ್‌ ದಾಖಲಾದ ನಂತರ, ಪ್ರಕರಣವು ಸಿಸಿಬಿಗೆ ವರ್ಗವಾಗಲಿದೆ’ ಎಂದರು.

ಸಿಸಿಬಿ ಕಸ್ಟಡಿಗೆ: ಹೇಮಂತ್‌ ಕುಮಾರ್ ಅವರನ್ನು ಸೋಮವಾರ ಬೆಳಿಗ್ಗೆ ನಗರದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಐದು ದಿನಗಳವರೆಗೆ ಸಿಸಿಬಿ ಕಸ್ಟಡಿಗೆ ನೀಡಿತು.

ವಾಹಿನಿಗಾಗಿ ಸಾಲ: ‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ‘ಫೋಕಸ್‌’ ಸುದ್ದಿವಾಹಿನಿ ಆರಂಭಿಸಿದ್ದೆ. ಈಗ ಒಂದೂವರೆ ಕೋಟಿ ಸಾಲ ನನ್ನ ತಲೆ ಮೇಲಿದೆ. ಸ್ವಂತ ಕಾರು ಮಾರಾಟ ಮಾಡಿ, ‘ಬಾಡಿಗೆ ಕಾರಿನಲ್ಲಿ ಓಡಾಡುತ್ತಿದ್ದೇನೆ’ ಎಂದು ಆರೋಪಿ ಹೇಮಂತ್‌ ಹೇಳಿಕೆ ನೀಡಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು