ಗುರುವಾರ , ನವೆಂಬರ್ 21, 2019
22 °C
ಎಚ್‌ಆರ್‌ಪಿ ಹೆಸರಲ್ಲಿ ಡೀಮ್ಡ್‌ ಅರಣ್ಯ ಅಕ್ರಮ ಭೂಮಿ ಮಂಜೂರು: ನೆಡುತೋಪುಗಳ ಅಕ್ರಮ ಕಡಿತ

ಅರಣ್ಯ ಅಧಿಕಾರಿಗಳ ವಿರುದ್ಧ ದೋಷಾರೋಪ‍ ಪಟ್ಟಿಗೆ ಸೂಚನೆ

Published:
Updated:

ಸಕಲೇಶಪುರ: ಹೇಮಾವತಿ ಜಲಾಶಯ ಯೋಜನೆ (ಎಚ್‌ಆರ್‌ಪಿ) ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಅಕ್ರಮ ಭೂಮಿ ಮಂಜೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ದೋಷಾರೋಪ ಪ‍ಟ್ಟಿ ಸಲ್ಲಿಸುವಂತೆ ಅರಣ್ಯ, ಪರಿಸರ ಮತ್ತು ಜೀವಿ ವಿಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದಾವೆ ಆದೇಶಿಸಿದ್ದಾರೆ.

ತಾಲ್ಲೂಕಿನ ಬ್ಯಾಗಡಹಳ್ಳಿ ಗ್ರಾಮದ ಸರ್ವೆ ನಂ.38ರಲ್ಲಿನ ಅರಣ್ಯ ಪ್ರದೇಶವನ್ನು ಎಚ್‌ಆರ್‌ಪಿ ಮಂಜೂರಾತಿ ಹೆಸರಿನಲ್ಲಿ ಅಕ್ರಮವಾಗಿ ಪರಭಾರೆ ಮಾಡಿ, ಅದರಲ್ಲಿದ್ದ ಮರಗಳನ್ನು ಕಾನೂನು ಬಾಹಿರವಾಗಿ ಕಡಿಯಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ವಿಚಾರದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಚಿಕ್ಕಮಗಳೂರು ವಿಭಾಗೀಯ ವ್ಯವಸ್ಥಾಪಕರಾಗಿದ್ದ ಭಾಸ್ಕರ್‌ ರಾವ್‌ ಮತ್ತು ಹಾಸನ ಘಟಕದ ನೆಡುತೋಪು ಅಧೀಕ್ಷಕರಾಗಿದ್ದ ಮೊಗಣ್ಣಗೌಡ ಲೋಪ ಎಸಗಿರುವುದು ಕಂಡು ಬಂದಿದೆ.

ಏನು ಲೋಪ?: ಸರ್ವೆ ನಂ.38ರ ಜಮೀನಿನಲ್ಲಿ ಇರುವ ಮರಗಳ ಎಣಿಕೆ ಮಾಡಿ ಪಟ್ಟಿ ತಯಾರಿಸದೆ ಒಟ್ಟು ಪ್ರದೇಶದ ಗುರುತಿನೊಂದಿಗೆ ಮರಗಳನ್ನು ಎಣಿಕೆ ಮಾಡಿರುವುದು. ಮರ ಮುಟ್ಟುಗಳ ಮೌಲ್ಯವನ್ನು ಚಾಲ್ತಿ ಸಾಲಿನ ದರದಂತೆ ನಿಗದಿಪಡಿಸದೆ ಹಿಂದಿನ ಸಾಲಿನ ದರ ಅನ್ವಯಿಸಿರುವುದು. ಜೊತೆಗೆ ಮೌಲ್ಯದ ತೆರಿಗೆ ಬಗ್ಗೆ ಪ್ರಸ್ತಾಪಿಸದೆ ಇರುವುದು. ಈ ಮರಗಳನ್ನು ಮೆದು ಮರ, ನಾಟ ಮತ್ತು ಉರುವಲು ಕಟ್ಟಿಗೆ ಎಂದು ವರ್ಗೀಕರಣ ಮಾಡದೆ ಎಲ್ಲಾ ಮರಗಳನ್ನು ಉರುವಲು ಸೌದೆ ಎಂದು ಪರಿಗಣಿಸುವ ಮೂಲಕ ಈ ಅಧಿಕಾರಿಗಳು ಕಾನೂನು ಬಾಹಿರ ಕೃತ್ಯ ಎಸಗಿದ್ದಾರೆ ಎಂಬುದನ್ನು ಇಲಾಖೆಯ ವಿಚಾರಣಾ ವರದಿಯಲ್ಲಿ ಹೇಳಲಾಗಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ ಉಲ್ಲಂಘಿಸಿರುವ ಈ ಅಧಿಕಾರಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುವಂತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ.

ಭೂಮಿ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 19 ರಲ್ಲಿಯೇ ಅಂದಿನ ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮಂಜುನಾಥ್‌ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಆದೇಶ ನೀಡಲಾಗಿತ್ತು. ಇದಾಗಿ 8 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗೊತ್ತಾಗಿದೆ.

‘ಮಂಜುನಾಥ್‌ ವಿರುದ್ಧ ದೋಷಾರೋಪ ಪಟ್ಟಿಯನ್ನು ಒಂದು ತಿಂಗಳ ಹಿಂದೆಯೇ ಸಿಸಿಎಫ್‌ಗೆ ಕಳಿಸಲಾಗಿದೆ. ಸಿಸಿಎಫ್‌ ಸ್ಥಾನದಲ್ಲಿ ಯಾರೂ ಇರಲಿಲ್ಲ. ಇದೀಗ ಚಿಕ್ಕಮಗಳೂರು ಸಿಸಿಎಫ್‌ಗೆ ಹಾಸನದ ಸಿಸಿಎಫ್‌ ಜವಾಬ್ದಾರಿಯನ್ನೂ ನೀಡಲಾಗಿದೆ. ಈ ಸಂಬಂಧ ಅವರು ಶೀಘ್ರದಲ್ಲಿ ವರದಿ ಸಲ್ಲಿಸುವ ಸಾಧ್ಯತೆ ಇದೆ’ ಎಂದು ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದರು.

ಪ್ರತಿಕ್ರಿಯಿಸಿ (+)