ಗುರುವಾರ , ಮಾರ್ಚ್ 4, 2021
29 °C
ಅರಣ್ಯ ಹಕ್ಕುಪತ್ರ ಕೋರಿ ಸಲ್ಲಿಸಿದ ಅರ್ಜಿ ಪುರಸ್ಕರಿಸುವಂತೆ ಬೃಹತ್ ಪ್ರತಿಭಟನೆ

12ರಂದು ‘ಬೆಂಗಳೂರು ಚಲೋ’ಗೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರಗಳನ್ನು ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಫೆ.12ರಂದು ‘ಬೆಂಗಳೂರು ಚಲೋ’ ಹಮ್ಮಿಕೊಳ್ಳಲು ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ತೀರ್ಮಾನಿಸಿದೆ.

ಜಿಲ್ಲೆಯಲ್ಲಿ ಹಕ್ಕುಪತ್ರ ಕೋರಿ ಸಲ್ಲಿಸಲಾಗಿದ್ದ 91 ಸಾವಿರ ಅರ್ಜಿಗಳ ಪೈಕಿ ಕಳೆದ ವರ್ಷ ಡಿಸೆಂಬರ್‌ ಕೊನೆಯವರೆಗೆ 65,220 ತಿರಸ್ಕೃತವಾಗಿವೆ. ಇದರ ವಿರುದ್ಧ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕುಗಳ ಸಾವಿರಾರು ಒತ್ತುವರಿದಾರರು ಭಾಗವಹಿಸಿದ್ದರು. 

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯಕ, ‘ಮೂರು ತಲೆಮಾರು ಹಿಂದಿನ ವಾಸ್ತವ್ಯದ ದಾಖಲೆಗಳನ್ನು ಕೊಡಲಿಲ್ಲ ಎಂದು ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಆದರೆ, ನಿರ್ದಿಷ್ಟ ದಾಖಲೆಗಳಿಗೆ ಒತ್ತಾಯಿಸುವಂತಿಲ್ಲ. ಮೂರು ದಶಕಗಳಿಂದ ಜನವಸತಿ ಇರುವುದನ್ನು ಸಾಬೀತುಪಡಿಸಿದರೆ ಸಾಕು ಎಂದು ವೀರಪ್ಪ ಮೊಯಿಲಿ ನೇತೃತ್ವದ ರಾಜ್ಯ ಸರ್ಕಾರ ತಿಳಿಸಿತ್ತು’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಅತಿಕ್ರಮಣದಾರರಿಗೆ ಹಕ್ಕುಪತ್ರ ಕೊಡುವ ವಿಚಾರ ಪ್ರತಿಬಾರಿ ಚುನಾವಣೆಯ ಸಂದರ್ಭದಲ್ಲಿ ರಾಜಕಾರಣಿಗಳಿಗೆ ನೆನಪಾಗುತ್ತದೆ. ಆದರೆ, ನಂತರ ಈ ವಿಷಯ ಅವರಿಗೆ ಬೇಡದ ಕೂಸಾಗುತ್ತದೆ. ನಾವು ಅವರಿಗೆ ಬೇಡ ಎಂದಾದರೆ ನಮಗೂ ಅವರು ಬೇಡ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ನಾವು ಯಾಕೆ ಬಹಿಷ್ಕರಿಸಬಾರದು’ ಎಂದು ಪ್ರಶ್ನಿಸಿದರು.

‘ಈ ವಿಚಾರದಲ್ಲಿ ವಿಧಾನಸಭೆ ಅಧಿವೇಶನದಲ್ಲಿ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಜನಪ್ರತಿನಿಧಿಗಳ ಮನೆಗಳ ಮುಂದೆ ಧರಣಿ ಕೂರುತ್ತೇವೆ. ಸರ್ಕಾರಕ್ಕೆ ಇದು ಕೊನೆಯ ಎಚ್ಚರಿಕೆ’ ಎಂದರು.

ಸಿದ್ದಾಪುರ ತಾಲ್ಲೂಕು ಪಂಚಾಯ್ತಿ ಸದಸ್ಯ ನಸೀರ್ ಖಾನ್ ಮಾತನಾಡಿ, ‘ಹತ್ತಾರು ವರ್ಷಗಳಿಂದ ನಾವು ವಾಸವಿರುವ ಜಾಗಕ್ಕೆ ಹಕ್ಕುಪತ್ರ ಪಡೆದುಕೊಳ್ಳಲು ನಮ್ಮ ಮರಣಪತ್ರ ಕೊಡುವುದು ಮಾತ್ರ ಬಾಕಿಯಿದೆ. ಒಂದುವೇಳೆ, ಹಕ್ಕುಪತ್ರ ಕೊಡುತ್ತಾರೆ ಎಂದಾದರೆ ಅದನ್ನೂ ನಾವು ಕೊಡಲು ಸಿದ್ಧರಿದ್ದೇವೆ. ನಾವಲ್ಲದಿದ್ದರೂ ನಮ್ಮ ಮಕ್ಕಳಾದರೂ ನೆಮ್ಮದಿಯಿಂದ ಜೀವನ ನಡೆಸಬಹುದು’ ಎಂದು ಬೇಸರದಿಂದ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.