ನಿಖರ ತನಿಖೆಗೆ ತಂತ್ರಾಂಶ ಬಳಕೆ: ಸಿ.ಎಂ

7
ಕರ್ನಾಟಕ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯದ ಸುವರ್ಣ ಮಹೋತ್ಸವ

ನಿಖರ ತನಿಖೆಗೆ ತಂತ್ರಾಂಶ ಬಳಕೆ: ಸಿ.ಎಂ

Published:
Updated:
Prajavani

ಬೆಂಗಳೂರು: ‘ಲೋಪಗಳನ್ನು ಕಡಿಮೆಗೊಳಿಸಿ, ತನಿಖೆಗಳು ನಿಖರವಾಗಿ ಮತ್ತು ಪಾರದರ್ಶಕವಾಗಿ ನಡೆಯುವಂತಾಗಲು ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಫೊರೆನ್ಸಿಕ್‌ ಸೈನ್ಸ್‌ ಲ್ಯಾಬ್‌) ಆಧುನಿಕ ತಂತ್ರಾಂಶಗಳ ಬಳಕೆಯನ್ನು ಹೆಚ್ಚಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ವಿಧಿ ವಿಜ್ಞಾನ ವಿಭಾಗ ಶೋಧಿಸಿದ ಪುರಾವೆಗಳು ನ್ಯಾಯಾಲಯದ ತೀರ್ಪುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವಿಭಾಗದಲ್ಲಿ ಒಬ್ಬರು ಸಮರ್ಥರಿದ್ದರೆ ಸಾಲದು. ಇಡೀ ತಂಡದ ಶ್ರಮದಿಂದ ಪ್ರಕರಣಗಳು ಭೇದಿಸಲ್ಪಡುತ್ತವೆ’ ಎಂದರು. 

ಕರ್ನಾಟಕ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಗಳ ನಿರ್ದೇಶನಾಲಯದ ಸುವರ್ಣ ಮಹೋತ್ಸವದ ನೆನಪಿನಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ವಿಧಿ ವಿಜ್ಞಾನದಲ್ಲಿನ ಇತ್ತೀಚಿನ ಬೆಳವಣಿಗೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. 

‘ನಿಮ್ಮಲ್ಲಿನ ಅನುಮಾನ ಗುಣ, ಕುತೂಹಲ ಮತ್ತು ಕಲಿಯುವ ಹಂಬಲ ಕಡಿಮೆ ಆಗದಂತೆ ನೋಡಿಕೊಳ್ಳಿ’ ಎಂದು ರಾಜ್ಯದ ವಿವಿಧ ಪ್ರಯೋಗಾಲಯಗಳಿಂದ ಬಂದಿದ್ದ ಇಲಾಖಾ ಸಿಬ್ಬಂದಿ ಹಾಗೂ ವಿಧಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಗೃಹ ಸಚಿವ ಎಂ.ಬಿ.ಪಾಟೀಲ, ‘ತನಿಖೆಗೆ ಅಪಾರ ಮಾಹಿತಿ ಒದಗಿಸುವ ಈ ನಿರ್ದೇಶನಾಲಯವು ಇಲಾಖೆಯ ಬೆನ್ನೆಲುಬು. ಅಗತ್ಯ ಮೂಲಸೌಕರ್ಯ ಮತ್ತು ತಾಂತ್ರಿಕ ನೆರವನ್ನು ನೀಡಿ ಈ ವಿಭಾಗದ ಪ್ರತಿ ಹಂತದ ಪ್ರಕ್ರಿಯೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ನಾಂದೆಡ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 2013ರಲ್ಲಿ ಅಗ್ನಿ ಅವಘಡ ಸಂಭವಿಸಿದಾಗ 23 ಸುಟ್ಟ ಶವಗಳ ಸ್ಪಷ್ಟ ಗುರುತನ್ನು ಪತ್ತೆ ಹಚ್ಚುವಲ್ಲಿ, ಬೆಂಗಳೂರಿನಲ್ಲಿ 2008ರಲ್ಲಿ ನಡೆದ ಸರಣಿ ಸ್ಫೋಟಗಳು, 2013ರಲ್ಲಿ ಮಲ್ಲೇಶ್ವರದಲ್ಲಿ ಮತ್ತು 2014ರಲ್ಲಿ ಚರ್ಚ್‌ ಸ್ಟ್ರೀಟ್‌ನಲ್ಲಿ ನಡೆದ ಸ್ಫೋಟ ಪ್ರಕರಣಗಳನ್ನು ಭೇದಿಸುವಲ್ಲಿ ವಿಧಿ ವಿಜ್ಞಾನ ತಂಡದ ಶ್ರಮ ಹೆಚ್ಚಿದೆ. ಈ ವಿಜ್ಞಾನದ ಸಿಬ್ಬಂದಿಯ ಸಹಕಾರದಿಂದಲೇ ಗೌರಿ ಲಂಕೇಶ್‌ ಮತ್ತು ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಗಳ ತನಿಖೆ ತ್ವರಿತವಾಗಿ ನಡೆಯುತ್ತಿದೆ’ ಎಂದು ಡಿಜಿ–ಐಜಿಪಿ ಎನ್‌.ನೀಲಮಣಿ ರಾಜು ನೆನಪಿಸಿದರು.

‘ನಿರ್ದೇಶನಾಲಯದ ಕೇಂದ್ರ ಪ್ರಯೋಗಾಲಯವನ್ನು ₹30 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಪ್ರತಿ ಜಿಲ್ಲಾ ಕೇಂದ್ರದಲ್ಲೂ ಸೈಬರ್‌ ಲ್ಯಾಬ್‌ ತೆರೆಯಲಾಗುತ್ತಿದೆ’ ಎಂದು ತಿಳಿಸಿದರು.

***

ವಿಧಿ ವಿಜ್ಞಾನದಿಂದ ಪ್ರಕರಣಗಳು ಭೇದಿಸಿ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾದಷ್ಟು, ಪೊಲೀಸರ ಶಸ್ತ್ರಾಸ್ತ್ರಗಳಿಗೆ ಕೆಲಸ ಕಡಿಮೆ ಆಗುತ್ತದೆ.

-ಎಂ.ಬಿ.ಪಾಟೀಲ, ಗೃಹ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !